Corbevax: ಕೊವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ನೀಡಲು ಭಾರತ ಸರ್ಕಾರ ಅನುಮತಿ
18 ವರ್ಷ ಮೇಲ್ಪಟ್ಟವರು ಮತ್ತು ಎರಡು ಡೋಸ್ ಕೊವಿಡ್ ಲಸಿಕೆ ಪಡೆದವರು ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು.
ಬೆಂಗಳೂರು: ಕೊವ್ಯಾಕ್ಸಿನ್ (Covaxin) ಅಥವಾ ಕೊವಿಶೀಲ್ಡ್ (Covishield) ಕೊವಿಡ್ ನಿರೋಧಕ ಲಸಿಕೆ (Corona Vaccine) ಪಡೆದವರಿಗೆ ಬೂಸ್ಟರ್ ಲಸಿಕೆಯಾಗಿ ‘ಬಯಲಾಜಿಕಲ್ ಇ’ ಕಂಪನಿಯ ಕೊರ್ಬೆವ್ಯಾಕ್ಸ್ (Corbevax) ನೀಡಲು ಭಾರತ ಸರ್ಕಾರ ಅನುಮತಿ ನೀಡಿದೆ. 18 ವರ್ಷ ದಾಟಿರುವ, ಈಗಾಗಲೇ ಮೊದಲ ಎರಡು ಲಸಿಕೆ ಪಡೆದವರು ಬೂಸ್ಟರ್ ಲಸಿಕೆಯಾಗಿ ಕೊರ್ಬೆವ್ಯಾಕ್ಸ್ ತೆಗೆದುಕೊಳ್ಳಬಹುದು ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
18 ವರ್ಷ ಮೇಲ್ಪಟ್ಟವರು ಮತ್ತು ಎರಡು ಡೋಸ್ ಕೊವಿಡ್ ಲಸಿಕೆ ಪಡೆದವರು ಕೊರ್ಬೆವ್ಯಾಕ್ಸ್ ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದು. ಮೊದಲ ಎರಡು ಡೋಸ್ ಪಡೆದುಕೊಂಡ ಕಂಪನಿಗೆ ಹೊರತಾದ ಮತ್ತೊಂದು ಕಂಪನಿಯ ಬೂಸ್ಟರ್ ಡೋಸ್ ನೀಡಲು ಅವಕಾಶ ನೀಡಿರುವುದು ಭಾರತದಲ್ಲಿ ಇದೇ ಮೊದಲು.
ರಾಷ್ಟ್ರೀಯ ತಾಂತ್ರಿಕ ಲಸಿಕಾಕರಣ ಸಲಹಾ ಮಂಡಳಿ (National Technical Advisory Group on Immunisation – NTAGI) ನೀಡಿರುವ ಶಿಫಾರಸು ಆಧರಿಸಿ ಕೇಂದ್ರ ಆರೋಗ್ಯ ಸಚಿವಾಲಯವು ಈ ನಿರ್ಧಾರ ತೆಗೆದುಕೊಂಡಿದೆ. ‘18 ವರ್ಷ ಮೇಲ್ಪಟ್ಟವರು ಕೊವಿಡ್ ಲಸಿಕೆ ತೆಗೆದುಕೊಂಡು 6 ತಿಂಗಳು ಅಥವಾ 26 ವಾರವಾದ ನಂತರ ಬೂಸ್ಟರ್ ಡೋಸ್ ಆಗಿ ಕೊರ್ಬೆವ್ಯಾಕ್ಸ್ ಲಸಿಕೆ ತೆಗೆದುಕೊಳ್ಳಬಹುದು’ ಎಂದು ಮೂಲಗಳು ಹೇಳಿವೆ.
Biological E’s Corbevax booster shot for Covaxin and Covishield beneficiaries above 18 years of age approved by Government of India: Official sources pic.twitter.com/HWlt90iEAC
— ANI (@ANI) August 10, 2022
ಕಳೆದ ಜೂನ್ 4ರಂದು ಬಯಲಾಜಿಕಲ್-ಇ ಕಂಪನಿಯ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಡಿಸಿಜಿಐ (Drugs Controller General of India – DCGI) ಅನುಮೋದನೆ ಸಿಕ್ಕಿತ್ತು. ಹೈದರಾಬಾದ್ ಮೂಲಕ ಔಷಧ ಮತ್ತು ಲಸಿಕಾ ತಯಾರಿಕೆ ಕಂಪನಿ ಬಯಾಲಾಜಿಕಲ್-ಇ ಸಂಸ್ಥೆಯ ಕೊರ್ಬೆವ್ಯಾಕ್ಸ್ ಲಸಿಕೆಯು ಕೊವಿಡ್ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸುವುದು ಕ್ಲಿನಿಕಲ್ ಟ್ರಯಲ್ಸ್ ವೇಳೆ ಸಾಬೀತಾಗಿತ್ತು.
Published On - 11:36 am, Wed, 10 August 22