ನವದೆಹಲಿ: ಕೊರೊನಾ ಅನ್ನೋ ಹೆಮ್ಮಾರಿ ಎಲ್ಲರನ್ನೂ ಹಿಂಡಿ ಹಿಪ್ಪೆ ಮಾಡ್ತಿದೆ. ಬಕಾಸುರನಂತೆ ಮನುಕುಲವನ್ನ ಬಡಿದು ಬಾಯಿಗೆ ಹಾಕಿಕೊಳ್ತಿದೆ. ನರಕಾಸುರನಂತೆ ನಕರಾ ಮಾಡ್ತಿದೆ. ಕ್ರೂರಿಯನ್ನ ಕಟ್ಟಿ ಹಾಕೋಕೆ ದೇಶವೇ ದಿಗಿಲು ಬಡಿದು ಕೂತಿದೆ. ಲಾಕ್ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಿದ್ರು ರಕ್ಕಸ ವೈರಸ್ ಸುಳಿಗಾಲಿ ಸುನಾಮಿಯಂತೆ ಮೇಲೇರ್ತಿದೆ. ಭರತಖಂಡವನ್ನೇ ಸ್ಮಶಾನ ಮಾಡೋಕೆ ಹಾತೊರೆಯುತ್ತಿದೆ.
ಯೆಸ್.. ದೇಶದಲ್ಲಿ ದಾಳಿ ಮಾಡ್ತಿರೋ ಕೊರೊನಾ ವೈರಸ್ ಎಲ್ಲರ ಎದೆ ನಡುಗಿಸಿಟ್ಟಿದೆ. ಕುಂತ್ರೂ ಭಯ.. ನಿಂತ್ರೂ ಭಯ ಕಾಡ್ತಿದೆ.. ಎಲ್ಲೆ ಮೀರಿ ಕಬಂಧಬಾಹು ಚಾಚ್ತಿರೋ ರಕ್ತಭೀಜಾಸುರ ವೈರಸ್ ಕಂಡವರನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಭಾರತದಲ್ಲಿ ಕೊರೊನಾ ಸೋಂಕಿನ ಸುನಾಮಿ ಅಪ್ಪಳಿಸ್ತಿರೋ ಹೊಡೆತಕ್ಕೆ ಗಲ್ಲಿ ಗಲ್ಲಿಗೂ ಗಾಬರಿ ಬಿದ್ದಿದೆ.
ಭಾರತದಲ್ಲಿ 25 ಸಾವಿರ ಗಡಿಯತ್ತ ರಕ್ಕಸನ ಅಟ್ಟಹಾಸ!
ಕೊರೊನ ವೈರಸ್ ಭಾರತದಲ್ಲಿ ರೌದ್ರಾವತಾರ ಮುಂದುವರಿಸಿದ. ಭಾರತದಲ್ಲಿ 25 ಸಾವಿರದ ಗಡಿಯತ್ತ ಕೊರೊನಾ ಸೋಂಕಿತರ ಸಂಖ್ಯೆ ಮುನ್ನುಗ್ತಿದೆ. ದೇಶದಲ್ಲಿ ಈವರೆಗೆ 779ಕ್ಕೂ ಹೆಚ್ಚು ಮಂದಿ ರಾಕ್ಷಸ ವೈರಸ್ ದಾಳಿಗೆ ಉಸಿರು ನಿಲ್ಲಿಸಿದ್ದಾರೆ.
ಒಂದೇ ದಿನ 1490 ಜನರಿಗೆ ವಕ್ಕರಿಸಿದ ಕ್ರೂರಿ!
ಇನ್ನೊಂದು ಶಾಕಿಂಗ್ ವಿಷ್ಯ ಅಂದ್ರೆ ಭಾರತದಲ್ಲಿ ಕೊರೊನಾ ರಣಕೇಕೆ ದಿನೇ ದಿನೇ ಹೆಚ್ಚಾಗ್ತಿದೆ. ಲಾಕ್ಡೌನ್ ಜಾರಿಯಾಗಿದ್ರು ಭಾರತದಲ್ಲಿ ಒಂದೇ ದಿನ 1490 ಮಂದಿಗೆ ಕಿಲ್ಲರ್ ವೈರಸ್ ಸುತ್ತಿಕೊಂಡಿದೆ. ವೈರಸ್ ಸೋಂಕಿಗೆ ತುತ್ತಾಗ್ತಿರೋರ ಸಂಖ್ಯೆ ಕೇಳಿ ಎಲ್ಲರ ತಲೆ ಗಿರಕಿ ಹೊಡೀತಿದೆ. ಸೋಂಕಿನ ಸುಳಿಗಾಳಿ ಮತ್ತಷ್ಟು ವ್ಯಾಪಿಸೋ ಆತಂಕ ಮನೆಮಾಡಿದೆ.
ಮಹಾರಾಷ್ಟ್ರದಲ್ಲಿ 7 ಸಾವಿರದ ಗಡಿಯತ್ತ ಕಿಲ್ಲರ್ ಹೆಜ್ಜೆ!
ಇನ್ನು, ಡೆಡ್ಲಿ ವೈರಸ್ ಕೊರೊನಾ ದಾಳಿಗೆ ಮಹಾರಾಷ್ಟ್ರವಂತು ಪತ್ರುಗುಟ್ಟಿ ಹೋಗಿದೆ. ಹೆಮ್ಮಾರಿ ರುದ್ರತಾಂಡವಕ್ಕೆ ಶಿವಾಜಿನಾಡಿನ ಜನರು ಬೆಚ್ಚಿ ಬಿದ್ದಿದ್ದಾರೆ. ಮಹಾರಾಷ್ಟ್ರದಲ್ಲಿ 7 ಸಾವಿರದ ಗಡಿಯತ್ತ ಸೋಂಕಿನ ಸುನಾಮಿ ಅಪ್ಪಳಿಸೋಕೆ ಹೆಜ್ಜೆ ಇಟ್ಟಿದೆ. ಈ ವರೆಗೆ 323 ಮಂದಿ ಕೊರೊನಾ ಜಾಲಕ್ಕೆ ಪ್ರಾನ ಕಳೆದ್ಕೊಂಡಿದ್ದಾರೆ. ಅದ್ರಲ್ಲೂ ನಿನ್ನೆ ಒಂದೇ ದಿನ 811 ಜನರಿಗೆ ಕ್ರೂರಿ ವೈರಸ್ ತಗ್ಲಾಕೊಂಡಿರೋದು ನಿಂತ ನೆಲವೇ ಕುಸಿದಂತಾಗಿದೆ.
ಧಾರಾವಿ ಸ್ಲಮ್ನಲ್ಲಿ ಮತ್ತೆ 21 ಜನರಿಗೆ ವೈರಸ್ ಅಟ್ಯಾಕ್!
ಇಷ್ಟೇ ಅಲ್ಲ, ಮುಂಬೈನ ಧಾರಾವಿ ಸ್ಲಮ್ನಲ್ಲಿ ಕೊರೊನಾ ವೈರಸ್ ವಿಷವ್ಯೂಹ ಮತ್ತಷ್ಟು ಏರಿಕೆಯಾಗಿದೆ. ಏಷ್ಯಾದ ಅತೀ ದೊಡ್ ಕೊಳಗೇರಿ ಧಾರಾವಿಯಲ್ಲಿ 21 ಹೊಸ ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿದ್ದು, 241ಕ್ಕೇರಿಯಾಗಿದೆ. 14 ಜನರು ಕ್ರೂರಿ ಕೂಪಕ್ಕೆ ಬಿದ್ದು ಸಾವಿನ ದಾರಿ ತುಳಿದಿದ್ದಾರೆ.
ಕೊರೊನಾ ರೌದ್ರಾವತಾರ!
ಗುಜರಾತ್- 2815
ದೆಹಲಿ – 2514
ರಾಜಸ್ಥಾನ – 2034
ಮಧ್ಯಪ್ರದೇಶ – 1952
ಉತ್ತರಪ್ರದೇಶ – 1778
ತಮಿಳುನಾಡು – 1755
ಆಂಧ್ರಪ್ರದೇಶ – 1061
ತೆಲಂಗಾಣ – 984
ಜೂ.30ರವರೆಗೆ ಜನರು ಗುಂಪು ಸೇರೋದಕ್ಕೆ ಬ್ರೇಕ್!
ಇನ್ನು, ಕೊರೊನಾ ಕ್ರೌರ್ಯಕ್ಕೆ ಉತ್ತರಪ್ರದೇಶ ಕೂಡ ಕಂಗಾಲಾಗಿ ಹೋಗಿದೆ. ಆದೆಷ್ಟೇ ಕಂಟ್ರೋಲ್ ಮಾಡಿದ್ರೂ ವೈರಸ್ ಕಟ್ಟಿ ಹಾಕೋದೆ ದೊಡ್ಡ ಸವಾಲಾಗಿದೆ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಜೂನ್ 30 ರವರೆಗೂ ಜನರು ಗುಂಪು ಸೇರುವಂತಿಲ್ಲ ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.
ಲಾಕ್ಡೌನ್ ಉಲ್ಲಂಘಿಸೋರೆ ಸೆರೆಗೆ ಖಾಕಿ ನ್ಯೂ ಪ್ಲ್ಯಾನ್!
ಇನ್ನು ಚಂಡೀಗಢದಲ್ಲಿ ಕೊರೊನಾ ಲಾಕ್ಡೌನ್ ಉಲ್ಲಂಘಿಸಿದ ಬೀದಿಗಿಳಿಯೋರನ್ನ ಹಿಡಿಯೋಕೆ ಹೊಸ ತಂತ್ರ ಅನುಸರಿಸಿದ್ದಾರೆ. ಉದ್ದನೆಯ ಸ್ಟಿಕ್ನಲ್ಲಿ ಮುಂಭಾಗದಲ್ಲಿ ರಿಂಗ್ ರೀತಿಯ ಸಲಕರಣೆ ಅಳವಡಿಸಲಾಗಿದ್ದು ಇದು ಜನರನ್ನ ಲಾಕ್ ಮಾಡುತ್ತದೆ. ಈ ಮೂಲಕ ಸಾಮಾಜಿಕ ಅಂತರದ ಬಗ್ಗೆಯೂ ಜನರಲ್ಲಿ ಪೊಲೀಸರು ಅರಿವು ಮೂಡಿಸ್ತಿದ್ದಾರೆ.
ಒಟ್ನಲ್ಲಿ ಕೊರೊನಾ ವೈರಸ್ ದಶದಿಕ್ಕುಗಳಲ್ಲೂ ಅಪ್ಪಳಿಸ್ತಿದೆ. ಕಂಡ ಕಂಡವರನ್ನ ತೆಕ್ಕೆಗೆ ಬಾಚಿಕೊಳ್ತಿರೋ ಹೆಮ್ಮಾರಿಯ ಮಾಯಾಜಾಲಕ್ಕೆ ಸಾವಿರಾರು ಮಂದಿ ಸಿಲುಕಿಕೊಳ್ತಿದ್ದಾರೆ. ಇದು ಮುಂದ್ಯಾವ ಹಂತಕ್ಕೆ ವ್ಯಾಪಿಸುತ್ತೋ ಅನ್ನೋದು ಎಲ್ಲರನ್ನೂ ಹೆಜ್ಜೆ ಹೆಜ್ಜೆಗೂ ಕಾಡ್ತಿದೆ.