ನೋಯ್ಡಾ: ಒಂದು ರೆಸ್ಟೋರೆಂಟ್ ಹೋಗಿ, ಬೇಕಾಗಿದ್ದನ್ನೆಲ್ಲ ಆರ್ಡರ್ ಮಾಡಿಕೊಂಡು, ಭರ್ಜರಿ ಊಟಮಾಡಿದ ಒಂದಷ್ಟು ಮಂದಿ, ಮರುಕ್ಷಣ, ಅಲ್ಲಿನ ಸಿಬ್ಬಂದಿಗೆ ಮನಬಂದಂತೆ ಥಳಿಸಿದ್ದಾರೆ. ಕೈಯಿಗೆ ಸಿಕ್ಕ ವಸ್ತುಗಳು ಅಂದರೆ, ಚಮಚ, ಲೋಟಗಳು ಕೊನೆಗೆ ಗ್ಯಾಸ್ ಸಿಲಿಂಡರ್ ಕೂಡ ಎತ್ತಿಕೊಂಡು ಹೊಡೆಯಲು ಹೋಗಿದ್ದಾರೆ. ಈ ವಿಡಿಯೋ ಕೂಡ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಗ್ರೇಟರ್ ನೊಯ್ಡಾದ (Greater Noida) ದಂಕೌರ್ ಎಂಬ ರೆಸ್ಟೋರೆಂಟ್ಗೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದರು. ಹೀಗೆ ಊಟಕ್ಕೆ ಹೋದಾಗ ಸರ್ವ್ ಮಾಡುವವನನ್ನು ನಿಂದಿಸಿದ್ದಾರೆ. ಆ ಸರ್ವರ್ ಅವರಿಗೆ ತಿರುಗುತ್ತರ ನೀಡಿದ್ದಾರೆ. ಅಷ್ಟಕ್ಕೇ ಕೋಪಗೊಂಡ ಇವರು ಆತನ ಮೇಲೆ ಕೈ ಮಾಡಿದ್ದಾರೆ. ಆಗ ಅಲ್ಲಿಯೇ ಇದ್ದ ರೆಸ್ಟೋರೆಂಟ್ನ ಇತರ ಸಿಬ್ಬಂದಿ ಸರ್ವರ್ ಸಹಾಯಕ್ಕೆ ಬಂದಿದ್ದಾರೆ. ಆಗ ಎರಡೂ ಗುಂಪುಗಳ ಮಧ್ಯೆ ಹೊಡೆದಾಟ ಮಿತಿಮೀರಿ ನಡೆದಿದೆ ಎಂದು ಹೇಳಲಾಗಿದೆ.
ರೆಸ್ಟೋರೆಂಟ್ನ ಸಿಸಿಟಿವಿಯಲ್ಲಿ ಈ ವಿಡಿಯೋಗಳು ವೈರಲ್ ಆಗಿವೆ. ಹೊಡೆದಾಟ, ಅದರಿಂದ ಉಂಟಾದ ಹಾನಿಗಳನ್ನು ಇದರಲ್ಲಿ ನೋಡಬಹುದಾಗಿದೆ. ಊಟಕ್ಕೆಂದು ಹೋಗಿದ್ದವರು ಅಲ್ಲಿ ಸಿಕ್ಕಿದ್ದನ್ನೆಲ್ಲ ಹಾಳುಗೆಡವಿದ್ದಾರೆ. ತಿಂಡಿಗಳು ಇದ್ದ ದೊಡ್ಡದೊಡ್ಡ ಪಾತ್ರೆಗಳನ್ನು ಕೆಡವಿದ್ದಾರೆ. ಒಂದು ಹಂತದಲ್ಲಿ ಸಿಲಿಂಡರ್ ಗ್ಯಾಸ್ ಕೂಡ ಕೈಗೆ ತೆಗೆದುಕೊಂಡಿದ್ದಾರೆ. ರೆಸ್ಟೋರೆಂಟ್ ಮಾಲೀಕ ಮಹೇಶ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗೇ, ಸಿಸಿಟಿವಿ ವಿಡಿಯೋವನ್ನು ಸಾಕ್ಷಿಯನ್ನಾಗಿ ನೀಡಿದ್ದಾರೆ. ಇವರೆಲ್ಲ ಕುಡಿದು ಬಂದಿದ್ದರು. ಇಲ್ಲಿಂದ ಹೋಗುವಾಗ ನನಗೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ತಮ್ಮ ಮೋಟರ್ ಬೈಕ್, ಸ್ಕೂಟರ್ಗಳನ್ನು ಬಿಟ್ಟು ಪಲಾಯನ ಮಾಡಿದ್ದಾರೆ ಎಂದೂ ಹೇಳಿದ್ದಾರೆ.
ಗುರುವಾರ ನಡೆದ ಘಟನೆ ಇದು. ಅಂದು ಸಂಜೆ ಹೊತ್ತಿಗೆ ರೆಸ್ಟೋರೆಂಟ್ಗೆ ಐವರು ಬಂದಿದ್ದರು. ಊಟ ಮುಗಿಯುತ್ತಿದ್ದಂತೆ ಅಲ್ಲಿನ ಸಿಬ್ಬಂದಿಯನ್ನು ನಿಂದಿಸಿದ್ದಲ್ಲದೆ, ದೊಡ್ಡ ದಾಂಧಲೆ, ಹೊಡೆದಾಟ ನಡೆಸಿದ್ದಾರೆ. ಮಾಲೀಕರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಸಿಟಿವಿ ಫೂಟೇಜ್ಗಳನ್ನೂ ಸ್ಕ್ಯಾನ್ ಮಾಡಲಾಗಿದೆ ಎಂದು ಗ್ರೇಟರ್ ನೊಯ್ಡಾದ ಡಿಸಿಪಿ ಅಮಿತ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಭಯದಲ್ಲೇ ಕೆರೆ ಹಾವು ಮುಟ್ಟಿ ಸಂಭ್ರಮಿಸಿದ ಕಾಂಗ್ರೆಸ್ ಶಾಸಕ ಡಾ. ರಂಗನಾಥ್
Published On - 10:29 am, Sun, 30 January 22