ಹಿಂದೂ ದೇವರು ಮತ್ತು ಅಮಿತ್ ಶಾ ಬಗ್ಗೆ ಹಾಸ್ಯ ಮಾಡಿದ ಸ್ಟ್ಯಾಂಡ್ಅಪ್ ಕಲಾವಿದ ಮುನಾವರ್ ಫರೂಖಿ ಬಂಧನ
ಹೊಸ ವರ್ಷಾಚರಣೆ ಪ್ರಯುಕ್ತ ಇಂದೋರ್ನ ಕೆಫೆಯೊಂದರಲ್ಲಿ ನಡೆದ ಹಾಸ್ಯ ಕಾರ್ಯಕ್ರಮದಲ್ಲಿ ಹಿಂದೂ ದೇವರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಹಾಸ್ಯ ಮಾಡಿದ ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಫರೂಖಿಯನ್ನು ಪೊಲೀಸರು ಬಂಧಿಸಿದ್ದಾರೆ.
ನವದೆಹಲಿ: ಇಂದೋರ್ನ ಕೆಫೆಯೊಂದರಲ್ಲಿ ಶುಕ್ರವಾರ ನಡೆದ ಹಾಸ್ಯ ಕಾರ್ಯಕ್ರಮದಲ್ಲಿ ಹಿಂದೂ ದೇವರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ನಗೆಯಾಡಿದ್ದಕ್ಕೆ ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಫರೂಖಿಯನ್ನು ಬಂಧಿಸಲಾಗಿದೆ.
ಗುಜರಾತ್ ಮೂಲದ ಮುನಾವರ್ ಮತ್ತು ಇತರ ನಾಲ್ವರ ವಿರುದ್ಧ ಬಿಜೆಪಿ ಶಾಸಕಿ ಮಾಲಿನಿ ಲಕ್ಷ್ಮಣ್ ಸಿಂಗ್ ಗೌರ್ ಅವರ ಪುತ್ರ ಏಕಲವ್ಯ ಸಿಂಗ್ ಗೌರ್ ದೂರು ನೀಡಿದ್ದರು. ಮುನಾವರ್ ಮತ್ತು ಇತರ ನಾಲ್ವರ ಜಾಮೀನು ಅರ್ಜಿ ನಿರಾಕರಿಸಿದ ಸ್ಥಳೀಯ ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಹೊಸ ವರ್ಷಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುನಾವರ್ ಅಸಭ್ಯವಾಗಿ ಮಾತನಾಡಿದಾಗ ನಾವು ಆ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಆಯೋಜಕರಲ್ಲಿ ಒತ್ತಾಯಿಸಿದೆವು ಎಂದು ಏಕಲವ್ಯ ಸಿಂಗ್ ಗೌರ್ ಹೇಳಿದ್ದಾರೆ.
ಮುನಾವರ್ ಜತೆ ಎಡ್ವಿನ್ ಆ್ಯಂಟನಿ, ಪ್ರಖಾರ್ ವ್ಯಾಸ್, ಪ್ರಿಯಂ ವ್ಯಾಸ್ ಮತ್ತು ನಳಿನ್ ಯಾದವ್ ಎಂಬವರನ್ನು ಬಂಧಿಸಲಾಗಿದೆ. ಬಂಧಿಕರ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ), 269 (ಸಾಂಕ್ರಾಮಿಕ ಕಾಯಿಲೆ ಹರಡುವ ಸಾಧ್ಯತೆ ಇರುವಾಗ ಮಾಡಿದ ನಿರ್ಲಕ್ಷ್ಯ) ಮೊದಲಾದ ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ. ಕಾರ್ಯಕ್ರಮದ ವೇಳೆ ಕೋವಿಡ್-19 ಸುರಕ್ಷಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಗುಜರಾತಿನ ಜುನಾಗಢ್ ನಿವಾಸಿ ಮುನಾವರ್ ಫರೂಖಿ ಮತ್ತು ಇಂದೋರ್ ಮೂಲದ ನಾಲ್ವರ ವಿರುದ್ಧ ಗೌರ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಕ್ರಮದ ವಿಡಿಯೊವನ್ನು ಗೌರ್ ಅವರು ನೀಡಿದ್ದಾರೆ ಎಂದು ತುಕೋಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಕಮಲೇಶ್ ಶರ್ಮಾ ಹೇಳಿದ್ದಾರೆ.
ಕಾಮಿಡಿ ಶೋನಲ್ಲಿ ಹಿಂದೂ ದೇವತೆಗಳ ಬಗ್ಗೆ, ಗೋಧ್ರಾ ಘಟನೆ ಮತ್ತು ಅಮಿತ್ ಶಾ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ನಾವು ಕಾರ್ಯಕ್ರಮದ ವಿಡಿಯೊ ಚಿತ್ರೀಕರಣ ಮಾಡಿದ್ದೇವೆ ಎಂದು ಗೌರ್ ಹೇಳಿದ್ದಾರೆ. ಆದಾಗ್ಯೂ, ಫರೂಖಿ ಅವರು ಯಾವುದೇ ಧರ್ಮದ ಬಗ್ಗೆ ಅವಹೇಳನ ಮಾಡಿಲ್ಲ. ಅವರ ಜೋಕ್ಗಳೂ ಅಸಭ್ಯವಾಗಿರಲಿಲ್ಲ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಹೇಳಿರುವುದಾಗಿ ದಿ ವೈರ್ ವರದಿ ಮಾಡಿದೆ.
ಹಿಂದ್ ರಕ್ಷಕ್ ಎಂಬ ಸಂಘಟನೆಯ ಸಂಚಾಲಕರಾಗಿದ್ದಾರೆ ಗೌರ್. ಕಾರ್ಯಕ್ರಮ ಆಯೋಜಿಸಲು ಪರವಾನಗಿ ಇರಲಿಲ್ಲ. ಕೆಫೆಯ ಚಿಕ್ಕ ಹಾಲ್ನಲ್ಲಿ ಕನಿಷ್ಠ 100 ಪ್ರೇಕ್ಷಕರು ಇದ್ದರು. ಅಲ್ಲಿ ಅಂತರ ಕಾಪಾಡಿರಲಿಲ್ಲ ಎಂದು ಗೌರ್ ಆರೋಪಿಸಿದ್ದಾರೆ. ಸ್ಟ್ಯಾಂಡ್ಅಪ್ ಕಾಮಿಡಿಯನ್ ಮುನಾವರ್ ಮೇಲೆ ಹಿಂದ್ ರಕ್ಷಕ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ ಮಾಡಿದ್ದು, ಈ ಆರೋಪವನ್ನು ಗೌರ್ ನಿರಾಕರಿಸಿದ್ದಾರೆ.
ಚೀಫ್ ಜುಡಿಷ್ಯಲ್ ಮೆಜಿಸ್ಟ್ರೇಟ್ ಅಮನ್ ಸಿಂಗ್ ಭುರಿಯಾ ಅವರು ಫರೂಖಿ ಮತ್ತು ಇತರ ನಾಲ್ವರಿಗೆ ಜಾಮೀನು ನಿರಾಕರಿಸಿ ಜ.13ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದ್ದಾರೆ. ಫರೂಖಿ ಪರ ವಾದಿಸಿದ ಅನ್ಶೂಮನ್ ಶ್ರೀವಾಸ್ತವ ರಾಜಕೀಯ ಉದ್ದೇಶದಿಂದ ಎಫ್ಐಆರ್ ದಾಖಲಿಸಿದ್ದು, ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಹೇಳಿದ್ದಾರೆ.