ದಿನಕ್ಕೆ 1 ಕೋಟಿ ಡೋಸ್​ ಕೊರೊನಾ ಲಸಿಕೆ ವಿತರಿಸುವ ಗುರಿ ತಲುಪಿದ ಭಾರತ; ಗ್ರಾಮೀಣ ಭಾಗಗಳದ್ದೇ ಮೇಲುಗೈ

ಶುಕ್ರವಾರ ನೀಡಿದ ಒಂದು ಕೋಟಿ ಡೋಸ್ ಲಸಿಕೆಯ ಪೈಕಿ ಶೇ.70 ರಷ್ಟು ಲಸಿಕೆಯನ್ನು ಗ್ರಾಮೀಣ ಭಾಗಗಳಲ್ಲಿ ನೀಡಲಾಗಿದೆ. ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ನೆನ್ನೆ ನೀಡಿದ ಲಸಿಕೆಯ ಪೈಕಿ ಶೇ.50 ರಷ್ಟು ಲಸಿಕೆಯನ್ನು ನೀಡಿರುವುದು ವಿಶೇಷ.

ದಿನಕ್ಕೆ 1 ಕೋಟಿ ಡೋಸ್​ ಕೊರೊನಾ ಲಸಿಕೆ ವಿತರಿಸುವ ಗುರಿ ತಲುಪಿದ ಭಾರತ; ಗ್ರಾಮೀಣ ಭಾಗಗಳದ್ದೇ ಮೇಲುಗೈ
ಕೊರೊನಾ ವ್ಯಾಕ್ಸಿನ್

ಭಾರತದಲ್ಲಿ ಆಗಸ್ಟ್ 27ರ ಶುಕ್ರವಾರ ದಾಖಲೆಯ ಸಂಖ್ಯೆಯಲ್ಲಿ ಕೊರೊನಾ ಲಸಿಕೆ ನೀಡಲಾಗಿದೆ. ಭಾರತವು ನಿತ್ಯ ಒಂದು ಕೋಟಿ ಡೋಸ್ ಲಸಿಕೆಯನ್ನ ನೀಡಬೇಕೆಂಬ ಗುರಿ ಹಾಕಿಕೊಂಡಿದ್ದು, ಇದು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆದರೆ, ಈಗ ನಿತ್ಯ ಒಂದು ಕೋಟಿ ಡೋಸ್ ಲಸಿಕೆ ನೀಡಲು ಸಾಧ್ಯ ಎಂಬುದನ್ನು ಶುಕ್ರವಾರ ಭಾರತ ಸಾಧಿಸಿ ತೋರಿಸಿರುವುದು ಗಮನಾರ್ಹವಾಗಿದೆ. 138 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಒಂದೇ ದಿನ 1 ಕೋಟಿ ಡೋಸ್ ಲಸಿಕೆ ನೀಡಿ ಹೊಸ ದಾಖಲೆ ಬರೆಯಲಾಗಿದ್ದು, ಇದು ಲಸಿಕೆ ವಿತರಣೆ ವಿಚಾರದಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಭಾರತ ಜನಸಂಖ್ಯೆಯಲ್ಲಿ ಚೀನಾದ ನಂತರದ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ 18 ವರ್ಷ ಮೇಲ್ಪಟ್ಟ 94 ಕೋಟಿ ಜನರಿದ್ದಾರೆ. ಮೇಲಾಗಿ ದೊಡ್ಡ ಪ್ರಮಾಣದ ಜನಸಂಖ್ಯೆಯುಳ್ಳ ರಾಷ್ಟ್ರದಲ್ಲಿ ಪ್ರತಿಯೊಬ್ಬರಿಗೂ 2 ಡೋಸ್ ಕೊರೊನಾ ಲಸಿಕೆ ನೀಡುವುದು ನಿಜಕ್ಕೂ ಸವಾಲು. ಕೊರೊನಾ ಲಸಿಕೆಯ ಕೊರತೆ ಇರುವಾಗ ಅಷ್ಟು ಬೇಗ ಕೊರೊನಾ ಲಸಿಕೆ ವಿತರಿಸುವುದು ಸುಲಭವೂ ಅಲ್ಲ. ಆದರೆ, ಭಾರತ ನಿಧಾನವಾಗಿ ಕೊರೊನಾ ಲಸಿಕೆಯ ಕೊರತೆಯಿಂದ ಹೊರಬರುತ್ತಿದ್ದು, ನಿತ್ಯ ಒಂದು ಕೋಟಿ ಡೋಸ್ ಲಸಿಕೆಯನ್ನು ನೀಡಬೇಕೆಂಬ ಗುರಿ ಹಾಕಿಕೊಂಡಿದ್ದನ್ನು ಸಾಧಿಸಿದೆ.

ಈ ಹಿಂದೆ ಈ ಗುರಿಯ ಬಗ್ಗೆ ಹೇಳಿದ್ದಾಗ ಇದು ಅಸಾಧ್ಯ, ಹೇಳಿಕೆಗೆ ಮಾತ್ರ ಸೀಮಿತವಾಗಲಿದೆ. ಲಸಿಕೆಯೇ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಆಗದಿರುವಾಗ ಒಂದು ಕೋಟಿ ಡೋಸ್ ಲಸಿಕೆ ನೀಡಿಕೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಒಂದೇ ದಿನ ಒಂದು ಕೋಟಿ ಡೋಸ್ ಲಸಿಕೆ ನೀಡಿಕೆ ಕನಸಿನ ಮಾತು. ವಾಸ್ತವವಾಗಿ ಕಾರ್ಯರೂಪಕ್ಕೆ ತರುವ ಮಾತುಗಳನ್ನೇ ಆಡುತ್ತಿಲ್ಲ ಎಂಬ ಟೀಕೆಯೂ ವ್ಯಕ್ತವಾಗಿತ್ತು. ಆದರೆ, ಈಗ ಅಂತಿಮವಾಗಿ ಭಾರತವು ಒಂದೇ ದಿನದಲ್ಲಿ ಒಂದು ಕೋಟಿ ಡೋಸ್ ಲಸಿಕೆಯನ್ನ ನೀಡಿ ಹೊಸ ದಾಖಲೆಯನ್ನು ನಿರ್ಮಿಸಿದೆ. ಈ ಹಿಂದೆ ಒಂದೇ ದಿನ 92 ಲಕ್ಷ ಡೋಸ್ ಲಸಿಕೆ ನೀಡಿದ್ದು ಇದುವರೆಗಿನ ಗರಿಷ್ಠ ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ಮುರಿದು ಆಗಸ್ಟ್ 27ರ ಶುಕ್ರವಾರ ದೇಶದಲ್ಲಿ ಒಂದು ಕೋಟಿ 03 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ.

ದೇಶದಲ್ಲಿ ಒಂದೇ ದಿನ ಒಂದು ಕೋಟಿಗೂ ಹೆಚ್ಚು ಡೋಸ್ ಲಸಿಕೆಯನ್ನು ನೀಡಿರುವುದರ ಹಿಂದೆ ಉತ್ತರ ಪ್ರದೇಶ, ಕರ್ನಾಟಕ, ಹರಿಯಾಣ ರಾಜ್ಯಗಳ ಪಾತ್ರ ದೊಡ್ಡದಿದೆ. ಈ ರಾಜ್ಯಗಳಲ್ಲಿ ಅತಿ ಹೆಚ್ಚಿನ ಲಸಿಕೆಯನ್ನು ಆಗಸ್ಟ್ 27 ರ ಶುಕ್ರವಾರ ನೀಡಲಾಗಿದೆ. ಉತ್ತರ ಪ್ರದೇಶದಲ್ಲಿ ಆಗಸ್ಟ್ 27ರ ಶುಕ್ರವಾರ 30 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕರ್ನಾಟಕದಲ್ಲಿ ಶುಕ್ರವಾರ 11 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಹತ್ತಿರ ಹತ್ತಿರ ಹತ್ತು ಲಕ್ಷ ಡೋಸ್ ಲಸಿಕೆಯನ್ನ ನೀಡಲಾಗಿದೆ. ಹರಿಯಾಣ ರಾಜ್ಯದಲ್ಲಿ 6 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ರಾಜಸ್ಥಾನದಲ್ಲಿ 4.59 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಮಧ್ಯಪ್ರದೇಶದಲ್ಲಿ ಶುಕ್ರವಾರ ಲಸಿಕೆ ನೀಡಿಕೆಗೆ ರಜೆ ಇತ್ತು. ಇದರ ಮಧ್ಯೆ 38 ಸಾವಿರ ಡೋಸ್ ಲಸಿಕೆಯನ್ನು ನೀಡಲಾಗಿದೆ.

ಶುಕ್ರವಾರ ನೀಡಿದ ಒಂದು ಕೋಟಿ ಡೋಸ್ ಲಸಿಕೆಯ ಪೈಕಿ ಶೇ.70 ರಷ್ಟು ಲಸಿಕೆಯನ್ನು ಗ್ರಾಮೀಣ ಭಾಗಗಳಲ್ಲಿ ನೀಡಲಾಗಿದೆ. ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ನೆನ್ನೆ ನೀಡಿದ ಲಸಿಕೆಯ ಪೈಕಿ ಶೇ.50 ರಷ್ಟು ಲಸಿಕೆಯನ್ನು ನೀಡಿರುವುದು ವಿಶೇಷ. ಪಶ್ಚಿಮ ಬಂಗಾಳದಲ್ಲಿ 5.53 ಲಕ್ಷ ಡೋಸ್ ಲಸಿಕೆಯನ್ನ ನೀಡಲಾಗಿದೆ. ಹರಿಯಾಣ ರಾಜ್ಯದಲ್ಲಿ 6.12 ಲಕ್ಷ ಡೋಸ್ ಲಸಿಕೆಯನ್ನು ನೀಡಿದೆ. ಮುಂಬೈ, ಬೆಂಗಳೂರು, ಗುರುಗ್ರಾಮ ನಗರಗಳಲ್ಲಿ ಶುಕ್ರವಾರ ಗರಿಷ್ಠ ಪ್ರಮಾಣದ ಲಸಿಕೆಯನ್ನ ನೀಡಲಾಗಿದೆ. ಮುಂಬೈನಲ್ಲಿ 1.77 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 1.67 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆಯನ್ನು ನೀಡಲಾಗಿದೆ. ಹರಿಯಾಣದ ಗುರುಗ್ರಾಮ ನಗರದಲ್ಲಿ 67 ಸಾವಿರ ಡೋಸ್ ಲಸಿಕೆಯನ್ನ ನೀಡಲಾಗಿದೆ. ಅಲ್ಲದೇ ಶುಕ್ರವಾರ ನೀಡಿದ ಒಂದು ಕೋಟಿ ಡೋಸ್ ಲಸಿಕೆಯ ಪೈಕಿ ಶೇ.75 ರಷ್ಟು ಮೊದಲ ಡೋಸ್, ಶೇ.25 ರಷ್ಟು ಮಾತ್ರ ಎರಡನೇ ಡೋಸ್ ಲಸಿಕೆ ಎಂಬುದು ವಿಶೇಷ.

ಆಗಸ್ಟ್ ತಿಂಗಳಲ್ಲಿ ಇದುವರೆಗೂ 15 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ. ಆಗಸ್ಟ್ ತಿಂಗಳ 31ರವರೆಗೂ 17 ಕೋಟಿ ಡೋಸ್ ಲಸಿಕೆಯನ್ನ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಇನ್ನೂ ಸೆಪ್ಟೆಂಬರ್ ತಿಂಗಳಿನಲ್ಲಿ 20 ಕೋಟಿ ಡೋಸ್ ಲಸಿಕೆಯನ್ನು ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ಭಾರತದಲ್ಲಿ ಇದುವರೆಗೂ 62 ಕೋಟಿ ಡೋಸ್ ಲಸಿಕೆಯನ್ನ ನೀಡಲಾಗಿದೆ. ಇದರ ಪೈಕಿ 47 ಕೋಟಿ ಡೋಸ್ ಮೊದಲ ಡೋಸ್ ಲಸಿಕೆಯಾಗಿದೆ. ದೇಶದ ವಯಸ್ಕ ಜನಸಂಖ್ಯೆಯ ಪೈಕಿ ಶೇ.51 ರಷ್ಟು ಜನರಿಗೆ ಸಿಂಗಲ್ ಡೋಸ್ ಲಸಿಕೆಯನ್ನು ನೀಡಲಾಗಿದೆ. ದೇಶದಲ್ಲಿ 14.17 ಕೋಟಿ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ರಾಜ್ಯ ಸರ್ಕಾರಗಳ ಬಳಿ ಈಗಲೂ 4.20 ಕೋಟಿ ಡೋಸ್ ಲಸಿಕೆಯು ಬಳಕೆಗೆ ಬಾಕಿ ಇದೆ. ಸದ್ಯದಲ್ಲೇ 1.51 ಕೋಟಿ ಡೋಸ್ ಲಸಿಕೆಯನ್ನು ಪೂರೈಸಲಾಗುತ್ತೆ ಎಂದು ಶನಿವಾರ ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ:
ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ ಕೊಡೋದಿಲ್ಲ; ಚರ್ಚೆಗೆ ಗ್ರಾಸವಾಯ್ತು ತಹಶೀಲ್ದಾರ್ ಆದೇಶ 

Covid-19: ಕೋವಿಶೀಲ್ಡ್​ ಲಸಿಕೆಯ ಡೋಸ್​ಗಳ ನಡುವೆ ಅಂತರ ತಗ್ಗಿಸುವ ಪ್ರಸ್ತಾಪವಿಲ್ಲ; ಕೇಂದ್ರ ಸರ್ಕಾರ ಸ್ಪಷ್ಟನೆ

(India distributed 1 crore dose corona vaccine on August 27th Friday Rural parts contributes more)

Read Full Article

Click on your DTH Provider to Add TV9 Kannada