ಕೊವ್ಯಾಕ್ಸಿನ್​ ಬಗ್ಗೆ ಕಾಂಗ್ರೆಸ್ ನಾಯಕರ ಅಪಸ್ವರ..; ಅಪಹಾಸ್ಯ, ರಾಜಕೀಯ ನಿಲ್ಲಿಸಿ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2021 | 8:03 PM

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸದ ಕೊವ್ಯಾಕ್ಸಿನ್​ಗೆ ಅನುಮತಿ ಕೊಟ್ಟಿದ್ದು ಎಷ್ಟು ಸರಿ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಕೊವ್ಯಾಕ್ಸಿನ್​ ಬಗ್ಗೆ ಕಾಂಗ್ರೆಸ್ ನಾಯಕರ ಅಪಸ್ವರ..; ಅಪಹಾಸ್ಯ, ರಾಜಕೀಯ ನಿಲ್ಲಿಸಿ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
ಶಶಿ ತರೂರ್​ ಮತ್ತು ಜೆ.ಪಿ.ನಡ್ಡಾ
Follow us on

ದೆಹಲಿ: ಭಾರತೀಯ ಪ್ರಧಾನ ಔಷಧ ನಿಯಂತ್ರಣಾ ಪ್ರಾಧಿಕಾರ ಕೊವ್ಯಾಕ್ಸಿನ್​ ಮತ್ತು ಕೊವಿಶೀಲ್ಡ್​ ಲಸಿಕೆಗಳ ತುರ್ತು ನಿರ್ಬಂಧಿತ ಬಳಕೆಗೆ ಅನುಮತಿ ನೀಡಿದ ಬೆನ್ನಲ್ಲೇ ಕೆಲವರು ಅಪಸ್ವರ ಎತ್ತಿದ್ದಾರೆ. ಅದರಲ್ಲೂ ಇನ್ನೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸದ ಕೊವ್ಯಾಕ್ಸಿನ್​ಗೆ ಅನುಮತಿ ಕೊಟ್ಟಿದ್ದು ಎಷ್ಟು ಸರಿ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಕೊವ್ಯಾಕ್ಸಿನ್ ಬಳಕೆಗೆ ಅಕಾಲಿಕವಾಗಿ, ಆತುರದಿಂದ ಒಪ್ಪಿಗೆ ನೀಡಲು ಕಾರಣವನ್ನು ವಿವರಿಸಿ ಎಂದು ಸರ್ಕಾರವನ್ನು ಕೇಳಿರುವ ಕಾಂಗ್ರೆಸ್ ನಾಯಕ, ಗೃಹ ವ್ಯವಹಾರಗಳ ಸಂಸದೀಯ ಸಮಿತಿಯ ಮುಖ್ಯಸ್ಥ ಆನಂದ್​ ಶರ್ಮಾ, ಮೂರನೇ ಹಂತದ ಪ್ರಯೋಗ ಮುಕ್ತವಾಗುವ ಮೊದಲೇ ಲಸಿಕೆಗೆ ಅನುಮೋದನೆ ನೀಡಿದ್ದಲ್ಲದೆ, ಕಡ್ಡಾಯ ಶಿಷ್ಟಾಚಾರಗಳು ಮತ್ತು ದತ್ತಾಂಶ ಪರಿಶೀಲನೆಯ ಮಾಹಿತಿಯನ್ನೂ ಬಿಡುಗಡೆ ಮಾಡಿದ್ದೇಕೆ ಎಂದೂ ಪ್ರಶ್ನೆ ಮಾಡಿದ್ದಾರೆ. ಸರ್ಕಾರದ ನಿರ್ಧಾರ ಅಚ್ಚರಿ ತಂದಿದೆ ಎಂದೂ ಹೇಳಿದ್ದಾರೆ.

ಇನ್ನು ಈ ಬಗ್ಗೆ ಟ್ವೀಟ್​ ಮಾಡಿರುವ ಶಶಿ ತರೂರ್​ ಅವರೂ ಸಹ ಕೊವ್ಯಾಕ್ಸಿನ್ ಲಸಿಕೆ ಬಳಕಗೆ ಅನುಮತಿ ನೀಡಿದ್ದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ​ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ಇನ್ನೂ ಮುಗಿದಿಲ್ಲ. ಅಕಾಲಿಕವಾಗಿ ಅನುಮತಿ ನೀಡಿದ್ದು, ಅಪಾಯ ಎದುರಾಗಬಹುದು. ಈ ಬಗ್ಗೆ ಆರೋಗ್ಯ ಸಚಿವ ಹರ್ಷವರ್ಧನ್​ ಸ್ಪಷ್ಟನೆ ಕೊಡಬೇಕು. ಅಲ್ಲದೆ, ಪ್ರಯೋಗದ ಹಂತಗಳು ಪೂರ್ಣಗೊಳ್ಳುವವರೆಗೂ ಬಳಸದೆ ಇರುವುದೇ ಉತ್ತಮ. ಇದರ ಬದಲು ಆಸ್ಟ್ರಾಜೆನಿಕಾ ಕೋವಿಶೀಲ್ಡ್ ಲಸಿಕೆಯನ್ನಷ್ಟೇ ಭಾರತದಲ್ಲಿ ಪ್ರಾರಂಭಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೇ, ಇನ್ನೋರ್ವ ಕಾಂಗ್ರೆಸ್ ನಾಯಕ ಜೈರಾಮ್​ ರಮೇಶ್​ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

ನಡ್ಡಾ ತಿರುಗೇಟು
ಕಾಂಗ್ರೆಸ್​ ನಾಯಕರ ಈ ಅಪಸ್ವರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿರುಗೇಟು ನೀಡಿದ್ದಾರೆ. ಪ್ರತಿಸಲವೂ ಭಾರತ ಏನಾದರೂ ಉತ್ತಮ ಸಾಧನೆ ಮಾಡಿದಾಗ, ಜನರಿಗೆ ಒಳ್ಳೆಯದನ್ನು ಮಾಡಿದಾಗ ಕಾಂಗ್ರೆಸ್ ಅಪಸ್ವರ ಎತ್ತುತ್ತದೆ. ಅಪಹಾಸ್ಯ ಮಾಡುತ್ತದೆ. ಇದು ಹಿಂದೆ ಕೂಡ ಎಷ್ಟೋ ಬಾರಿ ನೋಡಿದ್ದೇವೆ. ಇದೀಗ ಕೊವಿಡ್​-19 ಲಸಿಕೆ ವಿಚಾರದಲ್ಲೂ ಅದನ್ನೇ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ ಸೇರಿ ಬೇರೆ ಕೆಲವು ಪಕ್ಷಗಳ ನಾಯಕರು ಕೊವಿಡ್-19 ಲಸಿಕೆ ಬಗ್ಗೆ ಜನರ ಮನಸಲ್ಲಿ ಭಯ ಮೂಡಿಸುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ನಾನು ಅವರಲ್ಲಿ ಕೇಳಿಕೊಳ್ಳುತ್ತೇನೆ. ಜನರ ಜೀವ, ಜೀವನದ ಜತೆ ಆಟವಾಡುವುದನ್ನು ಅವರು ನಿಲ್ಲಿಸಬೇಕು ಎಂದು ನಡ್ಡಾ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.