ಕೇರಳದ ಪ್ರಸಿದ್ಧ ಕೂಡಲಮಾಣಿಕ್ಯಂ ದೇವಸ್ಥಾನದಲ್ಲಿ 10 ದಿನಗಳ ಸಾಂಸ್ಕೃತಿಕ ಉತ್ಸವ ನಡೆಯಲಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಸಾಂಸ್ಕೃತಿಕ ಉತ್ಸವದ ವಿಚಾರಕ್ಕೆ ಸಂಬಂಧಪಟ್ಟಂತೆ ಭರತನಾಟ್ಯ ನೃತ್ಯ ಕಲಾವಿದೆ ಸೌಮ್ಯಾ ಸುಕುಮಾರನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ನಾನು ಕೇಳಿದ್ದೆ. ಆದರೆ ನನಗೆ ಅವಕಾಶ ಕೊಡಲು ನಿರಾಕರಿಸಲಾಯಿತು ಎಂದು ಹೇಳಿದ್ದಾರೆ. ಇನ್ನು ತಾವ್ಯಾಕೆ ಸೌಮ್ಯಾ ಸುಕುಮಾರನ್ ನೃತ್ಯ ಪ್ರದರ್ಶನ ನೀಡಲು ಅವಕಾಶ ಕೊಡಲಿಲ್ಲ ಎಂಬುದಕ್ಕೆ ದೇಗುಲ ಆಡಳಿತ ಸ್ಪಷ್ಟನೆ ಕೊಟ್ಟಿದೆ. ನಾವು ಈಗಾಗಲೇ ಹೇಳಿದ್ದೇವೆ, ಹಿಂದೂಯೇತರರಿಗೆ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕೆ ಅನುಮತಿ ಇಲ್ಲ ಎಂದು. ಅದು ಗೊತ್ತಿದ್ದೂ ಸೌಮ್ಯಾ ಅರ್ಜಿ ಸಲ್ಲಿಸಿದ್ದರು. ಸೌಮ್ಯಾ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು, ಹಾಗಾಗಿ ದೇಗುಲದಲ್ಲಿ ಭರತನಾಟ್ಯ ಮಾಡಲು ಅವಕಾಶ ಕೊಡಲಿಲ್ಲ ಎಂದು ಹೇಳಿದೆ.
ಈಗೆರಡು ದಿನಗಳ ಹಿಂದೆ ಮಾನ್ಸಿಯಾ ವಿ.ಪಿ. ಎಂಬುವರು ಇದೇ ಆಕ್ಷೇಪ ಎತ್ತಿದ್ದರು. ತಾನು ಮುಸ್ಲಿಂ ಎಂಬ ಕಾರಣಕ್ಕೆ ಕೂಡಲಮಾಣಿಕ್ಯಂ ದೇಗುಲದ ಆವರಣದಲ್ಲಿ ಭರತನಾಟ್ಯ ಪ್ರದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಕಾರ್ಯಕ್ರಮ ಏಪ್ರಿಲ್ 21ರಂದು ಆಯೋಜನೆಗೊಂಡಿತ್ತು. ಆದರೆ ಈಗ ಅದನ್ನು ದೇಗುಲ ಆಡಳಿತಾಧಿಕಾರಿಗಳು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದರು. ಅಂದಹಾಗೇ, ಮಾನ್ಸಿಯಾ ವಿ.ಪಿ. ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿ. ಇವರು ಶಾಸ್ತ್ರೀಯ ನೃತ್ಯವನ್ನು ಅಭ್ಯಾಸ ಮಾಡಿ, ಅದನ್ನು ಪ್ರದರ್ಶನವನ್ನೂ ಮಾಡುತ್ತಾರೆ ಎಂಬ ಕಾರಣಕ್ಕೆ ಇಸ್ಲಾಂ ಧರ್ಮಗುರುಗಳ ಕೋಪಕ್ಕೂ ಗುರಿಯಾಗಿದ್ದವರು. ಇದೀಗ ಸೌಮ್ಯಾಗೆ ಕೂಡ ದೇಗುಲ ಆಡಳಿತ ಮಂಡಳಿ ಒಪ್ಪಿಗೆ ನೀಡಲಿಲ್ಲ.
ಈ ಬಗ್ಗೆ ಎಎನ್ಐ ಜತೆ ಮಾತನಾಡಿದ ಸೌಮ್ಯಾ ಸುಕುಮಾರನ್, ‘ನಾನು ಭರತನಾಟ್ಯ ಪ್ರದರ್ಶನಕ್ಕೆ ಅವಕಾಶ ಕೇಳಿದ್ದೆ. ಆದರೆ ದೇಗುಲ ಆಡಳಿತ ನಿರಾಕರಿಸಿತು. ನನ್ನ ತಂದೆ ಮೂಲತಃ ಹಿಂದು ಧರ್ಮಕ್ಕೆ ಸೇರಿದವರು. ಮದುವೆಯಾದ ಮೇಲೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದಾರೆ ಎಂದೂ ನಾನು ಅವರಿಗೆ ಹೇಳಿದೆ. ಆಗ ದೇವಸ್ಥಾನದ ಆಡಳಿತಾಧಿಕಾರಿಗಳು, ದೇಗುಲದ ಹೊರಗೆ ಆಗಿದ್ದರೆ ನಾವೇನೂ ಹೇಳುತ್ತಿರಲಿಲ್ಲ. ಆದರೆ ಕಾರ್ಯಕ್ರಮವನ್ನು ದೇವಸ್ಥಾನದ ಒಳ ಆವರಣದಲ್ಲಿ ನಡೆಸಲಾಗುತ್ತಿದೆ. ಹಾಗಾಗಿ ಹಿಂದುಯೇತರರಿಗೆ ಅವಕಾಶ ಕೊಡುವುದು ಸಾಧ್ಯವಿಲ್ಲ ಎಂದು ಹೇಳಿದರು. ಅಷ್ಟು ಹೇಳಿದ ಮೇಲೆ ನಾನು ಸುಮ್ಮನಾದೆ’ ಎಂದು ತಿಳಿಸಿದ್ದಾರೆ.
ಕೂಡಲಮಾಣಿಕ್ಯಂ ದೇವಸ್ಥಾನ ಮಂಡಳಿ ಅಧ್ಯಕ್ಷ ಪ್ರದೀಪ್ ಮೆನೋನ್ ಪ್ರತಿಕ್ರಿಯೆ ನೀಡಿ, ಕೂಡಲಮಾಣಿಕ್ಯಂ ದೇವಸ್ವಂ ಮಂಡಳಿ ಕಾಯ್ದೆಯ ಪ್ರಕಾರ ಹಿಂದುಯೇತರರು ದೇಗುಲದೊಳಗೆ ಪ್ರವೇಶ ಮಾಡುವಂತಿಲ್ಲ. ಕೇರಳದ ಶೇ.90ರಷ್ಟು ದೇವಸ್ಥಾನಗಳಲ್ಲಿ ಇದೇ ನಿಯಮವೇ ಇದೆ. ಹಾಗಾಗಿ ನಾವು ಸೌಮ್ಯಾ ಅವರ ಬಳಿ ಅರ್ಜಿ ಹಿಂಪಡೆಯುವಂತೆ ಅತ್ಯಂತ ಗೌರವದಿಂದ, ವಿಧೇಯತೆಯಿಂದಲೇ ಕೇಳಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಒಟ್ಟಾರೆ ನೃತ್ಯದ ವಿಚಾರಕ್ಕೆ ಕೇರಳ ಇತ್ತೀಚೆಗೆ ಸುದ್ದಿಯಲ್ಲಿದೆ. ಕೆಲವು ದಿನಗಳ ಹಿಂದೆ ಕೇರಳದ ಪಾಲಕ್ಕಾಡ್ ಜಿಲ್ಲೆಯ, ಸರ್ಕಾರಿ ಮೋಯನ್ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಖ್ಯಾತ ನೃತ್ಯ ಕಲಾವಿದೆ ಡಾ. ನೀನಾ ಪ್ರಸಾದ್ ಅವರ ಮೋಹಿನಿಯಾಟ್ಟಂ ಪ್ರದರ್ಶನ ನಡೆಯುತ್ತಿತ್ತು. ಆದರೆ ಶಾಲೆಯ ಸಮೀಪದಲ್ಲೇ ವಾಸವಾಗಿದ್ದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಧೀಶ ಕಲಂ ಪಾಷಾ ತಮಗೆ ಕಿರಿಕಿರಿಯಾಗುತ್ತಿದೆ ಎಂದು ಪೊಲೀಸರಿಗೆ ಹೇಳಿ ಅದನ್ನು ಅರ್ಧಕ್ಕೆ ನಿಲ್ಲಿಸಿದ್ದರು. ನೀನಾ ಪ್ರಸಾದ್ ಮತ್ತು ತಂಡದ ಕಲಾವಿದರು ಅತ್ಯಂತ ನಿರಾಸೆಯಿಂದ ಕಣ್ಣಲ್ಲಿ ನೀರು ತುಂಬಿಕೊಂಡು ವೇದಿಕೆಯಿಂದ ಇಳಿದಿದ್ದು. ನೀನಾ ಪ್ರಸಾದ್ ಸೋಷಿಯಲ್ ಮೀಡಿಯಾದಲ್ಲಿ ಘಟನೆಯನ್ನು ವಿವರಿಸಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆಗೆ ದೇಶದೆಲ್ಲೆಡೆಯಿಂದ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿದೆ; ಪಾಕಿಸ್ತಾನದ ಪಿಟಿಐ ನಾಯಕ ಆರೋಪ