ದೆಹಲಿ: ಭಾರತದಲ್ಲಿ ಭಾನುವಾರ ಒಟ್ಟು 12,899 ಮಂದಿಯಲ್ಲಿ ಕೊರೊನಾ ಸೋಂಕು (Coronavirus) ದೃಢಪಟ್ಟಿದ್ದು, 15 ಮಂದಿ ಮೃತಪಟ್ಟಿದ್ದಾರೆ. ಪ್ರಸ್ತುತ 72,474 ಸಕ್ರಿಯ ಪ್ರಕರಣಗಳಿವೆ (Active Cases). ದೇಶದಲ್ಲಿ ಈವರೆಗೆ ಒಟ್ಟು 4,32,96,692 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಒಟ್ಟು 5,24,855 ಮಂದಿ ಮೃತಪಟ್ಟಿದ್ದಾರೆ. ದೈನಂದಿನ ಪಾಸಿಟಿವಿಟಿ ಪ್ರಮಾಣ (Positivity Rate) ಶೇ 2.89, ವಾರದ ಪಾಸಿಟಿವಿಟಿ ಪ್ರಮಾಣ ಶೇ 2.50 ಇದೆ. ಚೇತರಿಕೆ ಪ್ರಮಾಣ ಶೇ 98.62 ಇದೆ.
ಕರ್ನಾಟಕದಲ್ಲಿ 623 ಹೊಸ ಪ್ರಕರಣಗಳು
ಕರ್ನಾಟಕದಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ (ಜೂನ್ 19) ರಾಜ್ಯದಲ್ಲಿ ಒಟ್ಟು 623 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 29,60,831 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ 40,071 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 5,035 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ವರದಿಯಾಗಿರುವ 623 ಸೋಂಕು ಪ್ರಕರಣಗಳ ಪೈಕಿ ಬೆಂಗಳೂರು ನಗರ ಒಂದರಲ್ಲಿಯೇ 588 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. 19 ಜಿಲ್ಲೆಗಳಲ್ಲಿ ಹೊಸ ಕೊವಿಡ್ ಪ್ರಕರಣ ಕಂಡುಬಂದಿಲ್ಲ. ದಕ್ಷಿಣ ಕನ್ನಡದಲ್ಲಿ 19, ಮೈಸೂರಿನಲ್ಲಿ 6, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 4, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು 23,170 ವ್ಯಕ್ತಿಗಳಿಂದ ಸಂಗ್ರಹಿಸಿದ ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಯಿತು.
ಕಳೆದ ಮೇ 20ರ ನಂತರ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿದೆ. ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 2.68ಕ್ಕೆ ಮುಟ್ಟಿದೆ. ಬೆಂಗಳೂರು ನಗರದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಪ್ರಸ್ತುತ ನಗರ ವ್ಯಾಪ್ತಿಯಲ್ಲಿ 27 ಸಕ್ರಿಯ ಕ್ಲಸ್ಟರ್ಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿ 129 ವಾರ್ಡ್ಗಳಲ್ಲಿ 10ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ. ಸೋಂಕು ನಿಯಂತ್ರಣಕ್ಕೆಂದು ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 am, Mon, 20 June 22