ಮುಂಬೈ: ಕ್ರೆಡಿಟ್ ಕಾರ್ಡ್ ಬಳಕೆದಾರರ ಬಗ್ಗೆ ಮಾಹಿತಿ ಕೇಳಿ, ಬ್ಯಾಂಕ್ಗಳು ಸಲ್ಲಿಸಿದ ಕೋರಿಕೆಯ ಪ್ರಮಾಣ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ ಎಂದು ಕ್ರೆಡಿಟ್ ಇನ್ಫಾರ್ಮೇಶನ್ ಸಂಸ್ಥೆಯಲ್ಲೊಂದಾದ ಟ್ರಾನ್ಸ್‌ಯುನಿಯನ್ ಸಿಬಿಲ್ ತಿಳಿಸಿದೆ.
ಇದು ಕೊವಿಡ್-19 ಲಾಕ್ಡೌನ್ ಸಡಿಲಗೊಂಡ ಬಳಿಕ ಗ್ರಾಹಕರ ಆರ್ಥಿಕ ಚಟುವಟಿಕೆ ಬಹುಮಟ್ಟಿಗೆ ಸುಧಾರಿಸಿದೆ ಎನ್ನುವುದರ ದ್ಯೋತಕ ಎಂದು ಸಿಬಿಲ್ ಅಭಿಪ್ರಾಯಪಟ್ಟಿದೆ.
ಸಾಲುಸಾಲು ಹಬ್ಬಗಳು, ಲಾಕ್ಡೌನ್ ನಂತರ ಒಮ್ಮಲೇ ಜನರು ಅಗತ್ಯ ವಸ್ತುಗಳ ಖರೀದಿಗೆ ಮರಳಿದ್ದರಿಂದ ಬೇಡಿಕೆ ಪ್ರಮಾಣ ಜಾಸ್ತಿಯಾಗಿ, ವ್ಯವಹಾರ ಹೆಚ್ಚಾಯಿತು. ಹಾಗಾಗಿ ಅಕ್ಟೋಬರ್ನಲ್ಲಿ ಹಲವು ಆರ್ಥಿಕ ಸೂಚಕಗಳಲ್ಲಿ ಅಭಿವೃದ್ಧಿ ಕಂಡುಬಂತು ಎಂದು ಕಂಪನಿ ವಿವರಿಸಿದೆ.
ಮಾರುಕಟ್ಟೆಯಲ್ಲಿ ಆರ್ಥಿಕ ಚಟುವಟಿಕೆ ಇದೇ ರೀತಿ ಮುಂದುವರಿಯುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇಡಿಕೆಯ ಸ್ಥಿರತೆಯನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಹೇಳಿದ್ದಾರೆ.
ಹಿಸ್ಟರಿ ಪರಿಶೀಲನೆ
ಬ್ಯಾಂಕ್ಗಳು ಹಾಗೂ ಹಣಕಾಸು ಸಂಸ್ಥೆಗಳು ಬಳಕೆದಾರರ ಕ್ರೆಡಿಟ್ ಕಾರ್ಡ್ ಹಿಸ್ಟರಿಯನ್ನು ಪರಿಶೀಲಿಸುವ ಪ್ರಮಾಣ ಏಪ್ರಿಲ್ನಲ್ಲಿ ಕುಸಿದಿತ್ತು. 2019ರ ಏಪ್ರಿಲ್ ಅವಧಿಗೆ ಹೋಲಿಸಿದರೆ ಈ ಬಾರಿ ಏಪ್ರಿಲ್ನಲ್ಲಿ ಶೇ.5ರಷ್ಟು ಕಡಿಮೆಯಾಗಿತ್ತು. ಆದರೆ ಜುಲೈ ವೇಳೆಗೆ ಅದರಲ್ಲಿ ಸುಧಾರಣೆ ಕಂಡುಬಂತು. 2019ರ ಜುಲೈನಲ್ಲಿ ಇದ್ದ ಕ್ರೆಡಿಟ್ ಕಾರ್ಡ್ ಪರಿಶೀಲನೆಯ ಪ್ರಮಾಣಕ್ಕೆ ಹೋಲಿಸಿದರೆ 2020ರಲ್ಲಿ ಇದು ಶೇ. 61ರಷ್ಟು ಹೆಚ್ಚಾಗಿತ್ತು. ಅಕ್ಟೋಬರ್ನಲ್ಲಿ ಒಮ್ಮೆಲೆ ಈ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಅಂದರೆ ಕಳೆದ ಅವಧಿಗಿಂತ ಶೇ.106ರಷ್ಟು ಅಧಿಕಗೊಂಡಿದೆ.
ಲಾಕ್ಡೌನ್ ನಿರ್ಬಂಧ ತೆರವುಗೊಳಿಸಿದ ನಂತರ ಕ್ರೆಡಿಟ್ ಕಾರ್ಡ್ ವಿಚಾರಣೆ ಪ್ರಮಾಣದಲ್ಲೂ ಚೇತರಿಕೆ ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆ. ಕೊರೊನಾ ಸೋಂಕಿನ ಭೀತಿಯಿಂದ ಹಲವರು ನಗದು ಮುಟ್ಟಲು ಹೆದರುತ್ತಿದ್ದು ಡಿಜಿಟಲ್ ಪಾವತಿ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಕಾರ್ಡ್ಗಳ ಮೂಲಕ ಮಾಡುವ ವ್ಯವಹಾರದ ಮೇಲೆ ಜನರಲ್ಲಿ ನಿಧಾನವಾಗಿ ಭರವಸೆ ಮೂಡುತ್ತಿದೆ ಎಂದು ಸಿಬಿಲ್ ತಿಳಿಸಿದೆ.
ಇದನ್ನೂ ಓದಿ: ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್ ಲೈಸೆನ್ಸ್: ಆರ್ಬಿಐ ಕ್ರಮ ಸಮರ್ಥಿಸಿಕೊಂಡ ತಜ್ಞರ ಸಮಿತಿ ಸದಸ್ಯ
Published On - 6:18 pm, Mon, 30 November 20