ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶದ ನಂತರ ಕಣಿವೆ ರಾಜ್ಯದಲ್ಲಿ ನೈಜ ಪ್ರಜಾಪ್ರಭುತ್ವ ಜಾರಿಯಾಗಿದೆ: ಪ್ರಧಾನಿ ಮೋದಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭವಿಷ್ಯದಲ್ಲಿ ‘ಹೊಸ ಕಾಶ್ಮೀರ ಸ್ವಸ್ಥ ಕಾಶ್ಮೀರ’ವಾಗಲಿದೆ ಎಂದು ಘೋಷಿಸಿದರು.
ಶ್ರೀನಗರ: ಆರ್ಟಿಕಲ್ 370ರ ರದ್ದಿನ ನಂತರ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಿಂದ ಜಮ್ಮು ಕಾಶ್ಮೀರದಲ್ಲಿ ನೈಜ ಪ್ರಜಾಪ್ರಭುತ್ವ ಜಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಯುಷ್ಮಾನ್ ಭಾರತ್ ಪಿಎಂ ಜಯ್ ಸೆಹತ್ ಯೋಜನೆಯನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಜಾರಿಗೊಳಿಸಿದ ಅವರು, ಆಯುಷ್ಮಾನ್ ಭಾರತ್ ಪಿಎಂ ಜಯ್ ಸೆಹತ್ ಯೋಜನೆಯ ಫಲಾನುಭವಿಗಳ ಜೊತೆ ಸಂವಾದ ನಡೆಸಿದರು.
ಜಮ್ಮು ಕಾಶ್ಮೀರದಲ್ಲಿ ಈವರೆಗೆ ಆಡಳಿತ ನಡೆಸಿದ ಪಕ್ಷಗಳನ್ನು ಟೀಕಿಸಿದ ಮೋದಿ, ಕೇವಲ ಹೆಸರಿನ ಆಧಾರದ ಮೇಲೆ ಮತ ಕೇಳುವ ಪರಿಸ್ಥಿತಿ ಬದಲಾಗಿದೆ. ಜನಪ್ರತಿನಿಧಿಗಳು ಮಾಡಿದ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳಬೇಕಿದೆ. ವಿಶೇಷ ಸ್ಥಾನಮಾನ ರದ್ದತಿಯ ನಂತರ ಮೂರು ಹಂತದ ಪ್ರಜಾಪ್ರಭುತ್ವ ಜಾರಿಗೊಳಿಸಿದ್ದೇವೆ. ಪ್ರವಾಸೋದ್ಯಮ, ಆಧುನಿಕ ಸೌಲಭ್ಯಗಳ ಆಸ್ಪತ್ರೆ, ಐಐಟಿ,ಐಐಎಂ ಸೇರಿದಂತೆ ರಾಜ್ಯದಲ್ಲಿ ಬೃಹತ್ ಸುಧಾರಣಾ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲಿದೆ ಎಂದು ಘೋಷಿಸಿದರು.
ಪಶ್ಚಿಮ ಬಂಗಾಳದಂತಹ ಕೆಲ ರಾಜ್ಯಗಳು ಆಯುಷ್ಮಾನ್ ಭಾರತ್ ಯೋಜನೆಯನ್ನು ದೂರವಿಟ್ಟಿವೆ. ಈ ಮೂಲಕ ಜನರಿಗೆ ಮೋಸ ಮಾಡುತ್ತಿವೆ. ಆದರೆ, ಜಮ್ಮು ಕಾಶ್ಮೀರದ ಜನತೆ ಮುಂದಿನ ದಿನಗಳಲ್ಲಿ 5 ಲಕ್ಷದವರೆಗಿನ ಉಚಿತ ಆರೋಗ್ಯ ಸೇವೆ ಪಡೆಯಬಹುದಾಗಿದೆ. ಅಲ್ಲದೇ ಕಣಿವೆ ರಾಜ್ಯದ ಪ್ರತಿ ಮನೆಗೂ ನೀರು ಪೂರೈಕೆ ಮಾಡುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಕಾಶ್ಮೀರದ ಸೇಬು ಬೆಳೆಗಾರರು ಸರ್ಕಾರ ಯೋಜನೆಗಳ ನೇರ ಪ್ರಯೋಜನ ಪಡೆಯಲಿದ್ದಾರೆ. ಶಾಂತಿ ಮತ್ತು ಅಭಿವೃದ್ಧಿಯ ಜಾರಿಯಿಂದ ‘ಹೊಸ ಕಾಶ್ಮೀರ ಸ್ವಸ್ಥ ಕಾಶ್ಮೀರ’ವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದರು.
ವೈಷ್ಣೋದೇವಿ ಮತ್ತು ಬಾಬಾ ಅಮರನಾಥವನ್ನು ಸ್ಮರಿಸಿದ ಅವರು, ಜಮ್ಮು ಕಾಶ್ಮೀರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಟಿ ಬದ್ಧವಾಗಿದೆ. ಸ್ಥಳೀಯ ಆಡಳಿತಗಳ ಚುನಾವಣೆಯಿಂದಲೇ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಇತ್ತೀಚಿನ ಜಿಲ್ಲಾ ಅಭಿವೃದ್ಧಿ ಮಂಡಳಿಗೆ ಆಯ್ಕೆಯಾದ ಜನಪ್ರತಿನಿಧಿಗಳು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ, ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉಪಸ್ಥಿತರಿದ್ದರು.
ಜಮ್ಮು ಕಾಶ್ಮಿರದ 15 ಲಕ್ಷ ನಾಗರಿಕರು ಆಯುಷ್ಮಾನ್ ಭಾರತ್ ಪಿಎಂ ಜಯ್ ಸೆಹತ್ ಯೋಜನೆಯಡಿ 5 ಲಕ್ಷದವರೆಗಿನ ಆರೋಗ್ಯ ಸೇವೆಗಳನ್ನು ಉಚಿತವಾಗಿ ಪಡೆಯಲಿದ್ದಾರೆ.ಕಣಿವೆ ರಾಜ್ಯದ 229 ಸರ್ಕಾರಿ ಆಸ್ಪತ್ರೆ ಮತ್ತು 35 ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಪಿಎಂ ಜಯ್ ಸೆಹತ್ ಯೋಜನೆಯ ಸೇವೆ ಪಡೆಯಬಹುದಾಗಿದ್ದು, ಕೊರೊನಾ ಲಸಿಕೆ ವಿತರಣೆಗೂ ಯೋಜನೆ ರೂಪಿಸಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದರು. ಆರ್ಟಿಕಲ್ 370ರ ರದ್ದುಗೊಳಿಸಿದ ನಂತರ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿಯ ಚುಣಾವನೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಜಮ್ಮು ಕಾಶ್ಮೀರ ಡಿಡಿಸಿ ಚುನಾವಣೆ: ಬಿಜೆಪಿ ಅತಿದೊಡ್ಡ ಪಕ್ಷ! ಅಧಿಕಾರದತ್ತ ಗುಪ್ಕರ್ ಮೈತ್ರಿ, ಕಾಂಗ್ರೆಸ್ ಜಸ್ಟ್ 26
Published On - 2:02 pm, Sat, 26 December 20