ಜೈಪುರ: 1.90 ಕೋಟಿ ರೂ. ವಿಮಾ ಮೊತ್ತವನ್ನು (Insurance Money) ಪಡೆದುಕೊಳ್ಳಲು ಸಂಚು ಮಾಡಿದ ಗಂಡನೊಬ್ಬ ಹೆಂಡತಿಗೆ ಅಪಘಾತ (Accident) ಮಾಡಿಸಿ ಕೊಂದಿರುವ ಘಟನೆ ರಾಜಸ್ಥಾನದಲ್ಲಿ(Rajasthan) ನಡೆದಿದೆ. ರೌಡಿ ಶೀಟರ್ಗೆ ಸುಪಾರಿ ಕೊಟ್ಟಿದ್ದ ಗಂಡ ಯಾರಿಗೂ ಅನುಮಾನ ಬಾರದಂತೆ ಅಪಘಾತದಲ್ಲಿ ಹೆಂಡತಿಯನ್ನು ಕೊಲ್ಲಿಸಿದ್ದಾನೆ. ಆರೋಪಿಯ ಹೆಂಡತಿ ಪ್ರಯಾಣಿಸುತ್ತಿದ್ದ ಸ್ಕೂಟಿಗೆ ಕಾರಿನಿಂದ ಡಿಕ್ಕಿ ಹೊಡೆದ ರೌಡಿ ಶೀಟರ್ ಆಕೆಯನ್ನು ಕೊಲೆ ಮಾಡಿದ್ದಾನೆ.
ಆರಂಭದಲ್ಲಿ ಇದೊಂದು ಆಕಸ್ಮಿಕ ಅಪಘಾತವೆಂದೇ ಎಲ್ಲರೂ ನಂಬಿದ್ದರು. ಗಂಡ ಮಹೇಶ್ ಚಂದ್ ಹೇಳಿದ್ದಕ್ಕೆ ತನ್ನ ಕಸಿನ್ ಜೊತೆ ದೇವಸ್ಥಾನಕ್ಕೆ ಸ್ಕೂಟಿಯಲ್ಲಿ ಹೋಗುತ್ತಿದ್ದ ಶಾಲು ಎಂಬ ಮಹಿಳೆಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಆ ಅಪಘಾತದಲ್ಲಿ ಶಾಲು ಸ್ಥಳದಲ್ಲೇ ಮೃತಪಟ್ಟಿದ್ದರು. ಆಕೆಯ ಕಸಿನ್ಗೆ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅಕ್ಟೋಬರ್ 5ರಂದು ನಡೆದಿದ್ದ ಈ ಘಟನೆಯನ್ನು ಅಪಘಾತವೆಂದು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು.
ಇದನ್ನೂ ಓದಿ: Crime News: ಉತ್ತರ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ; 6 ಜನ ಸಾವು, 15 ಮಂದಿಗೆ ಗಾಯ
ಆಕೆಯ ಕುಟುಂಬಸ್ಥರು ಕೂಡ ಇದೊಂದು ಅಪಘಾತವೆಂದೇ ನಂಬಿದ್ದರು. ಪೊಲೀಸರು ಕೂಡ ಇದು ರಸ್ತೆ ಅಪಘಾತದ ಪ್ರಕರಣವೆಂದುಕೊಂಡಿದ್ದರು. ಆದರೆ, ತನಿಖೆಯ ಸಮಯದಲ್ಲಿ ಮಹೇಶ್ ಚಂದ್ ತನ್ನ ಪತ್ನಿಯ ವಿಮಾ ಹಣಕ್ಕಾಗಿ ತನ್ನ ಹೆಂಡತಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ ಎಂದು ಜೈಪುರ ಪಶ್ಚಿಮದ ಡಿಸಿಪಿ ವಂದಿತಾ ರಾಣಾ ಹೇಳಿದ್ದಾರೆ.
2 ತಿಂಗಳ ಹಿಂದೆ ನಡೆದ ಈ ಘಟನೆ ಹಿಟ್ ಆ್ಯಂಡ್ ರನ್ ಕೇಸ್ ಅನ್ನಿಸಿಕೊಂಡಿತ್ತು. ಆದರೆ, ಈ ಪ್ರಕರಣ ಇದೀಗ ಕೊಲೆಯಾಗಿ ದಾಖಲಾಗಿದೆ. ಮಹೇಶ್ ಮತ್ತು ಶಾಲು ಇಬ್ಬರೂ 2015ರಲ್ಲಿ ವಿವಾಹವಾಗಿದ್ದರು. ಇತ್ತೀಚೆಗೆ ಅವರಿಬ್ಬರ ನಡುವೆ ಜಗಳ ಹೆಚ್ಚಾಗಿದ್ದರಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಹೆಂಡತಿಯನ್ನು ಕೊಂದರೆ ಆಕೆಯ ಹೆಸರಲ್ಲಿರುವ ವಿಮಾ ಹಣ ಸಿಗುವುದೆಂಬ ಉದ್ದೇಶದಿಂದ ಮಹೇಶ್ ಅಪಘಾತದ ಸಂಚು ರೂಪಿಸಿದ್ದ.
ಇದನ್ನೂ ಓದಿ: ಎತ್ತಿನೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಟೆಕಿ ಕಾಲ್ನಡಿಗೆ; ಮಂಜುನಾಥನಿಗೆ ಹೀಗೊಂದು ಹರಕೆ
ಇದಕ್ಕಾಗಿ ಹೆಂಡತಿಗೆ ಮತ್ತೆ ಹತ್ತಿರವಾಗಿದ್ದ ಮಹೇಶ್ ಆಕೆಯ ಬಳಿ ನಾನು ಒಂದು ಹರಕೆ ಹೊತ್ತಿದ್ದೇನೆ. ನನ್ನ ಆಸೆ ಈಡೇರಬೇಕೆಂದರೆ ನೀನು ಸ್ಕೂಟಿಯಲ್ಲಿ ದೇವಸ್ಥಾನಕ್ಕೆ 11 ದಿನ ಭೇಟಿ ನೀಡಿ ಪೂಜೆ ಸಲ್ಲಿಸಬೇಕು ಎಂದು ಮಹೇಶ್ ಶಾಲುಗೆ ಹೇಳಿದ್ದ. ಗಂಡನ ಮಾತನ್ನು ನಂಬಿದ್ದ ಶಾಲು ದಿನವೂ ಬೆಳಗ್ಗೆ 4.30ಕ್ಕೆ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿದ್ದರು. ಅ. 5ರಂದು ಆಕೆ ಬೆಳಗಿನ ಜಾವ ಸ್ಕೂಟಿಯಲ್ಲಿ ದೇವಸ್ಥಾನಕ್ಕೆ ಹೋಗುವಾಗ ಕಾರೊಂದು ಡಿಕ್ಕಿ ಹೊಡೆದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಈ ಪ್ರಕರಣದಲ್ಲಿ ಇದುವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ ಎಂದು ಡಿಸಿಪಿ ತಿಳಿಸಿದ್ದಾರೆ.