ದಾವಣಗೆರೆ ತಾಲೂಕಿನಲ್ಲಿ ಮತ್ತೊಂದು ದುರಂತ ಅಪಘಾತ! ನವ ವಿವಾಹಿತ ನೀರುಪಾಲು, ಇಲ್ಲಿದೆ ಆ ಡಿಫರೆಂಟ್ ಆಕ್ಸಿಡೆಂಟ್ ಸ್ಟೋರಿ
ಗೆಳೆಯನ್ನ ಬಿಟ್ಟು ಬರಲು ಶಿವಮೊಗ್ಗಕ್ಕೆ ಹೋಗಿದ್ದ ಪ್ರಕಾಶ್ ಕಾರು ಸಮೇತ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಏಳು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರಕಾಶ್ ಹೆಂಡತಿ ಅನಾಥವಾದ್ರೇ ಇತ್ತ ಮೂರು ಮಕ್ಕಳ ಪೈಕಿ ಓರ್ವ ಮಗನನ್ನ ಕಳೆದುಕೊಂಡು ಇಡೀ ಕುಟುಂಬ ಕಣ್ಣೀರಿಡ್ತಿದೆ.
ಕೆಲ ದಿನಗಳ ಹಿಂದೆ ಇದೇ ದಾವಣಗೆರೆ ತಾಲೂಕಿನಲ್ಲಿ ಸಂಭವಿಸಿದ ಒಂದು ದುರಂತ ಇಡೀ ರಾಜ್ಯದ ಗಮನ ಸೆಳೆದಿತ್ತು. ಜೊತೆಗೆ ಸ್ವತಃ ಮುಖ್ಯಮಂತ್ರಿಗಳೇ ಸಾವನ್ನಪ್ಪಿದ ಯುವಕನ ಮನೆಗೆ ಬಂದು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ವಿಚಿತ್ರವೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ. ಇದೇ ರೀತಿ ಇನ್ನೊಂದು ದುರಂತ ಅದೇ ತಾಲೂಕಿನಲ್ಲಿ ಆಗಿದೆ. ಇಲ್ಲಿದೆ ನೋಡಿ ಡಿಫರೆಂಟ್ ಆಕ್ಸಿಡೆಂಟ್ ಸ್ಟೋರಿ.
ಇದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆಯ ಬಳಿ ತುಂಗಾ ಕಾಲುವೆಯಲ್ಲಿ ನಡೆದ ಘಟನೆ. ಕಾಲುವೆಗೆ ಬಿದ್ದ ಕಾರ್ ಮೇಲೆತ್ತಿದಾಗ ಅದರಲ್ಲಿ ಯುವಕನ ಶವವಿತ್ತು. ಅದೂ ಕಾರಿನ ಹಿಂದಿನ ಸೀಟ್ ನಲ್ಲಿತ್ತು. ಇಲ್ಲಿ ಹೇಳುತ್ತಿರುವುದು ಹೊನ್ನಾಳಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಎಂ.ಆರ್. ಚಂದ್ರಶೇಖರ್ ಸಾವಿನ ಬಗ್ಗೆ. ಇದೇ ರೀತಿ ಇದೇ ತಾಲೂಕಿನಲ್ಲಿ… ಕೇವಲ ಸ್ಥಳ ಮಾತ್ರ ಬೇರೆ ಬೇರೆಯಾಗಿ ಮತ್ತೊಂದು ದುರಂತ ಅಪಘಾತವಾಗಿದೆ.
ಹೊನ್ನಾಳಿಯಿಂದ ಹರಿಹರಕ್ಕೆ ಹೋಗುವ ಮಾರ್ಗದಲ್ಲಿ ಹರಿಹರ ಶಿವಮೊಗ್ಗಾ ರಾಜ್ಯ ಹೆದ್ದಾರಿಯಲ್ಲಿ ಮಾಸಡಿ ಎಂಬ ಹಳ್ಳಿ ಬರುತ್ತದೆ. ಇಲ್ಲೊಂದು ಮಹೇಶ್ವರಿ ಹಳ್ಳ ಬರುತ್ತದೆ. ಈ ಹಳ್ಳದ ಗೋಡೆಗೆ ಡಿಕ್ಕಿ ಹೊಡೆದು ಕಾರು ನೀರಿನಲ್ಲಿ ಬಿದ್ದಿದೆ. ಅದು ಕೂಡಾ ರಾತ್ರಿ ವೇಳೆಯೇ ಆಗಿದೆ. ಇದರಲ್ಲಿ ಇದ್ದ ಬೆಳಗಾವಿ ನಗರದ ಬಸವನ ಕುಡಚಿ ನಿವಾಸಿ 28 ವರ್ಷದ ಪ್ರಕಾಶ್ ಅರಳೀಕಟ್ಟೆ ಎಂಬ ಯುವಕ ಸಾವನ್ನಪ್ಪಿದ್ದಾನೆ. ಈತ ಕೂಡಾ ಕಾರಿನಲ್ಲಿ ಒಬ್ಬನೇ ಇದ್ದ. ಮೇಲಾಗಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ ರೀತಿಯಲ್ಲಿ ಶಿವಮೊಗ್ಗಾದಲ್ಲಿ ಸ್ನೇಹಿತನನ್ನ ಬಿಟ್ಟು, ಬೆಳಗಾವಿಗೆ ವಾಪಸ್ಸಾಗುತ್ತಿದ್ದ. ವಿಚಿತ್ರ ನೋಡಿ ಈ ಕಾರಿನ ಎರಡು ಏರ್ ಬ್ಯಾಗ್ ಓಪನ್ ಆಗಿವೆ. ಚಂದ್ರಶೇಖರ ರೀತಿಯಲ್ಲಿ ಪ್ರಕಾಶನ ಶವ ಸಹ ಕಾರ್ ನ ಹಿಂದಿನ ಸೀಟ್ ನಲ್ಲಿ ಪತ್ತೆಯಾಗಿದೆ.
ಎರಡು ಅಫಘಾತ-ಸಾವುಗಳ ನಡುವೆ ನಿಜಕ್ಕೂ ಇಷ್ಟೊಂದು ಹೊಲಿಕೆ ಇರುವುದು ಅಪರೂಪವೇ. ಇನ್ನು ಮೃತಪಟ್ಟ ಯುವಕ ಬೆಳಗಾವಿ ನಗರದ ಮಾಳ್ ಮಾರುತಿ ಪೊಲೀಸ್ ಠಾಣೆಯ ಎಎಸ್ ಐ ಚೆಂದಪ್ಪ ಅರಳೀಕಟ್ಟೆ ಪುತ್ರ ಪ್ರಕಾಶ ಅರಳೀಕಟ್ಟೆ. ನಿನ್ನೆ ತನ್ನ ಕಾರ್ ನಲ್ಲಿ ಸ್ನೇಹಿತನನ್ನ ಬಿಡಲು ಶಿವಮೊಗ್ಗಕ್ಕೆ ಬಂದಿದ್ದ. ಸ್ನೇಹಿತನನ್ನ ಬಿಟ್ಟು ವಾಪಸ್ಸು ಹೊನ್ನಾಳಿ ಹರಿಹರ ಮಾರ್ಗವಾಗಿ ನೇರವಾಗಿ ಬೆಳಗಾವಿಗೆ ಹೋಗುವ ಪ್ಲಾನ್ ಮಾಡಿ ಹೊರಟ್ಟಿದ್ದ. ಮೂಲತ ಬಿಜಿನೆಸ್ ಮಾಡಿಕೊಂಡಿದ್ದ ಪ್ರಕಾಶ್ ಮಾಸಡಿ ಗ್ರಾಮದ ಬಳಿ ಇರುವ ಮಹೇಶ್ವರ ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದು ಕಾರ್ ನೀರಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನ ಸ್ಥಳೀಯರು ಗಮನಿಸಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಇಲ್ಲಿ ಚಂದ್ರಶೇಖರ ಸಾವಿಗೂ ಪ್ರಕಾಶನ ಸಾವಿಗೂ ಹೊಲಿಕೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಎರಡೂ ಪ್ರಕರಣಗಳ ಬಗ್ಗೆ ಇನ್ನಷ್ಟು ತನಿಖೆ ಆಗಬೇಕಿದೆ. (ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ)
ಬೆಳಗಾವಿ: ಅಪಘಾತದಲ್ಲಿ ನವವಿವಾಹಿತನ ಸಾವು, ಕುಟುಂಬಸ್ಥರ ಕಣ್ಣೀರು…
ಆತ ಮದುವೆಯಾಗಿ ಈಗಷ್ಟೇ ಏಳು ತಿಂಗಳಾಗಿತ್ತು, ಜೀವನದಲ್ಲಿ ಸಾಕಷ್ಟು ಕನಸು ಕಂಡಿದ್ದ ಜೋಡಿಯದು. ಆದ್ರೇ ವಿಧಿಯ ಆಟವೇ ಬೇರೆಯಾಗಿತ್ತು. ಊರಿಂದ ಬಂದ ಗೆಳೆಯನನ್ನ ಬಿಟ್ಟು ಬರಲು ಶಿವಮೊಗ್ಗಕ್ಕೆ ಹೋದವ ವಾಪಾಸ್ ಮನೆಗೆ ಬರಲೇ ಇಲ್ಲ. ಮನೆ ಮಗನನ್ನ ಕಳೆದುಕೊಂಡು ಇಡೀ ಕುಟುಂಬವೇ ಇಂದು ಗೋಳಾಡ್ತಿದೆ. ಅಷ್ಟಕ್ಕೂ ಗೆಳೆಯನ ಬಿಡಲು ಹೋದವನಿಗೆ ಆಗಿದ್ದೇನೂ ಅಂದರೆ… ಈ ಸ್ಟೋರಿ ನೋಡಿ.
2 ವಾರಗಳ ಹಿಂದೆ ಅದು ರಾಜ್ಯವೇ ಬೆಚ್ಚಿ ಬಿದ್ದಿದ್ದ ಹೈಪ್ರೊಫೈಲ್, ಡೆಡ್ಲಿ ಆಕ್ಸಿಡೆಂಟ್. ಅಲ್ಲಿ ಕೊಲೆ ಮಾಡಿ ಕಾರು ಸಮೇತ ಶವ ಕಾಲುವೆಗೆ ಬೀಸಾಕಿದ್ರಾ ಅನ್ನೋ ಅನುಮಾನದಲ್ಲಿ ಸದ್ಯ ದಾವಣಗೆರೆ ಪೊಲೀಸರು ತನಿಖೆ ಮಾಡ್ತಿದ್ದ ತನಿಖಾ ವರದಿ ಬರುವ ಮುನ್ನವೇ ಇದೀಗ ದಾವಣಗೆರೆಯಲ್ಲಿ ಅಂತಹುದ್ದೆ ಮತ್ತೊಂದು ಡೆಡ್ಲಿ ಆಕ್ಸಿಡೆಂಟ್ ನಡೆದು ಹೋಗಿದೆ. ಹೌದು ದಾವಣಗೆರೆಯ ಹೊನ್ನಾಳಿ ಹರಿಹರದ ಮಧ್ಯೆ ಮಾಸಡಿ ಅನ್ನೋ ಗ್ರಾಮದ ಸಮೀಪ ಮಹೇಶ್ವರ ಹಳ್ಳಕ್ಕೆ ಕಾರು ಬಿದ್ದು ಬೆಳಗಾವಿ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾನೆ.
ನವೆಂಬರ್ 25-26ರ ಮಧ್ಯರಾತ್ರಿ ನಡೆದ ಅಪಘಾತ ಮತ್ತೆ ಬೆಚ್ಚಿ ಬೀಳುವಂತೆ ಮಾಡಿದೆ. ಬೆಳಗಾವಿ ತಾಲೂಕಿನ ಬಸವನಕುಡಚಿ ಗ್ರಾಮದ ನಿವಾಸಿ ಪ್ರಕಾಶ್ ಅರಳಿಕಟ್ಟೆ ಎಂಬ ಯುವಕನೇ ಇದೀಗ ಕಾರು ಸಮೇತ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿರುವುದು. ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಪ್ರಕಾಶ್ ತಂದೆ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಗನನ್ನ ಕಳೆದುಕೊಂಡ ಕುಟುಂಬ ಇಂದು ಕಣ್ಣೀರಿಡ್ತಿದೆ.
ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ್ದ ಕುಟುಂಬಸ್ಥರು ಮರಣೋತ್ತರ ಪರೀಕ್ಷೆ ಮುಗಿಸಿಕೊಂಡು ಬೆಳಗಾವಿಯಲ್ಲಿ ಮಗನ ಅಂತ್ಯಸಂಸ್ಕಾರ ಮುಗಿಸಿದ್ದಾರೆ. ಅಷ್ಟಕ್ಕೂ ಪ್ರಕಾಶ್ ಅರಳಿಕಟ್ಟಿಗೆ ಕಳೆದ ಏಳು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು, ಏಕಾಏಕಿ ಅಪಘಾತದಲ್ಲಿ ಪ್ರಕಾಶ್ ಮೃತಪಟ್ಟಿದ್ದರಿಂದ ಆತನ ಪತ್ನಿ ಶಾಕ್ ಗೆ ಒಳಗಾಗಿದ್ದಾರೆ. ಇತ್ತ ಮಗನನ್ನ ಕಳೆದುಕೊಂಡ ತಂದೆ ತಾಯಿ ಇಡೀ ಕುಟುಂಬ ಕಣ್ಣೀರಿಡ್ತಿದ್ದು ಗೆಳೆಯನನ್ನ ಬಿಟ್ಟು ಬರಲು ಹೋದ ಮಗ ವಾಪಾಸ್ ಮನೆಗೆ ಜೀವಂತ ಬರಲಿಲ್ಲ ಅಂತಾ ಕೊರಗುತ್ತಿದ್ದಾರೆ. ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಳ್ತಿದ್ದ ಪ್ರಕಾಶ್ ನಿಧನದಿಂದ ಎಲ್ಲರೂ ಶಾಕ್ ಗೆ ಒಳಗಾಗಿದ್ದಾರೆ.
ಒಟ್ಟಾರೆಯಾಗಿ ಗೆಳೆಯನ್ನ ಬಿಟ್ಟು ಬರಲು ಶಿವಮೊಗ್ಗಕ್ಕೆ ಹೋಗಿದ್ದ ಪ್ರಕಾಶ್ ಕಾರು ಸಮೇತ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಏಳು ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರಕಾಶ್ ಹೆಂಡತಿ ಅನಾಥವಾದ್ರೇ ಇತ್ತ ಮೂರು ಮಕ್ಕಳ ಪೈಕಿ ಓರ್ವ ಮಗನನ್ನ ಕಳೆದುಕೊಂಡು ಇಡೀ ಕುಟುಂಬ ಕಣ್ಣೀರಿಡ್ತಿದೆ. ವಾಪಾಸ್ ಬರ್ತಿದ್ದ ಪ್ರಕಾಶ್ ಅಪಘಾತಕ್ಕೆ ಕಾರಣವೇನು ಅನ್ನೋ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸಿ ಸತ್ಯಾಸತ್ಯತೆ ಹೊರ ತರಬೇಕಿದೆ. (ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ)