ನವದೆಹಲಿ, ಮಾರ್ಚ್ 29: ಕಾಂಗ್ರೆಸ್ ಪಕ್ಷ 1,700 ಕೋಟಿ ರೂ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ (IT notice to congress party) ಮಾಡಿದೆ. 2017-18ರಿಂದ 2020-21ರ ಅಸೆಸ್ಮೆಂಟ್ ವರ್ಷಕ್ಕೆ ಬಾಕಿ ಉಳಿದಿರುವ ಆದಾಯ ತೆರಿಗೆ ಹಣ, ಅದಕ್ಕೆ ಬಡ್ಡಿ, ಹಾಗು ದಂಡ ಸೇರಿ ಒಟ್ಟು 1,700 ಕೋಟಿ ರೂ ಬರಬೇಕಿದೆ ಎಂದು ಈ ನೋಟೀಸ್ನಲ್ಲಿ ಐಟಿ ಇಲಾಖೆ ಹೇಳಿದೆ. ಟ್ಯಾಕ್ಸ್ ನೋಟೀಸ್ಗಳನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿನ್ನೆ ಗುರುವಾರ ತಿರಸ್ಕರಿಸಿತ್ತು. ಅದರ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ನೋಟೀಸ್ ನೀಡಿದೆ.
ಆದಾಯ ತೆರಿಗೆ ಇಲಾಖೆಯ ನೋಟೀಸ್ ಪ್ರಶ್ನಿಸಿ ತಾನು ಸಲ್ಲಿಸಿದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಆದಂತಾಗಿದೆ. ಉಚ್ಚ ನ್ಯಾಯಾಲಯದ ಅಭಿಪ್ರಾಯಕ್ಕೆ ಎದುರಾಗಿ ಸುಪ್ರೀಂಕೋರ್ಟ್ನ ಮೊರೆ ಬೀಳುವ ಸಾಧ್ಯತೆ ಇದೆ. ಲೋಕಸಭಾ ಚುನಾವಣೆ ಆರಂಭಕ್ಕೆ ದಿನಗಣನೆ ನಡೆದಿರುವಂತೆಯೇ ಕಾಂಗ್ರೆಸ್ಗೆ ಫಂಡಿಂಗ್ ಸಮಸ್ಯೆ ಎದುರಾಗಿದೆ. 200 ಕೋಟಿ ರೂ ಪೆನಾಲ್ಟಿ ಹಾಕಿರುವ ಐಟಿ ಇಲಾಖೆ ಕಾಂಗ್ರೆಸ್ನ ಕೆಲ ಬ್ಯಾಂಕ್ ಖಾತೆಗಳನ್ನು ಅಟ್ಯಾಚ್ ಮಾಡಿದೆ.
ಇದನ್ನೂ ಓದಿ: ಭಾರತದಲ್ಲಿ ಚುನಾವಣೆ ಸ್ಪರ್ಧಿಸಲು ಎಷ್ಟು ಹಣ ಬೇಕು? ನಿರ್ಮಲಾ ಹೇಳಿಕೆಯಿಂದ ಮೂಡಿದ ಪ್ರಶ್ನೆಗೆ ಇಲ್ಲಿದೆ ಉತ್ತರ
ದೆಹಲಿಯಲ್ಲಿರುವ ಕಾಂಗ್ರೆಸ್ ಪಕ್ಷದ ಕೆಲ ಬ್ಯಾಂಕ್ ಖಾತೆಗಳಿಂದ ಐಟಿ ಇಲಾಖೆ 135 ಕೋಟಿ ರೂ ಹಣವನ್ನು ವಿತ್ಡ್ರಾ ಮಾಡಿತ್ತು. 2018-19ರ ಅಸೆಸ್ಮೆಂಟ್ ವರ್ಷದ ತೆರಿಗೆ ಬಾಕಿ ಮತ್ತು ಬಡ್ಡಿ ಹಣ ಅದಾಗಿತ್ತು. ಈ ಬೆಳವಣಿಗೆಯು ಕಾಂಗ್ರೆಸ್ ಪಕ್ಷದ ನಾಯಕರನ್ನು ಆಕ್ರೋಶಕ್ಕೆ ಕೆಡವಿದೆ.
ತನ್ನ ಬ್ಯಾಂಕ್ ಖಾತೆಗಳನ್ನು ಐಟಿ ಇಲಾಖೆ ಮುಟ್ಟುಗೋಲು ಹಾಕಿದೆ. ಹಣ ತೆಗೆಯಲು ಅಗುತ್ತಿಲ್ಲ ಎಂದು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಆರೋಪ ಮಾಡಿ ಅದಕ್ಕೆ ಆಡಳಿತಾರೂಢ ಬಿಜೆಪಿಯನ್ನು ದೂಷಿಸಿತ್ತು. ಅಕೌಂಟ್ ಮುಟ್ಟುಗೋಲು ಹಾಕಿಕೊಂಡಿರುವ ಕ್ರಮವು ಪ್ರಜಾತಂತ್ರ ವ್ಯವಸ್ಥೆ ಮೆಲೆ ನಡೆದ ಆಕ್ರಮಣ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಇದನ್ನೂ ಓದಿ: ಕಾರು ಇಲ್ಲ; ₹ 700 ಕೋಟಿ ಮೌಲ್ಯದ ಆಸ್ತಿ ಘೋಷಿಸಿದ ಕಮಲ್ ನಾಥ್ ಪುತ್ರ ನಕುಲ್ ನಾಥ್
ಆದರೆ, ಪೆನಾಲ್ಟಿ ಹಣ ಬಿಟ್ಟು ಕಾಂಗ್ರೆಸ್ ಪಕ್ಷ ತನ್ನ ಬ್ಯಾಂಕ್ ಖಾತೆಗಳಿಂದ ಎಷ್ಟು ಬೇಕಾದರೂ ಹಣ ಪಡೆಯಲು ಅಡ್ಡಿ ಇಲ್ಲ. ಕಾಂಗ್ರೆಸ್ ಬೇಕಂತಲೇ ವಿಷಯ ತಿರುಚುತ್ತಿದೆ ಎಂಬುದು ಬಿಜೆಪಿಯ ಸ್ಪಷ್ಟನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ