Crime News: ಮಹಾರಾಷ್ಟ್ರದಲ್ಲಿ ಮನೆಯೊಳಗೆ ಜನರೇಟರ್ ಸ್ಫೋಟ; ಒಂದೇ ಕುಟುಂಬದ 6 ಜನ ಸಾವು

| Updated By: ಸುಷ್ಮಾ ಚಕ್ರೆ

Updated on: Jul 13, 2021 | 3:41 PM

Maharashtra Crime News: ಈ ಘಟನೆ ಸಂಭವಿಸಿದಾಗ ಮನೆಯಲ್ಲಿದ್ದ ಒಬ್ಬಳು ಅಪ್ರಾಪ್ತ ಬಾಲಕಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Crime News: ಮಹಾರಾಷ್ಟ್ರದಲ್ಲಿ ಮನೆಯೊಳಗೆ ಜನರೇಟರ್ ಸ್ಫೋಟ; ಒಂದೇ ಕುಟುಂಬದ 6 ಜನ ಸಾವು
ಪ್ರಾತಿನಿಧಿಕ ಚಿತ್ರ
Follow us on

ಮುಂಬೈ: ಮನೆಯೊಳಗೆ ಜನರೇಟರ್ ಸ್ಫೋಟಗೊಂಡ ಪರಿಣಾಮ ಒಂದೇ ಕುಟುಂಬದ 6 ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ಚಂದ್ರಾಪುರ ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿ ಈ ದುರಂತ ಸಂಭವಿಸಿದೆ. ಜನರೇಟರ್​ ಸ್ಫೋಟಗೊಂಡಿದ್ದರಿಂದ ಕಾರ್ಬನ್ ಮಾನಾಕ್ಸೈಡ್ (carbon monoxide) ಬಿಡುಗಡೆಯಾಗಿ ಮನೆಯೊಳಗಿದ್ದ 6 ಜನರು ಕೊನೆಯುಸಿರೆಳೆದಿದ್ದಾರೆ. ಸಾವನ್ನಪ್ಪಿದವರಲ್ಲಿ ಮೂವರು ಅಪ್ರಾಪ್ತರು ಕೂಡ ಸೇರಿದ್ದಾರೆ.

ನಿನ್ನೆ ಸಂಜೆಯಿಂದ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ದುರ್ಗಾಪುರದಲ್ಲಿ ಪವರ್ ಕಟ್ ಇತ್ತು. ಇಡೀ ಊರಿನಲ್ಲೇ ಕರೆಂಟ್ ಇರಲಿಲ್ಲ. ಹೀಗಾಗಿ, ರಾತ್ರಿ ಊಟ ಮಾಡುವ ಸಂದರ್ಭದಲ್ಲಿ ಮನೆಯೊಳಗಿದ್ದ ಪವರ್ ಜನರೇಟರ್ ಅನ್ನು ಆನ್ ಮಾಡಿದ್ದಾರೆ. ಈ ವೇಳೆ ಜನರೇಟರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡು, ಉಸಿರಾಡಲು ಸಾಧ್ಯವಾಗದೆ ಮನೆಯೊಳಗಿದ್ದವರು ಪ್ರಾಣ ಬಿಟ್ಟಿದ್ದಾರೆ. ಈ ಘಟನೆ ಸಂಭವಿಸಿದಾಗ ಮನೆಯಲ್ಲಿದ್ದ ಒಬ್ಬಳು ಅಪ್ರಾಪ್ತ ಬಾಲಕಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದ್ದು, ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ದುರಂತದಲ್ಲಿ ಸಾವನ್ನಪ್ಪಿದವರೆಲ್ಲರೂ 25 ವರ್ಷದೊಳಗಿನವರೇ ಆಗಿದ್ದಾರೆ. ಸಾವನ್ನಪ್ಪಿದವರನ್ನು ಕಂಟ್ರಾಕ್ಟರ್ ರಮೇಶ್ ಲಷ್ಕರ್ (25), ಅಜಯ್ ಲಷ್ಕರ್ (21), ಲಖನ್ ಲಷ್ಕರ್ (10), ಕಿಶನ್ ಲಷ್ಕರ್ (8). ಪೂಜಾ ಲಷ್ಕರ್ (14), ಮಾಧುರಿ ಲಷ್ಕರ್ (20) ಎಂದು ಗುರುತಿಸಲಾಗಿದೆ. 6 ಮಂದಿಯ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಜನರೇಟರ್ ಸ್ಫೋಟವಾಗಲು ಕಾರಣವೇನೆಂಬ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: Bengaluru News: ಬೆಂಗಳೂರಿಗರೇ ಗಮನಿಸಿ; ಈ ಏರಿಯಾಗಳಲ್ಲಿ ಜುಲೈ 17ರವರೆಗೆ ಕರೆಂಟ್ ಇರೋದಿಲ್ಲ