ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದ ಕೆಲ ಭಾಗಗಳಲ್ಲಿ ರಾತ್ರಿ ಲಾಕ್ಡೌನ್ ಘೋಷಿಸಲಾಗಿದೆ. ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಒತ್ತಾಯಪೂರ್ವಕವಾಗಿಯಾದರೂ ಸರಿಯೇ, ಜನರು ಮಾಸ್ಕ್ ಬಳಸುವಂತೆ ಮಾಡಿ ಎಂದು ಕೇಂದ್ರ ಸರ್ಕಾರ ಹೇಳಿರುವುದನ್ನು ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡಿವೆ.
ದೆಹಲಿಯಲ್ಲಿಯೂ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಕೊರೊನಾ ಸೋಂಕು ಹರಡುತ್ತಿದ್ದರೂ ಲಾಕ್ಡೌನ್ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಆಲೋಚನೆಯಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ಏಪ್ರಿಲ್ 11ರವರೆಗೆ 1ರಿಂದ 8ನೇ ತರಗತಿಗಳ ಪಾಠ ನಿಲ್ಲಿಸುವಂತೆ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಸೂಚಿಸಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 81,466 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 12,302,110ಕ್ಕೆ ಮುಟ್ಟಿದೆ. ಮಹಾರಾಷ್ಟ್ರದಲ್ಲಿ ದೇಶದಲ್ಲಿಯೇ ಹೆಚ್ಚು, ಅಂದರೆ 43,183 ಪ್ರಕರಣಗಳು ವರದಿಯಾಗಿವೆ. ಛತ್ತೀಸಗಡ ಮತ್ತು ಕರ್ನಾಟಕ ರಾಜ್ಯಗಳಲ್ಲಿ 4000ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ದೇಶದ ವಿವಿಧೆಡೆ ಸೋಂಕಿನಿಂದ 469 ಮಂದಿ ಮೃತಪಟ್ಟಿದ್ದಾರೆ. ಸೋಂಕಿನಿಂದ ಒಟ್ಟು ಸಾವಿನ ಪ್ರಮಾಣ 1.63 ಲಕ್ಷಕ್ಕೆ ಮುಟ್ಟಿದೆ.
ದೇಶದಲ್ಲಿ ಕೊರೊನಾ ಸೋಂಕಿನ 2ನೇ ಅಲೆಯ ಭೀತಿ ಹೆಚ್ಚಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆಯ ಮಹಾಔಷಧ ನಿಯಂತ್ರಕರು ಸ್ವಯಂಸೇವಕರಿಗೆ ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಯ 3ನೇ ಚುಚ್ಚುಮದ್ದು ನೀಡಿ, ಪರಿಶೀಲನೆ ನಡೆಸಲು ಅನುಮತಿ ನೀಡಿದ್ದಾರೆ. ಭಾರತ್ ಬಯೋಟೆಕ್ನ 3ನೇ ಲಸಿಕೆಗೆ ಅವಕಾಶ ಸಿಕ್ಕರೆ ಈ ಲಸಿಕೆ ಪಡೆದವರಲ್ಲಿಯೂ ಕೊರೊನಾ ಸೋಂಕು ನಿರೋಧಕ ಶಕ್ತಿ ಇನ್ನೂ ಕೆಲ ವರ್ಷ ಇರುತ್ತದೆ ಎಂದು ಹೇಳಲಾಗಿದೆ.
ಮಧ್ಯಪ್ರದೇಶದ 4 ಜಿಲ್ಲೆಗಳಲ್ಲಿ ಲಾಕ್ಡೌನ್
ಮಧ್ಯಪ್ರದೇಶ ಸರ್ಕಾರವು ಚಿಂದ್ವಾರ, ಬೇತುಲ್, ಖರ್ಗೊನ್ ಮತ್ತು ರಾಟ್ಲಂ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ತಡೆಯಲೆಂದು ಲಾಕ್ಡೌನ್ ಘೋಷಿಸಿದೆ. ಗುರುವಾರ ರಾತ್ರಿ 10ರಿಂದ ಜಾರಿಗೆ ಬಂದಿರುವ ಲಾಕ್ಡೌನ್ ಏಪ್ರಿಲ್ 5ರ ಮುಂಜಾನೆ 6ರವರೆಗೂ ಮುಂದುವರಿಯಲಿದೆ ಎಂದು ಪಿಟಿಐ ವರದಿ ಮಾಡಿದೆ.
ಏಪ್ರಿಲ್ ಮಧ್ಯದಲ್ಲಿ ಹೆಚ್ಚಾಗಬಹುದು ಸೋಂಕು
ಕೋವಿಡ್-19 ಪಿಡುಗನ್ನು ಗಣಿತದ ಮಾದರಿ ಅನ್ವಯ ವಿಶ್ಲೇಷಿಸಿರುವ ತಜ್ಞರು ಏಪ್ರಿಲ್ ಮಧ್ಯಭಾಗದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಬಹುದು. ಮೇ ತಿಂಗಳ ಅಂತ್ಯದಲ್ಲಿ ಹಠಾತ್ ಇಳಿಕೆಯಾಗಬಹುದು ಎಂದು ಹೇಳಿದ್ದಾರೆ. ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರು ಈ ವಿಶ್ಲೇಷಣೆ ಮಾಡಿದ್ದಾರೆ.
36.7 ಲಕ್ಷ ಡೋಸ್ ಲಸಿಕೆ
ಭಾರತದಲ್ಲಿ ಒಂದೇ ದಿನ 36.71,242 ಕೋವಿಡ್-19 ಲಸಿಕೆ ಡೋಸ್ ನೀಡಲಾಗಿದೆ. ಇದು ಈವರೆಗೆ ದಾಖಲಾಗಿರುವ ಅತಿದೊಡ್ಡ ಮಟ್ಟದ ಲಸಿಕೆ ವಿತರಣೆ ಪ್ರಮಾಣ ಎನಿಸಿದೆ. ಈವರೆಗೆ ದೇಶದಲ್ಲಿ ಒಟ್ಟು 6.87 ಕೋಟಿ (6,87,89,138) ಕೋವಿಡ್-19 ಲಸಿಕೆ ಡೋಸ್ ನೀಡಲಾಗಿದೆ.
ನೆರೆಯ ರಾಜ್ಯಗಳಲ್ಲಿ ಕೊರೊನಾ
ಮಹಾರಾಷ್ಟ್ರದಲ್ಲಿ ಇಂದು 47,827 ಜನರಿಗೆ ಕೊರೊನಾ ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,04,076ಕ್ಕೆ ಏರಿಕೆಯಾಗಿದೆ. ಆ ಪೈಕಿ 24,57,494 ಜನ ಗುಣಮುಖರಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 24,126 ಸೋಂಕಿತರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿಂದು ಕೊರೊನಾ ಸೋಂಕಿಗೆ 202 ಜನರು ಬಲಿಯಾಗಿದ್ದಾರೆ. ಇದುವರೆಗೆ ಕೊರೊನಾ ಸೋಂಕಿನಿಂದ 55,379 ಜನರ ಸಾವು ಸಂಭವಿಸಿದೆ. 3,89,832 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ಕೇರಳದಲ್ಲಿ ಶುಕ್ರವಾರ 2,506 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದೆ. ಇದೊಂದಿಗೆ ಕೇರಳದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 26,407ಕ್ಕೆ ಮುಟ್ಟಿದೆ.
ತಮಿಳುನಾಡು ರಾಜ್ಯದಲ್ಲಿ 3,290 ಜನರಿಗೆ ಕೊರೊನಾ ದೃಢಪಟ್ಟಿದೆ. ತನ್ಮೂಲಕ ಸೋಂಕಿತರ ಸಂಖ್ಯೆ 8,92,780ಕ್ಕೆ ಏರಿಕೆಯಾಗಿದೆ. 8,92,780 ಸೋಂಕಿತರ ಪೈಕಿ 8,61,424 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಂದು 1,715 ಸೋಂಕಿತರು ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿಗೆ ಇಂದು 12 ಜನ ಬಲಿಯಾಗಿದ್ದು, ಈವರೆಗೆ ಕೊರೊನಾಗೆ 12,750 ಜನ ಸಾವನ್ನಪ್ಪಿದ್ದಾರೆ. ಒಟ್ಟು 18,606 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
(Covid 19 Coronavirus India Update Maharashtra Madhya Pradesh Kerala Tamil Nadu)
ಇದನ್ನೂ ಓದಿ: Explainer: ಭಾರತದಲ್ಲಿ ಈಗ ಹರಡುತ್ತಿರುವ ಕೊರೊನಾ 2ನೇ ಅಲೆ ಮೊದಲ ಅಲೆಗಿಂತ ಸಂಪೂರ್ಣ ಭಿನ್ನ: ಏನಿದು 2ನೇ ಅಲೆ? ಏಕಿಷ್ಟು ಆತಂಕ?
ಇದನ್ನೂ ಓದಿ: ಕೊರೊನಾ ತಡೆಗೆ ಹೊಸ ಮಾರ್ಗಸೂಚಿ: ಬಾರ್, ರೆಸ್ಟೋರೆಂಟ್, ಜಿಮ್, ಸ್ವಿಮ್ಗೆ ನಿರ್ಬಂಧ
Published On - 11:19 pm, Fri, 2 April 21