ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿದೆ; ಪಾಕಿಸ್ತಾನದ ಪಿಟಿಐ ನಾಯಕ ಆರೋಪ
ಆರ್ಥಿಕ ದುರುಪಯೋಗದ ಆರೋಪ ಹೊರಿಸಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವಂತೆ ಪಾಕಿಸ್ತಾನದ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಅವಿಶ್ವಾಸ ಮತವನ್ನು ಮಂಡಿಸಿದ್ದರಿಂದ ಪಾಕಿಸ್ತಾನವು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.
ನವದೆಹಲಿ: ಪಾಕಿಸ್ತಾನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಜೀವಕ್ಕೆ ಅಪಾಯವಿದೆ ಎಂದು ಪಾಕಿಸ್ತಾನದ (Pakistan) ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಪಾಕಿಸ್ತಾನದ ಮಾಧ್ಯಮವೊಂದರ ಜೊತೆ ಮಾತನಾಡಿದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕ ಫೈಸಲ್ ವಾವ್ಡಾ, ಪ್ರಧಾನಿ ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆರ್ಥಿಕ ದುರುಪಯೋಗದ ಆರೋಪ ಹೊರಿಸಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವಂತೆ ಪಾಕಿಸ್ತಾನದ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಅವಿಶ್ವಾಸ ಮತವನ್ನು ಮಂಡಿಸಿದ್ದರಿಂದ ಪಾಕಿಸ್ತಾನವು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಈ ನಡುವೆ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವಾಗ ಬುಲೆಟ್ ಪ್ರೂಫ್ ಶೀಲ್ಡ್ ಬಳಸುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಸೂಚಿಸಲಾಗಿದೆ ಎಂದು ಫೈಸಲ್ ವಾವ್ಡಾ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಇಮ್ರಾನ್ ಖಾನ್ ‘ಸಾವು ಎಲ್ಲರಿಗೂ ಬರುತ್ತದೆ. ನಾನು ಯಾವಾಗ ಸಾಯಬೇಕೆಂದು ನನ್ನ ಹಣೆಯಲ್ಲಿ ಬರೆದಿದೆಯೋ ಆಗ ಸಾಯುತ್ತೇನೆ. ಸರ್ವಶಕ್ತ ಅಲ್ಲಾಹ್ ನಿಗದಿಪಡಿಸಿದ ಸಮಯದಲ್ಲಿ ನಾನು ಇಹಲೋಕ ತ್ಯಜಿಸುವುದಾಗಿ’ ಹೇಳಿದ್ದಾರೆ ಎಂದು ಭಾರತ ಮೂಲದ ಸುದ್ದಿ ಏಜೆನ್ಸಿ ANI ವರದಿ ಮಾಡಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಫೈಸಲ್ ವಾವ್ಡಾ, ಪ್ರಧಾನಿ ಇಮ್ರಾನ್ ಖಾನ್ ಬಹಳ ಧೈರ್ಯಶಾಲಿಯಾಗಿದ್ದು, ರಾಷ್ಟ್ರವನ್ನು ಯಾರ ಮುಂದೆಯೂ ತಲೆಬಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈಗ ಪಾಕಿಸ್ತಾನವು “ಯಾವುದೇ ದೇಶದ ಯುದ್ಧ”ದ ಭಾಗವಾಗುವುದಿಲ್ಲ ಎಂದು ಹೇಳಿದ ವಾವ್ಡಾ ವಿದೇಶಾಂಗ ನೀತಿಯ ಕುರಿತಾದ ಖಾನ್ ಅವರ ನಿಲುವಿನ ಬಗ್ಗೆ ಗಾಳಿ ಸುದ್ದಿ ಹರಿದಾಡುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮ ನೆರೆಯ ರಾಷ್ಟ್ರಗಳ ಮೇಲೆ ದಾಳಿ ಮಾಡಲು ಪಾಕಿಸ್ತಾನದ ವಾಯುನೆಲೆಗಳನ್ನು ಯಾರಿಗೂ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.