ನವದೆಹಲಿ: ಅಸಾನಿ ಚಂಡಮಾರುತವು (Cyclone Asani) ತನ್ನ ಹಾದಿಯನ್ನು ಬದಲಿಸಿದೆ. ಈ ಚಂಡಮಾರುತ ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಆಂಧ್ರಪ್ರದೇಶದ ಕರಾವಳಿಯನ್ನು ಮುಟ್ಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಕರಾವಳಿಗೆ ರೆಡ್ ಅಲರ್ಟ್ (Red Alert) ನೀಡಲಾಗಿದೆ. ಚಂಡಮಾರುತದಿಂದಾಗುವ ಅನಾಹುತಗಳನ್ನು ತಡೆಯಲು ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಆಂಧ್ರ ಪ್ರದೇಶದಲ್ಲಿ ಅಸಾನಿ ಚಂಡಮಾರುತ ಏಳುವ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬಂಗಾಳಕೊಲ್ಲಿಯಲ್ಲಿ ‘ಅಸಾನಿ’ ಚಂಡಮಾರುತದ ಪ್ರಭಾವದಿಂದ ವಿಶಾಖಪಟ್ಟಣಂನಲ್ಲಿ ಭಾರೀ ಮಳೆಯಾಗಿದೆ. ಅಸಾನಿ ಚಂಡಮಾರುತವು ಇಂದು ಆಂಧ್ರ ಕರಾವಳಿಯತ್ತ ಚಲಿಸುತ್ತಿದೆ. ಹೀಗಾಗಿ, ಆಂಧ್ರಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಸೈಕ್ಲೋನಿಕ್ ಚಂಡಮಾರುತವು ಮೇ 11ರ ಬೆಳಿಗ್ಗೆ ಕಾಕಿನಾಡ ಅಥವಾ ವಿಶಾಖಪಟ್ಟಣಕ್ಕೆ ಸಮೀಪವಿರುವ ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯನ್ನು ತಲುಪುವ ನಿರೀಕ್ಷೆಯಿದೆ.
ಅಸಾನಿ ಎಂದರೆ ಸಿಂಹಳ ಭಾಷೆಯಲ್ಲಿ ಕ್ರೋಧ ಎಂದು ಅರ್ಥ. ಬುಧವಾರ ಬೆಳಗ್ಗೆ ವೇಳೆಗೆ ಈ ಚಂಡಮಾರುತ ವಾಯುವ್ಯಕ್ಕೆ ಚಲಿಸುವ ಮತ್ತು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯನ್ನು ಕಾಕಿನಾಡ- ವಿಶಾಖಪಟ್ಟಣಂ ಕರಾವಳಿಯ ಸಮೀಪ ತಲುಪುವ ಸಾಧ್ಯತೆಯಿದೆ. ಅಸಾನಿ ಚಂಡಮಾರುತ ಉತ್ತರದಿಂದ ಈಶಾನ್ಯಕ್ಕೆ ನಿಧಾನವಾಗಿ ಮರುಕಳಿಸುವ ಸಾಧ್ಯತೆಯಿದೆ ಮತ್ತು ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವೆ ಆಂಧ್ರಪ್ರದೇಶದ ಕರಾವಳಿಯಲ್ಲಿ ಚಲಿಸುತ್ತದೆ. ನಂತರ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಿಂದ ವಾಯುವ್ಯ ಬಂಗಾಳ ಕೊಲ್ಲಿಯತ್ತ ಸಾಗುತ್ತದೆ.
ಅಸಾನಿಯು ಬುಧವಾರ ಬೆಳಗಿನ ವೇಳೆಗೆ ಕ್ರಮೇಣ ಚಂಡಮಾರುತವಾಗಿ ದುರ್ಬಲಗೊಳ್ಳುವ ಸಾಧ್ಯತೆಯಿದೆ. ಆದರೆ ಅದು ದುರ್ಬಲಗೊಳ್ಳುವ ಮೊದಲು, ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯಲ್ಲಿ ತೀವ್ರ ಮಳೆ ಮತ್ತು ಅತ್ಯಂತ ಬಲವಾದ ಗಾಳಿಯನ್ನು ಉಂಟುಮಾಡುವ ಮುನ್ಸೂಚನೆ ಇದೆ. ಅಸಾನಿ ಕಾಕಿನಾಡ ಮತ್ತು ವಿಶಾಖಪಟ್ಟಣಂ ನಡುವಿನ ಆಂಧ್ರಪ್ರದೇಶದ ಕರಾವಳಿಯಲ್ಲಿ ಸ್ಪರ್ಶಿಸಿ ಚಲಿಸುತ್ತದೆ. ಅಸಾನಿ ಬುಧವಾರ ಮುಂಜಾನೆ ಕರಾವಳಿಯನ್ನು ಮುಟ್ಟುವ ನಿರೀಕ್ಷೆಯಲ್ಲಿದ್ದೇವೆ. ಪರಿಣಾಮವು ತುಂಬಾ ತೀವ್ರವಾಗಿರದಿರಬಹುದು ಆದರೆ ಇನ್ನೂ ಜನರು ಸಿದ್ಧರಾಗಿರಬೇಕು ಎಂದು ಹವಾಮಾನ ಬ್ಯೂರೋದ ಸೈಕ್ಲೋನ್ ಮೇಲ್ವಿಚಾರಣಾ ವಿಭಾಗದ ಉಸ್ತುವಾರಿ ಆನಂದ ಕುಮಾರ್ ದಾಸ್ ಹೇಳಿದ್ದಾರೆ.
ಆಂಧ್ರಪ್ರದೇಶ ಕರಾವಳಿಗೆ ರೆಡ್ ವಾರ್ನಿಂಗ್ ನೀಡಲಾಗಿದೆ. ಈ ಚಂಡಮಾರುತದ ಅಬ್ಬರದಿಂದ ಕೃಷ್ಣಾ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಮತ್ತು ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಗಳ ತಗ್ಗು ಪ್ರದೇಶಗಳು ಮುಳುಗುವ ಸಾಧ್ಯತೆಯಿದೆ ಎಂದು IMD ಎಚ್ಚರಿಸಿದೆ. ಇಂದು ರಾತ್ರಿಯಿಂದ ಆಂಧ್ರಪ್ರದೇಶದ ಕರಾವಳಿ ಮತ್ತು ಒಡಿಶಾದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಗುರುವಾರ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯೊಂದಿಗೆ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ತೀವ್ರ ಚಂಡಮಾರುತದ ಕಾರಣದಿಂದ ವಿಮಾನ ಕಾರ್ಯಾಚರಣೆಗೆ ಹೊಡೆತ ನೀಡಿದ್ದು, ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಹಲವಾರು ವಿಮಾನಯಾನ ಸಂಸ್ಥೆಗಳು ವಿಮಾನಗಳನ್ನು ರದ್ದುಗೊಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ