AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇರಳದ ಪಾಲಕ್ಕಾಡ್​​ನಲ್ಲಿ ಸಿಪಿಎಂ ಸದಸ್ಯನ ಕಗ್ಗೊಲೆ; ಹಂತಕರು ಪಕ್ಷದವರೇ ಎಂದ ಪ್ರತ್ಯಕ್ಷದರ್ಶಿ, ಅವರು ಪಕ್ಷತೊರೆದಿದ್ದಾರೆ ಎಂದ ಕಾರ್ಯದರ್ಶಿ

ಈ ಮೊದಲು ಕೊಲೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಪಿಎಂ ರಾಜ್ಯ ಸೆಕ್ರಟರಿಯೇಟ್ ಹಂತಕರು ರಾಜ್ಯದಲ್ಲಿ ಗಲಭೆಗಳನ್ನು ಪ್ರಚೋದಿಸಲು ಬಯಸುವ ಸಮಾಜವಿರೋಧಿಗಳು ಎಂದು ಹೇಳಿತ್ತು.

ಕೇರಳದ ಪಾಲಕ್ಕಾಡ್​​ನಲ್ಲಿ ಸಿಪಿಎಂ ಸದಸ್ಯನ ಕಗ್ಗೊಲೆ; ಹಂತಕರು ಪಕ್ಷದವರೇ ಎಂದ ಪ್ರತ್ಯಕ್ಷದರ್ಶಿ, ಅವರು ಪಕ್ಷತೊರೆದಿದ್ದಾರೆ ಎಂದ ಕಾರ್ಯದರ್ಶಿ
ಪ್ರಾತಿನಿಧಿಕ ಚಿತ್ರ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Aug 15, 2022 | 8:54 PM

Share

ಪಾಲಕ್ಕಾಡ್: ಕೇರಳದ (Kerala) ಪಾಲಕ್ಕಾಡ್ (Palakkad) ಜಿಲ್ಲೆಯಲ್ಲಿ ಸ್ಥಳೀಯ ಸಿಪಿಎಂ (CPM) ಮುಖಂಡರೊಬ್ಬರು ಹತ್ಯೆಯಾದ ಒಂದು ದಿನದ ನಂತರ, ಕೊಲೆಗಾರರ ರಾಜಕೀಯ ಸಂಬಂಧದ ಬಗ್ಗೆ ಸೋಮವಾರ ವಿವಾದ ಭುಗಿಲೆದ್ದಿದೆ. ಸಿಪಿಎಂ ಸ್ಥಳೀಯ ಸಮಿತಿ ಸದಸ್ಯ ಕೆ.ಶಾಜಹಾನ್ (40) ಅವರನ್ನು ಭಾನುವಾರ ತಡರಾತ್ರಿ ಸ್ವಾತಂತ್ರ್ಯ ದಿನಾಚರಣೆಯ ಸಿದ್ಧತೆಯಲ್ಲಿ ತೊಡಗಿದ್ದಾಗ ತಂಡವೊಂದು ಕಡಿದು ಹತ್ಯೆ ಮಾಡಿತ್ತು. ಹತ್ಯೆಯ ಪ್ರತ್ಯಕ್ಷದರ್ಶಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಶಾಜಹಾನ್ ಮೇಲೆ ತಮ್ಮದೇ ಪಕ್ಷದವರೇ ಹಲ್ಲೆ ನಡೆಸಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದು, ಸಿಪಿಎಂನ ಜಿಲ್ಲಾ ಕಾರ್ಯದರ್ಶಿ ಹಂತಕರು ವರ್ಷಗಳ ಹಿಂದೆಯೇ ಪಕ್ಷವನ್ನು ತೊರೆದಿದ್ದಾರೆ ಎಂದು ಹೇಳಿದ್ದಾರೆ. ಈ ಮೊದಲು ಕೊಲೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಪಿಎಂ ರಾಜ್ಯ ಸೆಕ್ರಟರಿಯೇಟ್ ಹಂತಕರು ರಾಜ್ಯದಲ್ಲಿ ಗಲಭೆಗಳನ್ನು ಪ್ರಚೋದಿಸಲು ಬಯಸುವ ಸಮಾಜವಿರೋಧಿಗಳು ಎಂದು ಹೇಳಿತ್ತು. ಮಧ್ಯಾಹ್ನದ ನಂತರ, ರಾಜ್ಯ ಸೆಕ್ರಟರಿಯೇಟ್ ಬಿಜೆಪಿ-ಆರ್‌ಎಸ್‌ಎಸ್ ಗ್ಯಾಂಗ್ ಈ ಹತ್ಯೆಗೆ ಕಾರಣ ಎಂದು ಹೇಳಿಕೆ ನೀಡಿತು. ಸಿಪಿಐ (ಎಂ) ಕಾರ್ಯಕರ್ತರನ್ನು ಕೊಂದು ನಂತರ ನಿರಾಧಾರ ಪ್ರಚಾರ ನಡೆಸುವುದು ಬಿಜೆಪಿ-ಆರ್‌ಎಸ್‌ಎಸ್‌ನ ಅಭ್ಯಾಸವಾಗಿದೆ. ಈ ಪ್ರಕರಣದಲ್ಲೂ ಬಿಜೆಪಿ, ಮಾಧ್ಯಮಗಳ ನೆರವಿನಿಂದ ಸುಳ್ಳು ಪ್ರಚಾರ ಆರಂಭಿಸಿದೆ ಎಂದು ಸೆಕ್ರಟರಿಯೇಟ್ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ.

ಇಂದು ಬೆಳಗ್ಗೆ ಸುರೇಶ್ ಎಂಬ ಪ್ರತ್ಯಕ್ಷದರ್ಶಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಗ್ಯಾಂಗ್‌ನಲ್ಲಿ ಎಂಟು ಜನರಿದ್ದರು ಮತ್ತು ಅವರಲ್ಲಿ ಇಬ್ಬರು ಶಾಜಹಾನ್‌ನ್ನು ಕೊಂದಿದ್ದಾರೆ. ‘ಈ ಹಿಂದೆ ಸಿಪಿಎಂನಲ್ಲಿ ಎಂಟು ಮಂದಿ ಇದ್ದರು. ಇವರಲ್ಲಿ ಇಬ್ಬರಿಗೆ ಶಾಜಹಾನ್ ಮೇಲೆ ವೈಯಕ್ತಿಕ ದ್ವೇಷವಿತ್ತು. ಶಾಜಹಾನ್ ಮತ್ತು ಇಬ್ಬರು ಗ್ಯಾಂಗ್ ಸದಸ್ಯರ ನಡುವೆ ವಾಗ್ವಾದ ನಡೆದಿದೆ. ನನ್ನ ಕಣ್ಣೆದುರೇ ನನ್ನ ಸ್ನೇಹಿತನ ಸಾವಿಗೆ ಸಾಕ್ಷಿಯಾಗಿದ್ದೇನೆ. ಶಾಜಹಾನ್‌ನನ್ನು ಕೊಲೆ ಮಾಡಿದ ಶಬರಿ ಮತ್ತು ಅನೀಶ್ ಪಕ್ಷದ ಸದಸ್ಯರು. ಸಿಪಿಎಂ ದೈನಿಕ ದೇಶಾಭಿಮಾನಿಗೆ ಚಂದಾದಾರರಾಗುವ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳವಾಗಿತ್ತು. ಪಕ್ಷದ ಪತ್ರಿಕೆಗೆ ಶಾಜಹಾನ್ ಚಂದಾದಾರರಾಗಿರಲಿಲ್ಲ ಎಂದಿದ್ದಾರೆ.

ಕೊಲೆಯಲ್ಲಿ ಎಂಟು ಮಂದಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರ್.ವಿಶ್ವನಾಧ್ ಹೇಳಿದ್ದಾರೆ. ಕೊಲೆಯ ಹಿಂದಿನ ಉದ್ದೇಶದ ಬಗ್ಗೆ ಮಾತನಾಡಲು ಈಗ ಆಗುವುದಿಲ್ಲ. ಮೇಲ್ನೋಟಕ್ಕೆ ಇದು ರಾಜಕೀಯ ಕೊಲೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ವಿಸ್ತೃತ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಆರಂಭದಲ್ಲಿ ಸಿಪಿಎಂ ಕೊಲೆಯ ಸ್ವರೂಪದ ಸಂಶಯ ವ್ಯಕ್ತಪಡಿಸಿತ್ತು. ಭಾನುವಾರ ರಾತ್ರಿ ಪಕ್ಷದ ಹಿರಿಯ ನಾಯಕ ಎನ್ ಎನ್ ಕೃಷ್ಣದಾಸ್ ಮತ್ತು ಪಕ್ಷದ ಶಾಸಕ ಎ ಪ್ರಭಾಕರನ್ ಹತ್ಯೆಯ ಹಿಂದೆ ರಾಜಕೀಯದ ಬಗ್ಗೆ ಮಾತೆತ್ತಿಲ್ಲ . ಇದರ ಹಿಂದಿನ ಉದ್ದೇಶವನ್ನು ಪೊಲೀಸರು ಪತ್ತೆ ಮಾಡಬೇಕೆಂದು ಇಬ್ಬರೂ ಹೇಳಿದ್ದರು.

ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ವರದಿಯಾದ ಕೂಡಲೇ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಇ ಎನ್ ಸುರೇಶ್ ಬಾಬು ಅವರು ಸಿಪಿಐ(ಎಂ) ಕಾರ್ಯಕರ್ತರಲ್ಲ. ವರ್ಷಗಳ ಹಿಂದೆಯೇ ಪಕ್ಷ ತೊರೆದಿದ್ದರು. ಅವರು ಈಗ ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಹೀಗಿರುವಾಗ ಹಂತಕರು ಸಿಪಿಐ(ಎಂ)ನವರು ಎಂದು ಹೇಗೆ ಹೇಳುವುದು? ಎಂದು ಕೇಳಿದ್ದಾರೆ.

ಸೋಮವಾರ ಬೆಳಗ್ಗೆ ನೀಡಿದ ತನ್ನ ಮೊದಲ ಹೇಳಿಕೆಯಲ್ಲಿ ಆರೆಸ್ಸೆಸ್ ಪಾತ್ರದ ಬಗ್ಗೆ ಸಿಪಿಎಂ ರಾಜ್ಯ ನಾಯಕತ್ವ ಮೌನವಾಗಿತ್ತು. ಆದರೆ ಪಕ್ಷದ ಜಿಲ್ಲಾ ಘಟಕವು ಬಿಜೆಪಿ-ಆರ್‌ಎಸ್‌ಎಸ್ ಅನ್ನು ದೂಷಿಸಿದ ನಂತರ, ರಾಜ್ಯ ನಾಯಕತ್ವವು ಹತ್ಯೆಗೆ ಬಿಜೆಪಿ-ಆರ್‌ಎಸ್‌ಎಸ್ ಕಾರಣ ಎಂದು ಹೇಳಿಕೆ ನೀಡಿದೆ.

ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ ಸುಧಾಕರನ್ ಎಲ್ಲಾ ಕೊಲೆಗಳಿಗೆ ಬಿಜೆಪಿ ಕಾರಣವೇ? ಎಂದು ಕೇಳಿದ್ದಾರೆ. ಸಿಪಿಎಂನವರು ತಮ್ಮದೇ ಪಕ್ಷದ ವಿರುದ್ಧವೇ ಮಾತನಾಡಿದ್ದಾರೆ. ಹತ್ಯೆಯ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:40 pm, Mon, 15 August 22