ದೇಶಾದ್ಯಂತ ಜಾತಿ ಗಣತಿ ಬೆಂಬಲಿಸುವ ನಿರ್ಣಯ ಅಂಗೀಕರಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 09, 2023 | 4:40 PM

Caste census: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (Congress working committee) ಸಭೆಯಲ್ಲಿ ಜಾತಿ ಗಣತಿ ಕುರಿತು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದೇವೆ. ನಮ್ಮ ಸಿಎಂಗಳು ರಾಜ್ಯಗಳಲ್ಲಿ ಜಾತಿ ಗಣತಿ ನಡೆಸುವ  ನಿರ್ಣಯ ಅಂಗೀಕರಿಸಿದ್ದಾರೆ. ಜಾತಿ ಗಣತಿ ಮಾಡುವಂತೆ ಬಿಜೆಪಿಗೆ ಒತ್ತಾಯಿಸುತ್ತೇವೆ, ಮಾಡದಿದ್ದರೆ ನಮಗೇ ಬಿಡಲಿ. ಇಂಡಿಯಾ ಮೈತ್ರಿಕೂಟದ ಬಹುತೇಕ ಮೈತ್ರಿ ಪಾಲುದಾರರು ಜಾತಿ ಗಣತಿಯ ಕಲ್ಪನೆಯನ್ನು ಬೆಂಬಲಿಸುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದೇಶಾದ್ಯಂತ ಜಾತಿ ಗಣತಿ ಬೆಂಬಲಿಸುವ ನಿರ್ಣಯ ಅಂಗೀಕರಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ
ರಾಹುಲ್ ಗಾಂಧಿ
Follow us on

ದೆಹಲಿ ಅಕ್ಟೋಬರ್ 09: ರಾಜ್ಯಗಳಲ್ಲಿ ಜಾತಿ ಗಣತಿ (caste census) ನಡೆಸಲು ಪಕ್ಷದ ಕಾರ್ಯಕಾರಿ ಸಮಿತಿ ನಿರ್ಣಯ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ಈ ಉಪಕ್ರಮವು ಜಾತಿ ಅಥವಾ ಧರ್ಮದ ಪರಿಗಣನೆಗಳನ್ನು ಆಧರಿಸಿಲ್ಲ. ಬದಲಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲ ಕಲ್ಪಿಸುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (Congress working committee) ಸಭೆಯಲ್ಲಿ ಜಾತಿ ಗಣತಿ ಕುರಿತು ನಾಲ್ಕು ಗಂಟೆಗಳ ಕಾಲ ಚರ್ಚೆ ನಡೆಸಿದ್ದೇವೆ. ನಮ್ಮ ಸಿಎಂಗಳು ರಾಜ್ಯಗಳಲ್ಲಿ ಜಾತಿ ಗಣತಿ ನಡೆಸುವ  ನಿರ್ಣಯ ಅಂಗೀಕರಿಸಿದ್ದಾರೆ.ಜಾತಿ ಗಣತಿ ಮಾಡುವಂತೆ ಬಿಜೆಪಿಗೆ ಒತ್ತಾಯಿಸುತ್ತೇವೆ, ಮಾಡದಿದ್ದರೆ ನಮಗೇ ಬಿಡಲಿ. ಇಂಡಿಯಾ ಮೈತ್ರಿಕೂಟದ ಬಹುತೇಕ ಮೈತ್ರಿ ಪಾಲುದಾರರು ಜಾತಿ ಗಣತಿಯ ಕಲ್ಪನೆಯನ್ನು ಬೆಂಬಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಈ ಹೆಜ್ಜೆ ಜಾತಿ ಮತ್ತು ಧರ್ಮದ ಬಗ್ಗೆ ಅಲ್ಲ. ಬಡವರಿಗಾಗಿ ಮಾಡಲಾಗುತ್ತಿದೆ. ನಮಗೆ ಎರಡು ಭಾರತಗಳಿವೆ, ಒಂದು ಅದಾನಿಗೆ ಮತ್ತು ಇನ್ನೊಂದು ಬಡವರಿಗೆ ಸೇರಿದ್ದು. ನಾವು ಜಾತಿ ಗಣತಿಯನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ. ನಾವು ಭರವಸೆಗಳನ್ನು ಉಲ್ಲಂಘಿಸುವುದಿಲ್ಲ. ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು, ಜಾತಿ ಗಣತಿ ಮುಖ್ಯವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.


ನಮ್ಮಲ್ಲಿ ನಾಲ್ವರು ಸಿಎಂಗಳಲ್ಲಿ ಮೂವರು ಒಬಿಸಿ ಸಮುದಾಯದವರು, ಬಿಜೆಪಿಯ 10 ಸಿಎಂಗಳು ಮತ್ತು ಅವರಲ್ಲಿ ಒಬ್ಬರೇ ಒಬಿಸಿಯವರು. ನರೇಂದ್ರ ಮೋದಿ ಅವರು ಸಮುದಾಯಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ದೇಶದ ಜನರಿಗೆ ಹೇಳಬೇಕು.ಜಾತಿ ಗಣತಿ ನಡೆಸುವುದು ನಮ್ಮ ರಾಜಕೀಯ ನಿರ್ಧಾರವಲ್ಲ, ಸಮಾಜದಲ್ಲಿ ನ್ಯಾಯವನ್ನು ಖಾತ್ರಿಪಡಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.

“ದೇಶದಲ್ಲಿ ಜಾತಿ ಗಣತಿಯನ್ನು ಬೆಂಬಲಿಸಲು  ಸಿಡಬ್ಲೂಸಿ   ಸರ್ವಾನುಮತದಿಂದ ನಿರ್ಧರಿಸಿದೆ. ಇದು ದೇಶದ ಬಡವರ ವಿಮೋಚನೆಗೆ ಪ್ರಬಲವಾದ ಪ್ರಗತಿಪರ ಹೆಜ್ಜೆಯಾಗಿದೆ” ಎಂದು ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಹುಲ್ ಹೇಳಿದ್ದಾರೆ.

ಜಾತಿ ಗಣತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಾಗ್ದಾಳಿ ನಡೆಸಿದ ರಾಹುಲ್, “ಪ್ರಧಾನಿ ಜಾತಿ ಗಣತಿ ಮಾಡಲು ಅಸಮರ್ಥರಾಗಿದ್ದಾರೆ. ನಮ್ಮ 4 ಸಿಎಂಗಳಲ್ಲಿ 3 ಮಂದಿ ಒಬಿಸಿ ವರ್ಗದವರು. 10 ಬಿಜೆಪಿ ಸಿಎಂಗಳ ಪೈಕಿ ಒಬ್ಬ ಸಿಎಂ ಮಾತ್ರ ಒಬಿಸಿ ವರ್ಗದವರು. ಒಬಿಸಿ ವರ್ಗದಿಂದ ಎಷ್ಟು ಬಿಜೆಪಿ ಸಿಎಂಗಳು ಇದ್ದಾರೆ? ಪ್ರಧಾನ ಮಂತ್ರಿಗಳು ಒಬಿಸಿಗಳಿಗಾಗಿ ಕೆಲಸ ಮಾಡುವುದಿಲ್ಲ ಆದರೆ ಅವರನ್ನು ಮುಖ್ಯ ಸಮಸ್ಯೆಗಳಿಂದ ದೂರವಿಡಲು ಕೆಲಸ ಮಾಡುತ್ತಾರೆ” ಎಂದು ಅವರು ಹೇಳಿದರು.

ಚುನಾವಣಾ ಆಯೋಗವು ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಿದ ದಿನದಂದೇ ಕಾಂಗ್ರೆಸ್ ನಾಯಕನ ಈ ಹೇಳಿಕೆ ಬಂದಿದೆ.

ಜಾತಿ ಗಣತಿಯನ್ನು ಬೆಂಬಲಿಸುವ ಕುರಿತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯವು ಕಾಂಗ್ರೆಸ್‌ನ ಭಾಗವಾಗಿರುವ ಬಿಹಾರ ಸರ್ಕಾರವು ಜಾತಿ ಗಣತಿ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಬಂದಿದೆ. ಇಲ್ಲಿ ಅತ್ಯಂತ ಹಿಂದುಳಿದ ವರ್ಗಗಳು (ಇಬಿಸಿ) ಜನಸಂಖ್ಯೆಯ 36.01%, ಹಿಂದುಳಿದ ವರ್ಗಗಳು 27.12% ಮತ್ತು ಸಾಮಾನ್ಯ ವರ್ಗವು 15.52% ವ್ಯಾಪ್ತಿಯ ಜನಸಂಖ್ಯೆಯನ್ನು ಒಳಗೊಂಡಿದೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲೂ ಜಾತಿ ಸಮೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ.

ಸಾಮಾಜಿಕ ನ್ಯಾಯದ ಹೊಸ ಅಧ್ಯಾಯ. ವಂಚಿತರ ವಿರುದ್ಧದ ಕೇಂದ್ರ ಸರಕಾರ ದೇಶದಲ್ಲಿ ಜಾತಿ ಗಣತಿಯಿಂದ ನುಣುಚಿಕೊಳ್ಳುತ್ತಿದೆ. ಇದರಿಂದ ಸಾಮಾಜಿಕ ನ್ಯಾಯಕ್ಕೆ ತೊಡಕುಂಟಾಗಿದೆ. ಆದ್ದರಿಂದ, ರಾಜಸ್ಥಾನದ ಎಲ್ಲಾ ನಿರ್ಗತಿಕರಿಗೆ ಪ್ರಯೋಜನಗಳನ್ನು ಖಾತ್ರಿಪಡಿಸಿಕೊಳ್ಳಲು ರಾಜ್ಯ ಸರ್ಕಾರವು ತನ್ನ ಸಂಪನ್ಮೂಲಗಳ ಮೂಲಕ ಜಾತಿ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಫಲಿತಾಂಶಗಳ ಆಧಾರದ ಮೇಲೆ, ನಾವು ಸಮಾಜದ ವಿವಿಧ ವರ್ಗಗಳ ಅಗತ್ಯಗಳಿಗಾಗಿ ಯೋಜನೆಗಳನ್ನು ರೂಪಿಸುತ್ತೇವೆ” ಎಂದು ಅವರು ಹೇಳಿದರು.

ಇದನ್ನೂ ಓದಿ:  ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಏನೇನು ಚರ್ಚೆ ನಡೆದಿದೆ? ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ರಾಜ್ಯ ಯೋಜನಾ ಇಲಾಖೆಯನ್ನು (ಆರ್ಥಿಕ ಮತ್ತು ಅಂಕಿಅಂಶ) ಕಾರ್ಯಕ್ಕಾಗಿ ನೋಡಲ್ ವಿಭಾಗವನ್ನಾಗಿ ಮಾಡಲಾಗಿದೆ. ಆದಾಗ್ಯೂ, ಆದೇಶವು ಜನಸಂಖ್ಯೆಯ ಎಣಿಕೆ ನಡೆಸಲು ಸಮಯದ ಚೌಕಟ್ಟನ್ನು ಒದಗಿಸಿಲ್ಲ.

ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಜಾತಿ ಸಮೀಕ್ಷೆಯ ಆದೇಶದ ಪ್ರತಿಯನ್ನು ಹಂಚಿಕೊಂಡ ಆಡಳಿತ ಪಕ್ಷವು, “ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಜಾತಿ ಆಧಾರಿತ ಸಮೀಕ್ಷೆಯನ್ನು ನಡೆಸುತ್ತದೆ. ಕಾಂಗ್ರೆಸ್ ತನ್ನ ನಿರ್ಣಯದ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Mon, 9 October 23