ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪುತ್ರಿ ಹರ್ಷಿತಾ ಕೇಜ್ರಿವಾಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಎಲ್ಲರ ಗಮನ ಸೆಳೆದಿದ್ದ ಹರ್ಷಿತಾ, OLXನಲ್ಲಿ ಸೋಫಾ ಮಾರಲು ಹೋಗಿ ₹ 34 ಸಾವಿರ ಕಳೆದುಕೊಂಡಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಒಬ್ಬ ಮುಖ್ಯಮಂತ್ರಿಗಳ ಮಗಳೇ QR Code Scamನಿಂದ ಹಣ ಕಳೆದುಕೊಂಡಿದ್ದಾರೆ ಎನ್ನುವ ವಿಚಾರ ಜನಸಾಮಾನ್ಯರಲ್ಲಿ ಬೆರಗು ಮೂಡಿಸಿತ್ತು. ಇದೀಗ ಅವರಿಗೆ ಮೋಸ ಮಾಡಿದ ಮೂವರು ಕಿರಾತಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಜೀದ್, ಕಪಿಲ್ ಮತ್ತು ಮನ್ವೇಂದ್ರ ಎಂಬುವವರು ಸೆರೆಸಿಕ್ಕಿದ್ದು, ಇ-ಕಾಮರ್ಸ್ ಸೈಟ್ನಲ್ಲಿ ನಕಲಿ ಖಾತೆ ತೆರೆದು ಜನರಿಗೆ ಟೋಪಿ ಹಾಕುತ್ತಿದ್ದ ಇನ್ನೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಅದೇನೇ ಇದ್ದರೂ ಈ ಎಲ್ಲಾ ಬೆಳವಣಿಗೆಗಳು ಜನಸಾಮಾನ್ಯರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಮುಖ್ಯಮಂತ್ರಿಯೊಬ್ಬರ ಮಗಳು QR Code ಸ್ಕ್ಯಾನ್ ಮಾಡಿ ಹಣ ಕಳೆದುಕೊಳ್ಳುವ ಮಟ್ಟಿಗೆ ಯಾಮಾರಿದ್ದು ಹೇಗೆ ಎಂಬುದು ಎಷ್ಟು ಅಚ್ಚರಿಯೋ, ಅಷ್ಟೇ ಅಥವಾ ಅದಕ್ಕಿಂತ ತುಸು ಹೆಚ್ಚೇ ಅಚ್ಚರಿ ಮೂಡಿಸುವುದು ಅವರಿಗೆ ಮೋಸ ಮಾಡಿದ ಆರೋಪಿಗಳನ್ನು ಒಂದೇ ವಾರದಲ್ಲಿ ಬಂಧಿಸಿರುವ ವಿಚಾರ. ಏಕೆಂದರೆ ಈ ತೆರನಾದ QR Code Scam ಜಾಲಕ್ಕೆ ಸಿಕ್ಕು ಈಗಾಗಲೇ ದೇಶದ ಸಾವಿರಾರು ಜನರ ಕೈ ಸುಟ್ಟುಕೊಂಡಿದ್ದಾರೆ.
ವಿಪರ್ಯಾಸವೆಂದರೆ ಅಂತಹವರಲ್ಲಿ ಬಹುಪಾಲು ಮಂದಿಗೆ ಹಣ ಸಿಗುವ ಮಾತಿರಲಿ, ಆರೋಪಿಗಳನ್ನು ಪತ್ತೆ ಮಾಡುವ ಭರವಸೆಯೂ ಪೊಲೀಸರಿಂದ ಸಿಕ್ಕಿಲ್ಲ. ಈ ದೇಶದಲ್ಲಿ ಜನಸಾಮಾನ್ಯರಿಗೊಂದು ನ್ಯಾಯ, ಗಣ್ಯಾತಿಗಣ್ಯರಿಗೊಂದು ನ್ಯಾಯ ಎನ್ನುವ ಮಾತು ಇಂದು ನಿನ್ನೆಯದಲ್ಲ. ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ ಎನ್ನುವುದು ಘೋಷಣೆಗೆ ಮಾತ್ರ ಸೀಮಿತವಾಗಿದೆ ಎಂದು ಅದೆಷ್ಟೋ ಬಾರಿ ಸಾಬೀತಾಗಿದೆ. ಅದು ಈ ವಿಚಾರದಲ್ಲೂ ಸತ್ಯವಾಗಿದೆಯಷ್ಟೇ. ಹಾಗಂತ, ಇದನ್ನು ಹಗುರವಾಗಿ ಪರಿಗಣಿಸುವುದು ಖಂಡಿತಾ ಸಾಧ್ಯವಿಲ್ಲ. ಏಕೆಂದರೆ, ಡಿಜಿಟಲ್ ಇಂಡಿಯಾ, ಕ್ಯಾಶ್ಲೆಸ್ ವ್ಯವಹಾರ ಎಂದು ಜನಸಾಮಾನ್ಯರಿಗೆ ತಂತ್ರಜ್ಞಾನವನ್ನು ಹತ್ತಿರಾಗಿಸಲು ಪ್ರಯತ್ನಿಸಿದ ಸರ್ಕಾರ, ಅದೇ ತಂತ್ರಜ್ಞಾನದಿಂದ ಜನರಿಗೆ ಮೋಸವಾದಾಗ ಪರಿಹಾರ ದೊರಕಿಸಲೂ ಮುತುವರ್ಜಿ ವಹಿಸಬೇಕು ಮತ್ತು ಇಂತಹ ಮೋಸಗಳನ್ನು ತಡೆಗಟ್ಟಲು ಕಾರ್ಯಪ್ರವೃತ್ತ ಆಗಬೇಕು.
ಇದನ್ನೂ ಓದಿ: OLXನಲ್ಲಿ ಸೋಫಾ ಕೊಳ್ಳುವುದಾಗಿ ಹೇಳಿ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಮೋಸ ಮಾಡಿದ ಆರೋಪಿಗಳು ಅರೆಸ್ಟ್
ಆದರೆ, ಇಲ್ಲಿ ಆಗುತ್ತಿರುವುದೇನು? QR Code Scamನಿಂದಾಗಿ ಹಣ ಕಳೆದುಕೊಂಡಿದ್ದೇವೆ ಎಂದು ಕಾನೂನಿನ ಮೊರೆ ಹೋಗುವ ಶ್ರೀಸಾಮಾನ್ಯರಿಗೆ ಇನ್ನುಮುಂದೆ ಜಾಗರೂಕರಾಗಿರಿ ಎಂದು ಬುದ್ಧಿವಾದ ಹೇಳಿ, ನಾವು ನಮ್ಮ ಕೈಲಾದ ಪ್ರಯತ್ನ ಮಾಡ್ತೀವಿ, ಸುಳಿವು ಸಿಕ್ಕರೆ ತಿಳಿಸ್ತೀವಿ ಎಂಬ ಧೈರ್ಯ ನೀಡಿ ಕಳುಹಿಸಲಾಗುತ್ತಿದೆಯೇ ಹೊರತು ದುಡ್ಡು ಮರಳಿ ಸಿಗುವುದು, ಆರೋಪಿಗಳನ್ನು ಹುಡುಕುವುದು ಬಹುತೇಕ ಅಸಾಧ್ಯ ಎಂಬಂತಾಗಿದೆ. ಆದರೆ, ಅದೇ ಮೋಸ ಒಬ್ಬ ಮುಖ್ಯಮಂತ್ರಿ ಮಗಳಿಗಾದರೆ ತ್ವರಿತಗತಿಯ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತೆ. ಇದು ವಿಪರ್ಯಾಸವಲ್ಲದೇ ಮತ್ತೇನು?
ಕರ್ನಾಟಕವನ್ನು ಮಾತ್ರ ಪರಿಗಣಿಸಿದರೂ ಕಳೆದ ಮೂರ್ನಾಲ್ಕು ವರ್ಷಗಳಿಂದೀಚೆಗೆ QR Code Scamಗೆ ಸಂಬಂಧಿಸಿದಂತೆ ನೂರಾರು ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಅನೇಕರು ಪ್ರಕರಣ ದಾಖಲಿಸಿದ್ದಾರೆ ಕೂಡ. ಆದರೆ, ಆ ಪೈಕಿ ನ್ಯಾಯ ಸಿಕ್ಕಿದೆ ಎಂದು ಹೇಳಿರುವವರು ವಿರಳ. ಇದೀಗ ಹರ್ಷಿತಾ ಕೇಜ್ರಿವಾಲ್ಗೆ ಮೋಸ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂಬ ವರದಿ ಹೊರಬಿದ್ದ ಬೆನ್ನಲ್ಲೇ ಜನಸಾಮಾನ್ಯರಿಗೆ ಮೋಸವಾದರೆ ತ್ವರಿತಗತಿಯ ವಿಚಾರಣೆ, ಪರಿಹಾರ ಏಕಿಲ್ಲ ಎಂಬ ಪ್ರಶ್ನೆ ಎದ್ದಿದೆ.
ಭಾರತೀಯ ಸೇನೆಯ ಹೆಸರು ಹೇಳಿ ಮೋಸ ಮಾಡ್ತಾರೆ, ಎಚ್ಚರಿಕೆ.
ಇದೇ ವಿಚಾರವಾಗಿ ಮೈಸೂರಿನವರೊಬ್ಬರು ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿ ತಮಗಾದ ಅನುಭವ ಹಂಚಿಕೊಂಡಿದ್ದಾರೆ. ಸ್ವರೂಪ (ಹೆಸರು ಬದಲಿಸಲಾಗಿದೆ) ಎಂಬುವವರು ಅಕ್ಟೋಬರ್ ತಿಂಗಳಿನಲ್ಲಿ OLX ಮೂಲಕ ₹3000ಕ್ಕೆ ತಮ್ಮ ಪಠ್ಯಪುಸ್ತಕಗಳನ್ನು ಮಾರುವುದಾಗಿ ಜಾಹೀರಾತು ನೀಡಿದ್ದಾರೆ. ಜಾಹೀರಾತು ಹಾಕಿ ಕೆಲ ಕ್ಷಣಗಳಲ್ಲಿಯೇ OLX ಮೂಲಕವೇ ಶ್ರೀಕಾಂತ್ ವರ್ಮಾ ಎಂಬಾತ ಮೆಸೇಜ್ ಮಾಡಿ ಪುಸ್ತಕ ಕೊಳ್ಳುವುದಾಗಿ ತಿಳಿಸಿದ್ದಾನೆ.
ನಂತರ ಕರೆ ಮಾಡಿದಾಗ ತಾನು ಭಾರತೀಯ ಸೇನೆಯಲ್ಲಿರುವುದಾಗಿಯೂ, ತನ್ನ ಪತ್ನಿ ಮತ್ತು ಪುತ್ರ ಮೈಸೂರಿನ ದೊಡ್ಡ ಗಡಿಯಾರದ ಸಮೀಪ ನೆಲೆಸಿರುವುದಾಗಿಯೂ ಕಥೆ ಕಟ್ಟಿದ್ದಾನೆ. ದಂತವೈದ್ಯಕೀಯ ಕೋರ್ಸ್ ಮಾಡುತ್ತಿರುವ ಮಗನಿಗೆ ಈ ಪುಸ್ತಕಗಳು ಬೇಕಾಗಿವೆ, ಆತ ಸಂಜೆ ನಿಮ್ಮ ಮನೆಗೆ ಬಂದು ಪುಸ್ತಕ ಪಡೆಯಲಿದ್ದಾನೆ. ನಾನೀಗ ಕರ್ತವ್ಯದಲ್ಲಿರುವ ಕಾರಣ ಆನ್ಲೈನ್ ಮೂಲಕ ಹಣ ಕಳಿಸುತ್ತೇನೆ ಎಂದಿದ್ದಾನೆ. ಆತ ಹೇಳಿದ ಮಾತನ್ನು ನಂಬಿದ ಸ್ವರೂಪ ಓಕೆ ಎಂದಿದ್ದಾರೆ. ನಿಮ್ಮ ಬಳಿ ಫೋನ್ ಪೇ ಅಥವಾ ಗೂಗಲ್ ಪೇ ಇದೆಯಾ ಎಂದು ಕೇಳಿದಾತ, ‘ಫೋನ್ ಪೇ’ ಮೂಲಕವೇ ಹಣ ಕಳುಹಿಸಲು ತಿಳಿಸಿ QR Code ಕಳುಹಿಸಿದ್ದಾನೆ. ಇದನ್ನು ಸ್ಕ್ಯಾನ್ ಮಾಡಿದರೆ ನಾನು ನೀಡಬೇಕಾದ ಹಣ ನೇರವಾಗಿ ನಿಮ್ಮ ಖಾತೆಗೆ ಬರಲಿದೆ ಎಂದು ಹೇಳಿ, ಖಾತೆ ಸರಿ ಇದೆಯಾ ನೋಡಲು ₹5 ಕಳುಹಿಸಿದ್ದಾನೆ. ನಂತರ ಮೊದಲು ₹2000 ಕಳುಹಿಸುವುದಾಗಿ ಹೇಳಿದಾಗ ಸ್ವರೂಪ ಒಂದೇ ಬಾರಿಗೆ ಪೂರ್ಣ ಹಣ ಕಳುಹಿಸಿ ಎಂದು ಪ್ರತ್ಯುತ್ತರಿಸಿದ್ದಾರೆ.
ಸ್ವರೂಪರ ಈ ಮಾತಿಗೆ ಅತಿ ಬುದ್ಧಿವಂತಿಕೆಯಿಂದ ಉತ್ತರಿಸಿದ ಶ್ರೀಕಾಂತ್ ವರ್ಮಾ, ನಾನು ಆರ್ಮಿಯಲ್ಲಿರುವ ಕಾರಣ ಸ್ಮಾರ್ಟ್ಫೋನ್ ಬಳಸಲು ಆಗುತ್ತಿಲ್ಲ. ಅಲ್ಲದೇ, ಸೈನ್ಯದ ಖಾತೆಯಿಂದಲೇ ಹಣ ವರ್ಗವಾಗಬೇಕಿದ್ದು ₹2000 ಅಷ್ಟೇ ಒಂದು ಬಾರಿಗೆ ವರ್ಗವಾಗುತ್ತದೆ ಎಂದಿದ್ದಾನೆ. ಇದನ್ನು ನಂಬಿದ ಸ್ವರೂಪ QR Code ಸ್ಕ್ಯಾನ್ ಮಾಡಲಾರಂಭಿಸಿದ್ದಾರೆ. ಆ ಕ್ಷಣದಿಂದಲೇ ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India – SBI) ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಲು ಆರಂಭವಾಗಿದೆಯಾದರೂ ಬ್ಯಾಂಕಿನಿಂದ ಯಾವುದೇ ಮೆಸೇಜ್ ಬಾರದ ಕಾರಣ ವಿಚಾರ ಗಮನಕ್ಕೆ ಬಂದಿಲ್ಲ. ಇತ್ತ ಸ್ವರೂಪ ಇನ್ನೂ ಹಣ ಬಂದಿಲ್ಲ ಎಂದು ಸ್ಕ್ಯಾನ್ ಮಾಡುತ್ತಲೇ ಇದ್ದರೆ, ಅತ್ತ ಖಾತೆಯಿಂದ ₹2 ಸಾವಿರ, ₹9ಸಾವಿರ, ₹19ಸಾವಿರ ಹಂತಹಂತವಾಗಿ ಕಡಿತವಾಗಿ ಒಟ್ಟು ₹84ಸಾವಿರ ಹೋಗಿದೆ. ಇಷ್ಟಾದ ನಂತರ ಅನುಮಾನಗೊಂಡು ಮೊಬೈಲ್ ಬ್ಯಾಂಕ್ನಿಂದ ಲಾಗಿನ್ ಆಗಿ ಖಾತೆ ಪರಿಶೀಲಿಸಿದರೆ ಖಾತೆಯಲ್ಲಿದ್ದ ಹಣ ಖಾಲಿಯಾಗಿರುವುದು ಗೊತ್ತಾಗಿದೆ.
ಅನಿರೀಕ್ಷಿತ ಆಘಾತಕ್ಕೆ ಒಳಗಾದ ಸ್ವರೂಪ ದಿಕ್ಕುತೋಚದಂತಾಗಿ ಸೀದಾ SBI ಬ್ರಾಂಚ್ಗೆ ತೆರಳಿ ತಮಗಾದ ಮೋಸವನ್ನು ಹೇಳಿಕೊಂಡಿದ್ದಾರೆ. ಬ್ಯಾಂಕ್ನವರು ಸೀದಾ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಅಲ್ಲಿಂದ ಪೊಲೀಸರ ಬಳಿಗೆ ಬಂದಾಗ ಬ್ಯಾಂಕ್ನಿಂದ ಸಂಬಂಧಿತ ದಾಖಲೆಗಳನ್ನು ತರಲು ಹೇಳಿದ್ದಾರೆ. ಕೊರೊನಾ ನಿಯಮಾವಳಿಗಳ ಕಾರಣ ದೂರು ಪ್ರಕ್ರಿಯೆ ಮುಗಿಯುವಾಗ ಒಂದು ದಿನ ಕಳೆದುಹೋಗಿದೆ. ನಂತರ ತನಿಖೆ ನಡೆಸುವುದಾಗಿ ಹೇಳಿದ ಪೊಲೀಸರು, ಏನಾದರೂ ಮಾಹಿತಿ ಸಿಕ್ಕರೆ ಕರೆಮಾಡುವುದಾಗಿ ತಿಳಿಸಿದ್ದಾರೆ.
ಇಷ್ಟಾದರೂ ವಾರ, ಹದಿನೈದು ದಿನಕ್ಕೊಮ್ಮೆ ಪೊಲೀಸ್ ಠಾಣೆಗೆ ಹೋಗಿ ಸ್ವರೂಪ ಪ್ರಕರಣದ ಬಗ್ಗೆ ವಿಚಾರಿಸುತ್ತಲೇ ಇದ್ದು, ಘಟನೆಯಾಗಿ 4 ತಿಂಗಳಾದರೂ ಆರೋಪಿಗಳು ಸಿಗುವ ಬಗ್ಗೆಯಾಗಲೀ, ಹಣ ಮರಳಿ ಸಿಗುವ ಕುರಿತಾಗಲೀ ಭರವಸೆ ಸಿಕ್ಕಿಲ್ಲ. ಸದ್ಯ ಪೊಲೀಸರ ತನಿಖೆ ಪ್ರಕಾರ ಹಣ ಲಪಟಾಯಿಸಿರುವ ವ್ಯಕ್ತಿಯ ಮೊಬೈಲ್ ಲೊಕೇಷನ್ ರಾಜಸ್ಥಾನದಲ್ಲಿತ್ತು ಹಾಗೂ ಹಣ ಆತನ PayTM ಖಾತೆಗೆ ಹಣ ಜಮೆಯಾಗಿದೆ ಎಂದು ತಿಳಿದುಬಂದಿದೆ. ಇದರ ಹೊರತಾಗಿ ಬೇರಾವ ಬೆಳವಣಿಗೆಯೂ ಕಾಣುತ್ತಿಲ್ಲ. ಈ ಮಧ್ಯೆ ಆರೋಪಿ ಪುಸ್ತಕ ಪಡೆಯಲು ಮನೆ ವಿಳಾಸ ಕೇಳಿದಾಗ ಸ್ವರೂಪ ಅವರು ಅದನ್ನು ಹಂಚಿಕೊಂಡಿದ್ದರು. ಹಣ ಕಳೆದುಕೊಂಡ ಮೇಲೆ ಅದರಿಂದ ಭಯಗೊಂಡು ಮನೆಯನ್ನೂ ಬದಲಿಸಿದ್ದಾರೆ.
ಇದು ಸ್ವರೂಪ ಒಬ್ಬರ ಕಥೆಯಲ್ಲ. ಹೀಗೆ ಆನ್ಲೈನ್ ಮೂಲಕ ವಂಚನೆಗೆ ಒಳಗಾದವರ ಪಟ್ಟಿ ದೊಡ್ಡದಿದೆ. QR Code ಸ್ಕ್ಯಾನ್ ಮಾಡಿ, ಹಣದಾಸೆ ತೋರಿಸುವ ಮೆಸೇಜ್ ನಂಬಿ, ಬ್ಯಾಂಕಿನವರು ಎಂದು ಹೇಳಿಕೊಳ್ಳುವವರ ಕರೆ ಅಥವಾ ಮೆಸೇಜ್ಗಳನ್ನು ನಂಬಿ ಖಾತೆ ಬರಿದುಮಾಡಿಕೊಂಡವರು ಬಹಳಷ್ಟಿದ್ದಾರೆ. ಸಣ್ಣಪುಟ್ಟ ಮೊತ್ತದ ಹಣ ಕಳೆದುಕೊಂಡವರು ಅದರಾಸೆಯನ್ನೇ ಬಿಟ್ಟು ದೂರು ನೀಡದೇ ಸುಮ್ಮನಿದ್ದಾರೆ. ದೊಡ್ಡ ಮೊತ್ತ ಕಳೆದುಕೊಂಡವರು ತಮ್ಮ ಹಣ ಹೇಗಾದರೂ ಸಿಗಬಹುದಾ ಎಂಬ ನಿರೀಕ್ಷೆಯಲ್ಲಿ ಕಾಯುತ್ತಲೇ ಇದ್ದಾರೆ.
ಆದರೆ, ಇದಕ್ಕೆ ತಾರ್ಕಿಕ ಅಂತ್ಯ ನೀಡುವುದು ಹೇಗೆ? ಮತ್ತು ಯಾರು? ಎನ್ನುವುದು ಸದ್ಯದ ಪ್ರಶ್ನೆ. ಅರವಿಂದ್ ಕೇಜ್ರಿವಾಲ್ ಅವರ ಮಗಳಿಗೆ ಮೋಸವಾದಾಗ ಒಂದೇ ವಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಬಹುದಾದರೆ ಉಳಿದ ಪ್ರಕರಣಗಳಲ್ಲೂ ಇದು ಸಾಧ್ಯವಲ್ಲವೇ? ಇದರತ್ತ ಸರ್ಕಾರ ಇನ್ನಾದರೂ ಗಂಭೀರವಾಗಿ ಗಮನ ಹರಿಸುವುದೇ? ಮೋಸದ ಜಾಲಕ್ಕೆ ಸಿಕ್ಕು ಹಣ ಕಳೆದುಕೊಂಡವರಿಗೆ ಹಣ ಮರಳಿಸಲು ನಿರ್ಧರಿಸುವುದೇ? ಕಾದುನೋಡಬೇಕಿದೆ.
Published On - 9:36 pm, Mon, 15 February 21