ಕೊರೊನಾ ಸಾಂಕ್ರಾಮಿಕ ಭೂಮಿಗೆ ಕಾಲಿಟ್ಟಾಗಿನಿಂದ ಪೊಲೀಸ್, ಆರೋಗ್ಯ ಸಿಬ್ಬಂದಿ ಸೇರಿ ಹಲವು ಕ್ಷೇತ್ರದ ಸಿಬ್ಬಂದಿ ಮುಂಚೂಣಿಯಲ್ಲಿದ್ದುಕೊಂಡು, ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ. ನಾಗರಿಕರ ರಕ್ಷಣೆಗಾಗಿ ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ. ಅದರಲ್ಲೂ ಈಗ ಶುರುವಾಗಿರುವ ಕೊರೊನಾ ಎರಡನೇ ಅಲೆಯಲ್ಲಿ ಕೊವಿಡ್ ವಾರಿಯರ್ಸ್ ಮೇಲೆ ಇನ್ನೂ ಜಾಸ್ತಿ ಒತ್ತಡವೇ ಇದೆ. ರಜೆ, ವಿಶ್ರಾಂತಿ ಸಿಗುತ್ತಿಲ್ಲ. ಹೀಗಿರುವಾಗ ರಾಜಸ್ಥಾನದ ಮಹಿಳಾ ಕಾನ್ಸ್ಟೆಬಲ್ ಒಬ್ಬರು ಮದುವೆಯ ಅರಿಶಿಣ ಶಾಸ್ತ್ರಕ್ಕೆ ರಜೆ ಸಿಗದೆ, ಪೊಲೀಸ್ ಠಾಣೆಯಲ್ಲೇ ಈ ಕಾರ್ಯಕ್ರಮ ಮಾಡಿಸಿಕೊಂಡಿದ್ದಾರೆ.
ಈ ಮಹಿಳಾ ಕಾನ್ಸ್ಟೆಬಲ್ ಡುಂಗುರ್ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಇವರಿಗೆ ಅರಿಶಿಣ ಶಾಸ್ತ್ರ ಕಾರ್ಯಕ್ರಮಕ್ಕೆ ರಜಾ ಸಿಕ್ಕಿರಲಿಲ್ಲ. ಹಾಗಾಗಿ ತಾವು ಕೆಲಸ ಮಾಡುವ ಠಾಣೆಯಲ್ಲೇ ಈ ಶಾಸ್ತ್ರ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ವಾಗಾದ್ ದರ್ಶನ್ ಎಂಬ ಫೇಸ್ಬುಕ್ ಪೇಜ್ನಲ್ಲಿ ವಿಡಿಯೋ ಶೇರ್ ಆಗಿದ್ದು, ಅದರಲ್ಲಿ ಉಳಿದ ಮಹಿಳಾ ಕಾನ್ಸ್ಟೆಬಲ್ಗಳೆಲ್ಲ ಸೇರಿ, ಇವರಿಗೆ ಅರಿಶಿಣ ಶಾಸ್ತ್ರ ನೆರವೇರಿಸುವುದನ್ನು ನೋಡಬಹುದು. ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ, ಕಾನ್ಸ್ಟೆಬಲ್ ಮುಖ, ಕೈಕಾಲುಗಳಿಗೆ ಅರಿಶಿಣ ಹಚ್ಚಿದ್ದಾರೆ. ಹಾಗೇ ಮದುಮಗಳು ಹಳದಿ ಬಣ್ಣದ ಚೂಡಿದಾರ್ ಧರಿಸಿ, ಕೆಂಪು ದುಪ್ಪಟ್ಟಾ ಹೊದ್ದಿದ್ದಾರೆ.
ವಿಶೇಷವೆಂದರೆ ಈ ಆಚರಣೆಯಲ್ಲಿ ಪುರುಷ ಪೊಲೀಸರೂ ಕೂಡ ಖುಷಿಯಿಂದ ಭಾಗವಹಿಸಿದ್ದಾರೆ. ಮಧುಮಗಳು ಕುಳಿತ ಕುರ್ಚಿಯನ್ನು ಎತ್ತಿ, ಮೇಲೆ-ಕೆಳಗೆ ಮಾಡುತ್ತ ಸಾಂಪ್ರದಾಯಿಕ ಹಾಡನ್ನೂ ಹಾಡಿದ್ದಾರೆ. ಅದೇನೇ ಇರಲಿ ವಿಡಿಯೋ ನೋಡಿದ ನೆಟ್ಟಿಗರು ತುಂಬ ಖುಷಿ ವ್ಯಕ್ತಪಡಿಸಿದ್ದಾರೆ. ಸದ್ಯ ದೇಶದಲ್ಲಿ ಎಲ್ಲ ರಾಜ್ಯಗಳೂ ಕೊರೊನಾ ಎರಡನೇ ಅಲೆಗೆ ತತ್ತರಿಸಿವೆ. ಇಂದು ಒಂದೇ ದಿನ 3.46 ಲಕ್ಷಕ್ಕೂ ಅಧಿಕ ಕೇಸ್ಗಳು ದಾಖಲಾಗಿವೆ. ಮೊದಲನೇ ಬಾರಿಗೆ ಕಾಲಿಟ್ಟ ವೈರಸ್ಗಿಂತಲೂ, ಈ ಬಾರಿ ಇನ್ನೂ ವೇಗವಾಗಿ, ಮಾರಣಾಂತಿಕವಾಗಿ ಕೊರೊನಾ ವೈರಸ್ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಇತರ ಲಸಿಕೆಗೆಳಿಗೆ ಹೋಲಿಸಿದರೆ ಕೊವಿಶೀಲ್ಡ್ ಲಸಿಕೆ ಬೆಲೆ ಕಡಿಮೆಯಿದೆ; ಅದಾರ್ ಪೂನಾವಲಾ
ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ; ಕೊವಿಡ್ನಿಂದ ಆಪ್ತನನ್ನು ಕಳೆದುಕೊಂಡು ಕಣ್ಣೀರಿಟ್ಟ ನಟ ಅನಿರುದ್ಧ್
Published On - 5:20 pm, Sat, 24 April 21