ದೆಹಲಿ: ಕೊರೊನಾ ವೈರಾಣು ಹರಡುವಿಕೆಯನ್ನು ಹತೋಟಿಗೆ ತರಲು ಲಸಿಕೆಯೊಂದೇ ಸದ್ಯಕ್ಕಿರುವ ಪ್ರಬಲ ಅಸ್ತ್ರ ಎಂದು ತಜ್ಞರಾದಿಯಾಗಿ ಎಲ್ಲರೂ ನಂಬಿದ್ದಾರೆ. ಭಾರತದಲ್ಲಿ ಈ ವರ್ಷದ ಆರಂಭದಿಂದ ವಿತರಿಸಲಾಗುತ್ತಿರುವ ಕೊರೊನಾ ಲಸಿಕೆ ಬಗ್ಗೆ ಶುರುವಿನಲ್ಲಿ ಕೆಲ ಅನುಮಾನ, ಗೊಂದಲುಗಳು ಎದ್ದಿದ್ದವಾದರೂ ನಂತರ ಜನರಿಗೆ ಲಸಿಕೆ ಮೇಲೆ ತಕ್ಕಮಟ್ಟಿಗೆ ವಿಶ್ವಾಸ ಬಂದಿತ್ತು. ಆದರೆ, ಎರಡನೇ ಅಲೆ ಹಾಗೂ ಡೆಲ್ಟಾ ಪ್ರಭೇದದ ಉಪಟಳ ಜಾಸ್ತಿ ಆದಾಗ ಮತ್ತೆ ಲಸಿಕೆಯ ಪರಿಣಾಮಕಾರಿತನದ ಬಗ್ಗೆ ಸಂದೇಹ ಮೂಡಿತ್ತು. ಆ ಸಂದರ್ಭದಲ್ಲೂ ಸ್ಪಷ್ಟನೆ ನೀಡಿದ್ದ ತಜ್ಞರು ಲಭ್ಯವಿರುವ ಕೊರೊನಾ ಲಸಿಕೆಗಳು ಡೆಲ್ಟಾ ತಳಿ ವಿರುದ್ಧ ಸಶಕ್ತವಾಗಿ ಹೋರಾಡಬಲ್ಲವು ಎಂದು ಹೇಳಿ ಅನುಮಾನ ಶಮನ ಮಾಡಿದ್ದರು. ಆದರೆ, ಇದೀಗ ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯೋಲಾಜಿ ಹಾಗೂ ಮ್ಯಾಕ್ಸ್ ಆಸ್ಪತ್ರೆಯ ಜಂಟಿ ಅಧ್ಯಯನದಲ್ಲಿ ತುಸು ಆಘಾತಕಾರಿ ಎನ್ನುವ ಅಂಶವೊಂದು ಹೊರಬಿದ್ದಿದೆ.
ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯೋಲಾಜಿ ಹಾಗೂ ಮ್ಯಾಕ್ಸ್ ಆಸ್ಪತ್ರೆ ನಡೆಸಿದ ಜಂಟಿ ಅಧ್ಯಯನದಲ್ಲಿ ಕೊರೊನಾದ ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣಗಳನ್ನು ತಡೆಯಲು ಕೊವಿಶೀಲ್ಡ್ ಲಸಿಕೆ ವಿಫಲ ಎಂಬ ಮಾಹಿತಿ ಹೊರಬಿದ್ದಿದೆ. ಕೊವಿಶೀಲ್ಡ್ ಲಸಿಕೆ ಪಡೆದ ಬಳಿಕವೂ ಕೊರೊನಾ ಸೋಂಕು ತಗುಲುತ್ತಿದೆ ಎಂಬ ಅಂಶವನ್ನಿಟ್ಟುಕೊಂಡು ದೆಹಲಿ, ಸುತ್ತಮುತ್ತಲಿನ ನಗರಗಳ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಿದಾಗ ಈ ಸಂಗತಿ ಬಯಲಾಗಿದೆ. ಕೊವಿಶೀಲ್ಡ್ ಲಸಿಕೆಯ 2 ಡೋಸ್ ಪಡೆದ ಶೇ.25 ರಷ್ಟು ಮಂದಿಯಲ್ಲಿ ಡೆಲ್ಟಾ ಪ್ರಭೇದದ ವೈರಸ್ ಪತ್ತೆಯಾಗಿದ್ದರೆ, ಒಂದು ಡೋಸ್ ಪಡೆದ ಶೇ.48 ರಷ್ಟು ಮಂದಿಯಲ್ಲಿ ಡೆಲ್ಟಾ ಪ್ರಭೇದದ ವೈರಸ್ ಕಂಡುಬಂದು ಲಸಿಕೆಯ ಪರಿಣಾಮಕಾರಿತನದ ಬಗ್ಗೆ ಮತ್ತೆ ಜನಸಾಮಾನ್ಯರಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ.
ಬ್ರೇಕ್ ಥ್ರೂ ಪ್ರಕರಣ ಎಂದರೇನು?
ಇನ್ಸ್ಟಿಟ್ಯೂಟ್ ಆಫ್ ಜೆನೋಮಿಕ್ಸ್ ಅಂಡ್ ಇಂಟಿಗ್ರೇಟೆಡ್ ಬಯೋಲಾಜಿ ಹಾಗೂ ಮ್ಯಾಕ್ಸ್ ಆಸ್ಪತ್ರೆ ಕೈಗೊಂಡ ಅಧ್ಯಯನದಲ್ಲಿ ಬಹುಮುಖ್ಯವಾಗಿ ಉಲ್ಲೇಖಿಸಿರುವ ಸಂಗತಿ ಎಂದರೆ ಕೊವಿಶೀಲ್ಡ್ ಲಸಿಕೆ ಕೊರೊನಾ ವೈರಾಣುವಿನ ಡೆಲ್ಟಾ ಪ್ರಭೇದದ ಬ್ರೇಕ್ ಥ್ರೂ ಪ್ರಕರಣಗಳನ್ನು ತಡೆಯಲು ವಿಫಲವಾಗುತ್ತಿದೆ ಎನ್ನುವುದು. ಬ್ರೇಕ್ ಥ್ರೂ ಪ್ರಕರಣ ಎಂದು ಯಾವುದಕ್ಕೆ ಹೇಳುತ್ತಾರೆ ಎನ್ನುವ ಬಗ್ಗೆ ಜನರಿಗೆ ಕೊಂಚ ಗೊಂದಲವಿದೆ. ಅಂದಹಾಗೆ ಬ್ರೇಕ್ ಥ್ರೂ ಪ್ರಕರಣ ಎಂದರೆ ಒಬ್ಬ ವ್ಯಕ್ತಿ ಕೊರೊನಾ ಲಸಿಕೆ ಪಡೆದ ಬಳಿಕವೂ ಮತ್ತೆ ಸೋಂಕಿಗೆ ತುತ್ತಾಗುವುದು ಎಂದರ್ಥ. ಈ ಅಧ್ಯಯನದಲ್ಲಿ ಕೊವಿಶೀಲ್ಡ್ ಲಸಿಕೆಯ 2 ಡೋಸ್ ಪಡೆದ ಶೇ.25 ರಷ್ಟು ಮಂದಿಯಲ್ಲಿ ಹಾಗೂ ಒಂದು ಡೋಸ್ ಪಡೆದ ಶೇ.48 ರಷ್ಟು ಮಂದಿಯಲ್ಲಿ ಡೆಲ್ಟಾ ಪ್ರಭೇದದ ವೈರಸ್ ಕಂಡುಬಂದಿದೆ.
ಇದನ್ನೂ ಓದಿ:
ದಿನಕ್ಕೆ 1 ಕೋಟಿ ಡೋಸ್ ಕೊರೊನಾ ಲಸಿಕೆ ವಿತರಿಸುವ ಗುರಿ ತಲುಪಿದ ಭಾರತ; ಗ್ರಾಮೀಣ ಭಾಗಗಳದ್ದೇ ಮೇಲುಗೈ
(Covishield Vaccine unable to halt breakthrough Delta infections says study)