ಚೆನ್ನೈ: ಎಲ್ಲಾ ಕ್ಷೇತ್ರಗಳಿಂದಲೂ ಎಂ. ಕರುಣಾನಿಧಿಯೇ ಅಭ್ಯರ್ಥಿಯಾಗಿ ನಿಂತಿದ್ದಾರೆಂದು ಪರಿಗಣಿಸಲು ದ್ರಾವಿಡ ಮುನ್ನೇತ್ರ ಕಳಗಂ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ 173 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಘೋಷಣೆ ಮಾಡಿದ ಅವರು ಹೀಗೆ ತಿಳಿಸಿದ್ದಾರೆ. ಡಿಎಂಕೆ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಕೆ. ಸ್ಟಾಲಿನ್, ಮಾರ್ಚ್ 15ರಂದು ನಾಮಪತ್ರ ಸಲ್ಲಿಸುತ್ತೇನೆ. ಬಳಿಕ ಮುಂದಿನ ಹಂತದ ಚುನಾವಣಾ ಪ್ರಚಾರಕ್ಕೆ ಲಗ್ಗೆ ಇಡುತ್ತೇನೆ ಎಂದು ತಿಳಿಸಿದ್ದಾರೆ.
ಎಂ.ಕೆ. ಸ್ಟಾಲಿನ್ ಈ ಬಾರಿಯೂ ಕೂಡ ಕೊಲತ್ತೂರ್ನಿಂದ ಸ್ಪರ್ಧಿಸಲಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ, ಚೆಪಾಕ್ ಕ್ಷೇತ್ರದದಿಂದ ಕಣಕ್ಕಿಳಿಯಲಿದ್ದಾರೆ. ಟಿಟಿವಿ ದಿನಕರನ್ ನೇತೃತ್ವದ AMMK ಸೇರಲು AIADMK ತೊರೆದಿದ್ದ ತಂಗ ತಮಿಳ್ಸೆಲ್ವಂ ಬಳಿಕ DMK ಪಕ್ಷದ ಜೊತೆಯಾಗಿದ್ದರು. ಇದೀಗ, ತಮಿಳ್ಸೆಲ್ವಂಗೆ ಡಿಎಂಕೆ ಪಕ್ಷ ಬೋದಿನಾಯಕನೂರ್ನಿಂದ ಟಿಕೆಟ್ ನೀಡಿದೆ.
ಬಹುತೇಕ ಹಾಲಿ ಶಾಸಕರಿಗೇ ಈ ಬಾರಿಯೂ ಕೂಡ ಚುನಾವಣಾ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಪಕ್ಷದ ಹಿರಿಯರಾದ ದುರೈ ಮುರುಗನ್, ಕೆ.ಎನ್. ನೆಹ್ರು, ಕೆ. ಪೊನ್ಮುಡಿ ಮತ್ತು ಎಂ.ಆರ್.ಕೆ. ಪನೀರ್ಸೆಲ್ವಂಗೆ ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಲಭಿಸಿದೆ.
ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಕಾಂಗ್ರೆಸ್ ಹಾಗೂ ಇತರ ಎಡಪಕ್ಷಗಳೊಂದಿಗೆ ಚುನಾವಣಾ ಕಣದಲ್ಲಿ ಭಾಗಿಯಾಗಲಿದೆ. ತಮಿಳುನಾಡು ವಿಧಾನಸಭೆಯ ಒಟ್ಟು 234 ಕ್ಷೇತ್ರಗಳ ಪೈಕಿ 173ರಲ್ಲಿ ಡಿಎಂಕೆ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಉಳಿದಂತೆ, ಕಾಂಗ್ರೆಸ್, MDMK, VCK ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ.
ಮಕ್ಕಳ್ ನೀಧಿ ಮಯಂ ಪಕ್ಷದ ಕಮಲ್ ಹಾಸನ್ ಕೊಯಮತ್ತೂರ್ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಉಪಮುಖ್ಯಮಂತ್ರಿ ಒ. ಪನೀರ್ಸೆಲ್ವಂ AOADMK ಅಭ್ಯರ್ಥಿಯಾಗಿ ಬೋದಿನಾಯಕನೂರ್ನಿಂದ ಇಂದು (ಮಾರ್ಚ್ 12) ನಾಮಪತ್ರ ಸಲ್ಲಿಸಿದ್ದಾರೆ.
Today I’ve filed my nomination from Bodinayakanur. I’ve been a winning candidate for the past 2 times. I’ve done all works in the constituency. People are satisfied with my work so I’ve been given this seat again. I hope this time too people will support me: Dy CM O Panneerselvam pic.twitter.com/0Wp7sSZKNn
— ANI (@ANI) March 12, 2021
ಸಿ-ವೋಟರ್ ಸಮೀಕ್ಷೆ ಏನು ಹೇಳುತ್ತಿದೆ?
ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಮತ ಎಣಿಕೆ ದಿನಾಂಕಗಳು ಪ್ರಕಟವಾಗಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಏಪ್ರಿಲ್ 6ರಂದು ಚುನಾವಣೆ ಮತ್ತು ಮೇ 2ರಂದು ಮತ ಎಣಿಕೆ ನಡೆಯಲಿದೆ. ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 158 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಒಟ್ಟು 234 ಕ್ಷೇತ್ರಗಳಲ್ಲಿ, ಎಐಡಿಎಂಕೆ 65 ಸ್ಥಾನಗಳನ್ನು ಮಾತ್ರ ಗೆಲ್ಲಬಹುದು ಎಂದು ಸಿ-ವೋಟರ್ ಸಮೀಕ್ಷೆ ಹೇಳುತ್ತಿದೆ.
ಇದನ್ನೂ ಓದಿ: Tamil Nadu Assembly Elections 2021: ತಮಿಳುನಾಡು ಚುನಾವಣೆಗೆ ಎಐಎಡಿಎಂಕೆ ಪಕ್ಷದ 171 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
Published On - 3:16 pm, Fri, 12 March 21