ದೆಹಲಿ: 12 ರಾಜ್ಯಗಳು ಲಸಿಕಾ ಖರೀದಿ ನೀತಿ ಜಾರಿಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕೇಂದ್ರೀಕೃತ ಕೊರೊನಾ ಲಸಿಕಾ ಖರೀದಿ ನೀತಿ ಜಾರಿ ಮಾಡಲಾಯಿತು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು. ಈಗಾಗಲೇ ಲಸಿಕಾ ಕಾರ್ಯಕ್ರಮದ ಮಾರ್ಗಸೂಚಿ ರೂಪಿಸಲಾಗಿದೆ. ಪರಿಷ್ಕೃತ ರಾಷ್ಟ್ರೀಯ ಕೊರೊನಾ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ದೇಶದಲ್ಲಿ ಉತ್ಪಾದನೆ ಆಗುವ ಕೊರೊನಾ ಲಸಿಕೆಯ ಶೇ 75ರಷ್ಟು ಡೋಸ್ಗಳನ್ನು ಕೇಂದ್ರವೇ ಖರೀದಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಿದೆ ಎಂದು ತಿಳಿಸಿದರು.
ಜನಸಂಖ್ಯೆ, ಕೊರೊನಾ ತೀವ್ರತೆ, ಲಸಿಕೆ ಅಭಿಯಾನದ ಪ್ರಗತಿ ಆಧರಿಸಿ ಲಸಿಕೆ ಹಂಚಲಾಗುತ್ತದೆ. ಕೊರೊನಾ ಲಸಿಕೆ ನೀಡುವ ಮೂಲಕ ಸಾವು ತಡೆಯಬೇಕು. ರಾಜ್ಯಗಳೇ ತಮ್ಮ ಆದ್ಯತಾ ಗುಂಪು ಗುರುತಿಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟವರಲ್ಲೂ ಆದ್ಯತೆಯ ಗುಂಪುಗಳನ್ನು ಗುರುತಿಸಿಕೊಳ್ಳಬಹುದು. ಲಸಿಕೆ ಪೂರೈಕೆ ಬಗ್ಗೆ ಒಂದು ತಿಂಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.
ಆಗಸ್ಟ್ ತಿಂಗಳಲ್ಲಿ ಲಸಿಕೆ ಪೂರೈಕೆ ಕುರಿತು ಮಾಹಿತಿ ನೀಡಿದ ಅವರು, 25 ಕೋಟಿ ಡೋಸ್ ಕೊವಿಶೀಲ್ಡ್, 19 ಕೋಟಿ ಡೋಸ್ ಕೊವ್ಯಾಕ್ಸಿನ್ ಲಸಿಕೆ ಖರೀದಿಗೆ ಆರ್ಡರ್ ನೀಡಿದ್ದೇವೆ. ಈ ಎರಡು ಕಂಪನಿಗಳಿಗೆ ಲಸಿಕೆ ಪೂರೈಕೆಗಾಗಿ ಶೇ 30ರಷ್ಟು ಮುಂಗಡ ಹಣ ನೀಡಿದ್ದೇವೆ. ಬಯೋಲಾಜಿಕಲ್ಸ್ ಇ ಕಂಪನಿಗೂ 30 ಕೋಟಿ ಡೋಸ್ ಲಸಿಕೆ ಪೂರೈಸಲು ಸೂಚಿಸಲಾಗಿದೆ. ಒಟ್ಟು 74 ಕೋಟಿ ಡೋಸ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಿದ್ದೇವೆ ಎಂದರು.
ಜುಲೈವರೆಗೂ 53.6 ಕೋಟಿ ಲಸಿಕೆ ಸಿಗಲಿದೆ. ಆಗಸ್ಟ್, ಸೆಪ್ಟಂಬರ್ನಲ್ಲಿ 74 ಡೋಸ್ ಕೋಟಿ ಲಸಿಕೆ ಸಿಗಲಿದೆ. ಜನವರಿಯಿಂದ ಜುಲೈ ಅಂತ್ಯಕ್ಕೆ 53.6 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಆಗಸ್ಟ್-ಡಿಸೆಂಬರ್‌ನೊಳಗೆ 74 ಕೋಟಿ ಡೋಸ್ ಲಸಿಕೆ ಪೂರೈಸುತ್ತೇವೆ. ಡಿಸೆಂಬರ್‌ನೊಳಗೆ ದೇಶಕ್ಕೆ ಒಟ್ಟಾರೆ 127.6 ಕೋಟಿ ಡೋಸ್ ಲಸಿಕೆ ಸಿಗುವಂತೆ ಪಕ್ಕಾ ಪ್ಲಾನ್ ಮಾಡಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲ ಕಂಪನಿಗಳ ಲಸಿಕೆಯೂ ಪೂರೈಕೆಯಾಗುವ ನಿರೀಕ್ಷೆಯಿದೆ. ನಾವು ಉಳಿದ ಕಂಪನಿಗಳ ಲಸಿಕೆ ಪ್ರಯೋಗ ಯಶಸ್ವಿಯಾಗುವುದನ್ನೇ ಕಾಯುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಲಸಿಕೆ ಪೂರೈಕೆ ಬಗ್ಗೆ ಸುಪ್ರೀಂಕೋರ್ಟ್ ಮಾರ್ಗಸೂಚಿ ಗೌರವಿಸುತ್ತೇವೆ. ಸಾರ್ವಜನಿಕರ ಅಭಿಪ್ರಾಯ ಅಭಿಪ್ರಾಯ ರಾತ್ರೋರಾತ್ರಿ ರೂಪುಗೊಳ್ಳುವುದಿಲ್ಲ. ಮೇ 15ರಂದೇ ಲಸಿಕಾ ನೀತಿ ಬದಲಾಯಿಸಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ಕೊಟ್ಟಿದ್ದರು. ಹತ್ತು, ಹದಿನೈದು ದಿನಗಳ ಮುಂಚೆ ಹೊಸ ಲಸಿಕಾ ನೀತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪ್ರೆಸಂಟೇಷನ್ ನೀಡಲಾಗಿತ್ತು. ಪ್ರತಿಕ್ರಿಯೆ, ದತ್ತಾಂಶ ಆಧರಿಸಿ ಕೇಂದ್ರದ ನೀತಿ ರೂಪಿಸಲಾಗಿದೆ ಎಂದರು.
ಸೋಂಕಿತರ ಚಿಕಿತ್ಸೆ ಮಾರ್ಗಸೂಚಿ ಬಗ್ಗೆ ಗೊಂದಲವಿಲ್ಲ. ಡಿಎಚ್ಜಿಎಸ್ ವೆಬ್ಸೈಟ್ನಲ್ಲಿ ಚಿಕಿತ್ಸೆಗೆ ಮಾರ್ಗಸೂಚಿ ನೀಡಲಾಗಿದೆ. ವಿದೇಶಕ್ಕೆ ಉದ್ಯೋಗ, ಶಿಕ್ಷಣ, ಕ್ರೀಡಾಕೂಟಕ್ಕೆ ಹೋಗುವವರು 1 ತಿಂಗಳ ಬಳಿಕ 2ನೇ ಡೋಸ್ ಲಸಿಕೆ ಪಡೆಯಬಹುದು. ಮೊದಲ ಡೋಸ್ ಪಡೆಯುವಾಗ ಇಂಥವರು ತಮ್ಮ ಪಾಸ್ಪೋರ್ಟ್ ನಂಬರ್ ನೀಡಬೇಕು. ಲಸಿಕೆ ಸರ್ಟಿಫಿಕೇಟ್ನಲ್ಲಿಯೂ ಪಾಸ್ಪೋರ್ಟ್ ನಂಬರ್ ಉಲ್ಲೇಖವಾಗಲಿದೆ ಎಂದು ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದರು. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರೂಪಿಸಿರುವ ಮಾರ್ಗಸೂಚಿ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
(Coronavirus Vaccine New Policy Framed Because of Demands from 12 States)
ಇದನ್ನೂ ಓದಿ: ಕೊವಿಡ್ 19 ಮೂರನೇ ಅಲೆ ಮಕ್ಕಳಿಗೇ ಬಾಧಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯೂ ಇಲ್ಲ: ಡಾ.ವಿಕೆ.ಪೌಲ್
ಇದನ್ನೂ ಓದಿ: ಲಸಿಕೆ ನೀಡಿಕೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದ ಭಾರತ; ಶೀಘ್ರವೇ ಮಕ್ಕಳಿಗೂ ಲಸಿಕೆ: ವಿ ಕೆ ಪೌಲ್
Published On - 6:58 pm, Tue, 8 June 21