ಪ್ರಧಾನಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತಿದ್ದಾರೆ; ಚೀನಾ, ಕೊರಿಯಾದಲ್ಲಿ ಮೋದಿ ಮಾಡಿದ ಭಾಷಣ ನೆನಪಿಸಿದ ಮಲ್ಲಿಕಾರ್ಜುನ ಖರ್ಗೆ
Mallikarjun Kharge ನಾವು ಅದಾನಿ ಷೇರುಗಳ ವಿಚಾರದಲ್ಲಿ ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿದ್ದೇವೆ. ನಾವು ಈ ವಿಷಯವನ್ನು ಪ್ರಸ್ತಾಪಿಸಿದಾಗ, ಮೈಕ್‌ಗಳು ಸ್ವಿಚ್ ಆಫ್ ಆಗುತ್ತವೆ. ಸದನದಲ್ಲಿ ಗದ್ದಲವುಂಟಾಗುತ್ತದೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಖರ್ಗೆ ಹೇಳಿದ್ದಾರೆ.
ಲಂಡನ್‌ನಲ್ಲಿ ರಾಹುಲ್ ಗಾಂಧಿ (Rahul Gandhi) ಹೇಳಿದ ಮಾತಿಗೆ ಕ್ಷಮೆಯಾಚಿಸಬೇಕು ಎಂದು ಬಿಜೆಪಿ (BJP) ಸಂಸದರು ಸಂಸತ್ನಲ್ಲಿ ಒತ್ತಾಯಿಸಿದ್ದಕ್ಕೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಸೋಮವಾರ ಆಡಳಿತರೂಢ ಪಕ್ಷ ವಿರುದ್ದ ಹರಿಹಾಯ್ದಿದ್ದಾರೆ. ಇದರ ನಂತರ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸಂಸದರ ನಡುವೆ ತೀರ ವಾಗ್ದಾಳಿ ನಡೆದಿದೆ. ಪ್ರಜಾಪ್ರಭುತ್ವವನ್ನು ನಾಶಪಡಿಸುವವರು ಅದನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಸರ್ವಾಧಿಕಾರಿಯಂತೆ ಸರ್ಕಾರವನ್ನು ನಡೆಸುತ್ತಿದ್ದಾರೆ. ಬಿಜೆಪಿ ದೇಶದ ಹೆಮ್ಮೆ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಮಾತನಾಡುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.ಸಂಸತ್ನಲ್ಲಿ ಬಜೆಟ್ ಅಧಿವೇಶನದ ಎರಡನೇ ಭಾಗ ಇಂದು ಆರಂಭವಾಗಿದೆ.
ನಾವು ಅದಾನಿ ಷೇರುಗಳ ವಿಚಾರದಲ್ಲಿ ಜೆಪಿಸಿ ತನಿಖೆಗೆ ಒತ್ತಾಯಿಸುತ್ತಿದ್ದೇವೆ. ನಾವು ಈ ವಿಷಯವನ್ನು ಪ್ರಸ್ತಾಪಿಸಿದಾಗ, ಮೈಕ್‌ಗಳು ಸ್ವಿಚ್ ಆಫ್ ಆಗುತ್ತವೆ. ಸದನದಲ್ಲಿ ಗದ್ದಲವುಂಟಾಗುತ್ತದೆ ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕ ಖರ್ಗೆ ಹೇಳಿದ್ದಾರೆ. ರಾಹುಲ್ ಜಿ ಪ್ರಜಾಪ್ರಭುತ್ವದ ಬಗ್ಗೆ ಏನೇ ಹೇಳಿದ್ದರೂ ಅದನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದು ನಿಯಮಗಳ ಪ್ರಕಾರ ತಪ್ಪು ಎಂದು ಖರ್ಗೆ ಹೇಳಿದ್ದಾರೆ.
.@narendramodi ji
I want to remind you of your statement made in China.
You said –
“Earlier, you felt ashamed of being born Indian. Now you feel proud to represent the country”
Was this not an insult to India and Indians?
Tell your Ministers to refresh their memories!
1/2
— Mallikarjun Kharge (@kharge) March 13, 2023
ಸಂಸತ್ ಕಲಾಪ ಆರಂಭವಾದ ಕೆಲವೇ ಸಮಯದ ನಂತರ, ಪ್ರತಿಪಕ್ಷ ನಾಯಕರು ಸದನದ ಬಾವಿಗೆ ಧಾವಿಸಿ ಗದ್ದಲಕ್ಕೆ ಕಾರಣವಾದ ನಂತರ ಲೋಕಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ರಾಜ್ಯಸಭೆಯನ್ನೂ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಕೆಳಮನೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಖಂಡಿಸಿದ್ದಾರೆ.
ಪ್ರತಿಪಕ್ಷಗಳ ಸಂಸದರ ಪ್ರತಿಭಟನೆಯಿಂದ ಕೋಲಾಹಲ ಸೃಷ್ಟಿಯಾದ ಕಾರಣ ಸ್ಪೀಕರ್ ಜಗದೀಪ್ ಧನ್ಖರ್ ರಾಜ್ಯಸಭೆಯನ್ನು ಮುಂದೂಡಿದರು. ವಿದೇಶಿ ನೆಲದಲ್ಲಿ ಮೋದಿಯವರ ಹೇಳಿಕೆಯನ್ನು ನೆನಪಿಸಿದ ಖರ್ಗೆ ನರೇಂದ್ರ ಮೋದಿ ಜೀ ನೀವು ಚೀನಾದಲ್ಲಿ ಹೇಳಿದ ಹೇಳಿಕೆಯನ್ನು ನಿಮಗೆ ನೆನಪಿಸಲು ಬಯಸುತ್ತೇನೆ.- ‘ಮೊದಲು ನೀವು ಭಾರತೀಯನಾಗಿ ಹುಟ್ಟಿದ್ದಕ್ಕೆ ನಾಚಿಕೆಪಡುತ್ತಿದ್ದಿರಿ. ಈಗ ನೀವು ದೇಶವನ್ನು ಪ್ರತಿನಿಧಿಸಲು ಹೆಮ್ಮೆ ಪಡುತ್ತೀರಿ ಎಂದು ನೀವು ಹೇಳಿದ್ದೀರಿ. ಇದು ಭಾರತ ಮತ್ತು ಭಾರತೀಯರಿಗೆ ಮಾಡಿದ ಅವಮಾನವಲ್ಲವೇ? ನಿಮ್ಮ ಮಂತ್ರಿಗಳಿಗೆ ಅವರ ನೆನಪುಗಳನ್ನು ರಿಫ್ರೆಶ್ ಮಾಡಲು ಹೇಳಿ! ಎಂದು ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ, ನೀವು ಹೀಗೆ ಹೇಳಿದ್ದೀರಿ ‘ಜನರು ತಮ್ಮ ಹಿಂದಿನ ಜನ್ಮದಲ್ಲಿ ಅವರು ಮಾಡಿದ ಪಾಪವು ಭಾರತದಲ್ಲಿ ಜನ್ಮ ಪಡೆಯಲು ಕಾರಣವಾಯಿತು ಎಂದು ಭಾವಿಸುವ ಸಮಯವಿತ್ತು, ಇದನ್ನು ನೀವು ಒಂದು ದೇಶ ಎಂದು ಕರೆಯುತ್ತೀರಿ. ಕಾಂಗ್ರೆಸ್ ಪಕ್ಷಕ್ಕೆ ಪಾಠ ಮಾಡುವ ಮೊದಲು ಮೊದಲು ‘ಸತ್ಯದ ಕನ್ನಡಿ’ ನೋಡಿ! ಎಂದು ಖರ್ಗೆ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಪ್ರಜಾಪ್ರಭುತ್ವವನ್ನು ಅವಮಾನಿಸಿದ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು: ಸಂಸತ್ನಲ್ಲಿ ಬಿಜೆಪಿ ಸಂಸದರ ಒತ್ತಾಯ
ಇದಕ್ಕೂ ಮೊದಲು ಮಾತನಾಡಿದ ಸಭಾನಾಯಕ ಪಿಯೂಷ್ ಗೋಯಲ್, ರಾಹುಲ್ ಗಾಂಧಿಯವರು ವಿದೇಶ ಪ್ರವಾಸದಲ್ಲಿ ದೇಶವನ್ನು ಕಳಪೆಯಾಗಿ ತೋರಿಸಲು ಪ್ರಯತ್ನಿಸಿದರು ಎಂದು ಆರೋಪಿಸಿದರು. ರಾಹುಲ್ ಗಾಂಧಿ ಸಂಸತ್ ಭವನಕ್ಕೆ ಬರಬೇಕು ಮತ್ತು ಸದನದ ಸದಸ್ಯರಿಗೆ ಮತ್ತು ಭಾರತದ ಜನರಿಗೆ ಕ್ಷಮೆಯಾಚಿಸಬೇಕು ಎಂದು ಗೋಯಲ್ ಒತ್ತಾಯಿಸಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ