ಬಂಕುರಾ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಮೈತ್ರಿ ಬಿಜೆಪಿ ವಿರುದ್ಧ ಹೋರಾಡಿ ಗೆಲ್ಲಲು ಸಾಧ್ಯವಿಲ್ಲ. ಅವರನ್ನು ಗೆಲ್ಲಿಸುವ ಶಕ್ತಿ ಇದ್ದರೆ, ಅದು ನಮ್ಮ ಟಿಎಂಸಿ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿಯವರಿಗೆ ಮಾತ್ರ ಎಂದು ಸಂಸದೀಯ ವ್ಯವಹಾರಗಳ ಸಚಿವ ತಪಸ್ ರಾಯ್ ಹೇಳಿದರು.
ಬಸಿರ್ಹತ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ತಪಸ್ ರಾಯ್ ಬಂಕುರಾದ ಒಂಡಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ -ಕಮ್ಯೂನಿಸ್ಟ್ ಪಕ್ಷಗಳು ನಮ್ಮ ತೃಣಮೂಲ ಕಾಂಗ್ರೆಸ್ನೊಂದಿಗೆ ಸೇರಿ ಸ್ಪರ್ಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ನಾವೆಲ್ಲರೂ ಒಟ್ಟಾದರೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಬಹುದು ಎಂದೂ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ ಅದು ಆಗಲು ಬಿಡಬಾರದು. ಮಮತಾ ಬ್ಯಾನರ್ಜಿಯವರೇ ಮತ್ತೆ ಅಧಿಕಾರ ಹಿಡಿಯಬೇಕು. ಬಿಜೆಪಿಯ ಎಲ್ಲ ನಾಯಕರೂ ಮಮತಾ ಬ್ಯಾನರ್ಜಿಯವರಿಗೆ ಹೆದರುತ್ತಾರೆ ಎಂದರು.
ತೃಣಮೂಲ ಕಾಂಗ್ರೆಸ್ ಜತೆ ಸೇರತ್ತಾ ಕಾಂಗ್ರೆಸ್ ?
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಈ ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿದೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ದಿಗ್ಗಜರೆಲ್ಲ ಇಲ್ಲಿಗೆ ಭೇಟಿ ಕೊಟ್ಟು ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ. ಆದರೆ ಕಾಂಗ್ರೆಸ್ ಅಂಥ ಪ್ರಯತ್ನವನ್ನೇನೂ ಮಾಡುತ್ತಿರುವಂತೆ ಕಾಣುತ್ತಿಲ್ಲ. ರಾಹುಲ್ ಗಾಂಧಿಯವರು ತಮಿಳುನಾಡು, ಕೇರಳಕ್ಕೆ ಕೊಟ್ಟಷ್ಟು ಮಹತ್ವವನ್ನು ಪಶ್ಚಿಮ ಬಂಗಾಳಕ್ಕೆ ನೀಡುತ್ತಿಲ್ಲ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ನಡೆ ಏನೆಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತೃಣಮೂಲ ಕಾಂಗ್ರೆಸ್ ಜತೆಗೇ ಕೈ ಜೋಡಿಸುತ್ತದೆಯಾ? ಅಥವಾ ಸ್ಪರ್ಧೆಗೂ ಮೊದಲೇ ಶರಣಾಗುವ ನಡೆಯಾ ಎಂಬುದನ್ನು ಕಾದು ನೋಡಬೇಕಷ್ಟೇ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಗೆಲ್ಲಲು ಬಿಜೆಪಿ ರಥಯಾತ್ರೆ ತಂತ್ರ: ಕೋರ್ಟ್ನಿಂದಲೂ ಸಿಕ್ತು ಅನುಮತಿ
Published On - 8:21 pm, Sun, 14 February 21