ಕೊರೊನಾ ಲಸಿಕೆಯನ್ನು ದೇಶಾದ್ಯಂತ ಹಂಚುತ್ತೇವೆ: ಪ್ರಧಾನಿ ನರೇಂದ್ರ ಮೋದಿ ಅಭಯ ಹಸ್ತ
ಕೊರೊನಾ ಲಸಿಕೆ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವೇ ಮುಂಚೂಣಿಯಲ್ಲಿರಲಿದೆ. ನಮ್ಮ ವಿಜ್ಞಾನಿಗಳು ಆತ್ಮನಿರ್ಭರ ಭಾರತಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕೊರೊನಾ ಲಸಿಕೆ ವಿಚಾರದಲ್ಲಿ ನಾವು ಸ್ವಾವಲಂಬಿಗಳು..
ದೆಹಲಿ: ಭಾರತದಲ್ಲಿ 2 ಸಂಸ್ಥೆಗಳ ಕೊರೊನಾ ಲಸಿಕೆಗೆ ಅನುಮತಿ ಸಿಕ್ಕಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪರಿಸರ ಮಾನದಂಡದ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿರುವ ಮೋದಿ, ದೇಶದ ವಿಜ್ಞಾನಿಗಳು 2 ಲಸಿಕೆಗಳನ್ನು ಸಿದ್ಧಪಡಿಸಿದ್ದಾರೆ. ಇದು ಆತ್ಮನಿರ್ಭರ ಭಾರತಕ್ಕೆ ದೊಡ್ಡ ಕೊಡುಗೆಯಾಗಿದ್ದು, ನಮ್ಮ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.
ಕೊರೊನಾ ಲಸಿಕೆಯನ್ನು ದೇಶಾದ್ಯಂತ ಹಂಚುತ್ತೇವೆ. ಆ ಮೂಲಕ ವಿಶ್ವದಲ್ಲೇ ದೊಡ್ಡ ಪ್ರಮಾಣದ ಲಸಿಕೆ ಹಂಚಿಕೆಗೆ ಭಾರತ ಸಾಕ್ಷಿಯಾಗಲಿದೆ. ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಕೊರೊನಾ ಲಸಿಕೆ ಉತ್ಪಾದನೆ ಸಹ ಆಗಲಿದೆ. ಇದುವರೆಗೆ ವಿದೇಶಿ ಉತ್ಪನ್ನಗಳ ಆಮದು ಹೆಚ್ಚಾಗಿತ್ತು. ಆದರೆ ಈಗ ಭಾರತದಲ್ಲೇ ಲಸಿಕೆ ತಯಾರಿಸುವ ಮೂಲಕ ಈ ವಿಚಾರದಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಹಲವು ವಿಚಾರಗಳಲ್ಲಿ ಜಾಗತಿಕ ನಾಯಕನಾಗಿ ಬೆಳೆಯುತ್ತಿರುವ ಭಾರತ ವಿಜ್ಞಾನ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದೆ ಎನ್ನುವುದಕ್ಕೆ ಕೊರೊನಾ ಲಸಿಕೆ ತಯಾರಿಕೆ ಸಾಕ್ಷಿಯಾಗಿದೆ. ಮಾದರಿ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತಕ್ಕೆ ನಮ್ಮ ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ. ಅದನ್ನು ನಾವು ಪ್ರಶಂಸಿಸಲೇಬೇಕು ಎಂದು ಹೇಳಿದ್ದಾರೆ.