ದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊವಿಡ್19 ಎರಡನೇ ಅಲೆಯ ಬಳಿಕ ಇಳಿಮುಖವಾಗಿದೆ. ಆದರೆ, ಕೊರೊನಾದಿಂದ ರಕ್ಷಣೆ ಪಡೆಯಲು ಕೊವಿಡ್19 ವಿರುದ್ಧದ ಲಸಿಕೆ ಅನಿವಾರ್ಯ ಎಂಬುದು ಈಗಾಗಲೇ ಎಲ್ಲರಿಗೂ ಮನದಟ್ಟಾಗಿದೆ. ಎರಡನೇ ಅಲೆಯ ವೇಳೆ, ಲಸಿಕೆ ನೀಡಿಕೆ, ಲಸಿಕೆ ಉತ್ಪಾದನೆ, ಲಸಿಕೆ ಪಡೆಯುವಿಕೆಗೆ ಜನರು, ಸರ್ಕಾರ ಮತ್ತು ಸಂಬಂಧಪಟ್ಟವರು ಮುತುವರ್ಜಿ ತೋರಿದರು. ಆ ಅನಿವಾರ್ಯತೆ ಎದುರಾಗಿತ್ತು. ಲಸಿಕೆ ನೀಡಿಕೆಯ ಮಹತ್ವ ಅರಿವಾಗಿ, ಲಸಿಕೆ ನೀಡಿಕೆಗೆ ವೇಗ ಹೆಚ್ಚು ಮಾಡುವತ್ತ ಗಮನಹರಿಸುವಂತಾಗಿತ್ತು.
ಲಸಿಕೆ ಉತ್ಪಾದನೆಯ ಬಗ್ಗೆ ಸರ್ಕಾರ ಮಹತ್ವದ ಹೇಳಿಕೆಯೊಂದನ್ನು ಮಂಗಳವಾರ (ಆಗಸ್ಟ್ 3) ನೀಡಿದೆ. ಡಿಸೆಂಬರ್ ವೇಳೆಗೆ ಕೊವಿಶೀಲ್ಡ್ ಲಸಿಕೆಯ ಮಾಸಿಕ ಉತ್ಪಾದನೆ 12 ಕೋಟಿಗೂ ಹೆಚ್ಚು ಹಾಗೂ ಕೊವ್ಯಾಕ್ಸಿನ್ ಲಸಿಕೆ ಮಾಸಿಕ ಉತ್ಪಾದನೆ ಪ್ರಮಾಣ 5.80 ಕೋಟಿ ಆಗಲಿದೆ ಎಂದು ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ರಾಜ್ಯ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ ಈ ಮಾಹಿತಿ ನೀಡಿದ್ದಾರೆ. ಪ್ರತೀ ತಿಂಗಳ ಕೊವಿಶೀಲ್ಡ್ ಲಸಿಕೆ ಉತ್ಪಾದನೆಯು 110 ಮಿಲಿಯನ್ ಡೋಸ್ಗಳಿಂದ 120 ಮಿಲಿಯನ್ ಡೋಸ್ಗೆ ಹಾಗೂ ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆ ಪ್ರಮಾಣವು 25 ಮಿಲಿಯನ್ನಿಂದ 58 ಮಿಲಿಯನ್ ಡೋಸ್ಗೆ ಏರಿಕೆ ಆಗಲಿದೆ ಎಂದು ಅವರು ಲಿಖಿತ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತವು ಸುಮಾರು 47 ಕೋಟಿ ಡೋಸ್ ಲಸಿಕೆ ನೀಡಿಕೆಯನ್ನು ಈಗಾಗಲೇ ನಿರ್ವಹಿಸಿದೆ. ಭಾರತದ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಸಂಪೂರ್ಣ ಶ್ರಮಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್ ಹಾಗೂ ನವಂಬರ್ ಒಳಗಾಗಿ ಇನ್ನೂ ನಾಲ್ಕು ಔಷಧ ಕಂಪೆನಿಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿಕೊಳ್ಳುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ‘ಭಾರತ್ ಬಯೋಟೆಕ್ ಲಸಿಕೆ ಉತ್ಪಾದನೆಗೆ ಆರಂಭಿಕ ಸಮಸ್ಯೆ; ಆದರೆ, 2022 ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ’
3ನೇ ಡೋಸ್ ಕೊರೊನಾ ಲಸಿಕೆ ವಿತರಣೆಗೆ ಚಿಂತನೆ; ಐಸಿಎಂಆರ್ ಅನುಮತಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ
(Covishield Covaccine Vaccine Production to be increased to 120 Million 58 Millon by December)