ಕೊವ್ಯಾಕ್ಸಿನ್ ಲಸಿಕೆ ಪಡೆದ ಮಕ್ಕಳಿಗೆ ಪ್ಯಾರಾಸೆಟಮಾಲ್ ಅಥವಾ ನೋವು ನಿವಾರಕ ಅಗತ್ಯವಿಲ್ಲ: ಭಾರತ್ ಬಯೊಟೆಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 05, 2022 | 8:01 PM

Covaxin Covid 19 Vaccine: ಭಾರತ್ ಬಯೊಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಪಡೆದವರಿಗೆ ಪ್ಯಾರಾಸೆಟಮಾಲ್ ಅಥವಾ ಇತರ ಯಾವುದೇ ಮಾತ್ರೆಗಳ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕೊವ್ಯಾಕ್ಸಿನ್ ಲಸಿಕೆ ಪಡೆದ ಮಕ್ಕಳಿಗೆ ಪ್ಯಾರಾಸೆಟಮಾಲ್ ಅಥವಾ ನೋವು ನಿವಾರಕ ಅಗತ್ಯವಿಲ್ಲ: ಭಾರತ್ ಬಯೊಟೆಕ್
ಕೊವ್ಯಾಕ್ಸಿನ್​
Follow us on

ದೆಹಲಿ: ಭಾರತ್ ಬಯೊಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ (Covaxin Covid 19 Vaccine) ಲಸಿಕೆ ಪಡೆದವರಿಗೆ ಪ್ಯಾರಾಸೆಟಮಾಲ್ ಅಥವಾ ಇತರ ಯಾವುದೇ ಮಾತ್ರೆಗಳ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆದ ಮಕ್ಕಳಿಗೆ 500 ಎಂಜಿಯ ಮೂರು ಪ್ಯಾರಾಸೆಟಮಾಲ್ ಮಾತ್ರೆಗಳನ್ನು ಶಿಫಾರಸು ಮಾಡಲಾಗುತ್ತಿದೆ. ಇದು ಅಗತ್ಯವಿಲ್ಲ ಎಂದು ಸಂಸ್ಥೆಯು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 15ರಿಂದ 18 ವರ್ಷ ವಯೋಮಿತಿಯ ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲು ಭಾರತದ ಔಷಧ ಮಹಾನಿಯಂತ್ರಕರು Drug Controller General of India – DCGI) ಇತ್ತೀಚೆಗಷ್ಟೇ ಅನುಮತಿ ನೀಡಿದ್ದರು. ಅನುಮತಿ ದೊರೆತ ನಂತರ ಭಾರತದಲ್ಲಿ ಮತ್ತೊಂದು ಲಸಿಕಾಕರಣ ಆಂದೋಲನವನ್ನು ಹಲವು ರಾಜ್ಯಗಳು ಆರಂಭಿಸಿದವು. 15ರಿಂದ 18 ವರ್ಷ ವಯೋಮಿತಿಯ ಮಕ್ಕಳಿಗೆ ನೀಡಲು ಅನುಮೋದನೆ ಪಡೆದುಕೊಂಡಿರುವ ಏಕೈಕ ಲಸಿಕೆಯಾಗಿದೆ.

ಭಾರತ್ ಬಯೊಟೆಕ್ ಸಂಸ್ಥೆಯು ನಡೆಸಿದ್ದ ಕ್ಲಿನಿಕಲ್ ಟ್ರಯಲ್ಸ್​ನಲ್ಲಿ ಪಾಲ್ಗೊಂಡಿದ್ದ ಸುಮಾರು 30,000 ಮಕ್ಕಳ ಪೈಕಿ ಶೇ 10ರಿಂದ 20 ಮಕ್ಕಳಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಂಡಿದ್ದವು. ಬಹುತೇಕ ಮಕ್ಕಳಲ್ಲಿ ಒಂದೆರೆಡು ದಿನಗಳಲ್ಲಿಯೇ ಈ ಅಡ್ಡಪರಿಣಾಮಗಳ ತೀವ್ರತೆ ಕಡಿಮೆಯಾಗಿತ್ತು. ಯಾವುದೇ ಮಗುವಿಗೆ ಔಷಧಿಗಳನ್ನು ನೀಡಬೇಕಾದ ಪರಿಸ್ಥಿತಿ ಬರಲಿಲ್ಲ ಎಂದು ಭಾರತ್ ಬಯೊಟೆಕ್ ತಿಳಿಸಿದೆ. ನೀವು ವೈದ್ಯರನ್ನು ಸಂಪರ್ಕಿಸಿದಾಗ ಅವರು ನಿಮಗೆ ಔಷಧಗಳನ್ನು ಶಿಫಾರಸು ಮಾಡಬಹುದು. ಇತರ ಕೊರೊನಾ ಲಸಿಕೆಗಳೊಂದಿಗೆ ಪ್ಯಾರಾಸೆಟಮಾಲ್ ಶಿಫಾರಸು ಮಾಡಲಾಗಿದೆ. ಆದರೆ ಕೊವ್ಯಾಕ್ಸಿನ್​ ಪಡೆದವರಿಗೆ ಪ್ಯಾರಾಸೆಟಮಾಲ್ ಕೊಡುವುದು ಅಗತ್ಯವಿಲ್ಲ ಎಂದು ಕಂಪನಿ ಹೇಳಿದೆ.

ಈ ನಡುವೆ ಭಾರತವು 15ರಿಂದ 18 ವರ್ಷದ ವಯೋಮಿತಿಯ 1 ಕೋಟಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಬುಧವಾರ ಘೋಷಿಸಿದರು. ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾದ ಮೂರೇ ದಿನಕ್ಕೆ ಈ ಸಾಧನೆ ಮಾಡಲಾಗಿದೆ. ಕಳೆದ ಜನವರಿ 3ರಿಂದ ಭಾರತದಲ್ಲಿ 15ರಿಂದ 18 ವಯೋಮಿತಿಯ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಯುವಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಸಚಿವರು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದರು.

ಮಕ್ಕಳಿಗೆ ಲಸಿಕೆಯಿಂದ ಅನುಕೂಲ
ಕೊವ್ಯಾಕ್ಸಿನ್​ ಲಸಿಕೆ ಮಕ್ಕಳ ದೇಹದಲ್ಲಿ ಉತ್ತಮ ರೋಗ ನಿರೋಧಕ ಪ್ರತಿಕ್ರಿಯೆಗೆ ಕಾರಣವಾಗಬಲ್ಲದು ಎಂಬುದು ಪ್ರಯೋಗದಿಂದ ಗೊತ್ತಾಗಿದೆ ಎಂದು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಪ್ರತಿರಕ್ಷಣೆ ಸಂಬಂಧ)ಯ ಕೊವಿಡ್​ 19 ಕಾರ್ಯಾಕಾರಿ ಗುಂಪಿನ ಅಧ್ಯಕ್ಷ ಡಾ. ಎನ್.ಕೆ.ಅರೋರಾ ಈ ಹಿಂದೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ವಾಸ್ತವದಲ್ಲಿ ಹೇಳಬೇಕೆಂದರೆ, 15-18ವರ್ಷದವರೂ ಕೂಡ 18ವರ್ಷ ಮೇಲ್ಪಟ್ಟ ವಯಸ್ಕರಂತೆಯೇ ಆಗಿರುತ್ತಾರೆ. ದೇಶದಲ್ಲಿ ಕೊವಿಡ್​ 19ನಿಂದ ಮೃತಪಟ್ಟ ಒಟ್ಟಾರೆ 18 ವರ್ಷದ ಒಳಗಿನವರಲ್ಲಿ ಮೂರನೇ ಎರಡರಷ್ಟು ಮಂದಿ 15ವರ್ಷ ಮೇಲ್ಪಟ್ಟವರೇ ಆಗಿದ್ದಾರೆ ಎಂಬುದನ್ನು ನಮ್ಮ ಸಂಶೋಧನೆ ಹೇಳುತ್ತದೆ. ಹಾಗಾಗಿ ಹದಿಹರೆಯದವರನ್ನು ಕೊವಿಡ್​ 19 ಸೋಂಕಿನಿಂದ ರಕ್ಷಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅರೋರಾ ಮಾಹಿತಿ ನೀಡಿದ್ದರು.

ಹದಿಹರೆಯದವರಿಗೆ ಲಸಿಕೆ ಕೊಟ್ಟು ಅವರಲ್ಲಿ ಪ್ರತಿರೋಧ ಹೆಚ್ಚಿಸುವುದರಿಂದ ಎರಡು ಅನುಕೂಲಗಳಿವೆ. ಈ ವಯಸ್ಸಿನವರು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಶಾಲೆ, ಕಾಲೇಜು ಎಂದುಕೊಂಡು ಓಡಾಡುತ್ತಿರುತ್ತಾರೆ. ಹೀಗಾಗಿ ಕೊರೊನಾ ಸೋಂಕು ತಗುಲುವ ಅಪಾಯ ಜಾಸ್ತಿ ಇರುತ್ತದೆ. ಅದರಲ್ಲೂ ಈಗ ಒಮಿಕ್ರಾನ್​ ವೈರಾಣು ಹರಡುತ್ತಿರುವುದರಿಂದ ಲಸಿಕೆ ಕೊಡುವುದು ತುಂಬ ಉಪಯೋಗ. ಹಾಗೇ, ಎರಡನೇಯದಾಗಿ 15-18ನೇ ವಯಸ್ಸಿನವರು ಶಾಲೆ-ಕಾಲೇಜು, ಟ್ಯೂಷನ್​ ಮತ್ತಿತರ ಕಾರಣಕ್ಕೆ ಹೊರಗೆ ಹೋಗಿ, ಸೋಂಕು ತಗುಲಿಸಿಕೊಂಡು ಮನೆಗೆ ಬಂದರೆ, ಮನೆಯಲ್ಲಿ ಇದ್ದ ಹಿರಿಯರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಇವರಿಗೇ ಲಸಿಕೆ ಹಾಕಿದರೆ ಅಪಾಯ ತಪ್ಪಿಸಬಹುದು. ಸೋಂಕಿನ ತೀವ್ರತೆ ಕಡಿಮೆ ಮಾಡಬಹುದು ಎಂದು ಅರೋರಾ ವಿಶ್ಲೇಷಿಸಿದ್ದರು.

ಇದನ್ನೂ ಓದಿ: ಬೂಸ್ಟರ್‌ಗಳಾಗಿ ಲಸಿಕೆಗಳ ಮಿಶ್ರಣ ನೀಡಲಾಗುವುದಿಲ್ಲ: ಕೇಂದ್ರ ಸರ್ಕಾರ
ಇದನ್ನೂ ಓದಿ: ಮಕ್ಕಳಿಗೆ ಲಸಿಕೆ; ದೇಶದಲ್ಲಿ ಕರ್ನಾಟಕ 3ನೇ ಸ್ಥಾನ; ಡಾ. ಕೆ ಸುಧಾಕರ್ ಮಾಹಿತಿ