ದಂಡದ ಮೊತ್ತವನ್ನು ಇಟ್ಟುಕೊಂಡು, ಉಳಿದ ಹಣವನ್ನು ನನಗೆ ಕೊಟ್ಟುಬಿಡಿ; ಜಿಎಸ್​ಟಿ ಅಧಿಕಾರಿಗಳ ಬಳಿ ಕಾನ್ಪುರ ಕುಬೇರ ಉದ್ಯಮಿಯ ಮನವಿ !

| Updated By: Lakshmi Hegde

Updated on: Dec 30, 2021 | 1:07 PM

ಪಿಯುಷ್​ ಜೈನ್​ ತಾವು ತೆರಿಗೆ ವಂಚನೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಹಾಗೇ, 52 ಕೋಟಿ ರೂಪಾಯಿಗಳಷ್ಟು ದಂಡ ತುಂಬಬೇಕು ಎಂಬುದನ್ನೂ ತಿಳಿಸಿದ್ದಾರೆ ಎಂದು ಜಿಎಸ್​ಟಿ ಗುಪ್ತಚರ  ಪ್ರಧಾನ ನಿರ್ದೇಶನಾಲಯ ಪರ ವಕೀಲ ಅಮರೀಶ್​ ಟಂಡನ್​ ಮಾಹಿತಿ ನೀಡಿದ್ದಾರೆ.

ದಂಡದ ಮೊತ್ತವನ್ನು ಇಟ್ಟುಕೊಂಡು, ಉಳಿದ ಹಣವನ್ನು ನನಗೆ ಕೊಟ್ಟುಬಿಡಿ; ಜಿಎಸ್​ಟಿ ಅಧಿಕಾರಿಗಳ ಬಳಿ ಕಾನ್ಪುರ ಕುಬೇರ ಉದ್ಯಮಿಯ ಮನವಿ !
ಪಿಯುಷ್​ ಜೈನ್​ ಮತ್ತು ಜಪ್ತಿ ಮಾಡಲಾದ ಹಣ
Follow us on

ಕಾನ್ಪುರ: ಇಲ್ಲಿನ ಸುಗಂಧ ದ್ರವ್ಯ ಉದ್ಯಮಿ ಪಿಯುಷ್​ ಜೈನ್​ ಮೇಲೆ ಜಿಎಸ್​ಟಿ ಗುಪ್ತಚರ  ಪ್ರಧಾನ ನಿರ್ದೇಶನಾಲಯ (DGGI)ದ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ದಾಳಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಪಿಯುಷ್​ ಜೈನ್​ಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ಕಂತೆಕಂತೆ ಹಣ ಸಿಕ್ಕಿದೆ. ಕೆಜಿಗಟ್ಟಲೆ ಚಿನ್ನ, ಬೆಳ್ಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟಾರೆ ಹೇಳಬೇಕು ಎಂದರೆ ಈ ಉದ್ಯಮಿಯ ಮನೆಯಿಂದ 196 ಕೋಟಿ ರೂಪಾಯಿ ನಗದು, 11 ಕೋಟಿ ರೂಪಾಯಿ ಮೌಲ್ಯದ 23 ಕೆಜಿಗಳಷ್ಟು ಚಿನ್ನ, 6 ಕೋಟಿ ರೂ.ಮೌಲ್ಯದ 600ಕೆಜಿ ಶ್ರೀಗಂಧದ ಎಣ್ಣೆಯನ್ನು ಜಿಎಸ್​ಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸದ್ಯ ಉದ್ಯಮಿಯನ್ನು ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇ.ಡಿ.ಕೂಡ ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 

ಇತ್ತೀಚಿನ ದಿನಗಳಲ್ಲೇ ಅತ್ಯಂತ ದೊಡ್ಡ ಮಟ್ಟದ ದಾಳಿ ಇದು ಹೇಳಲಾಗಿದೆ. ಇದೀಗ ಉದ್ಯಮಿ ತನ್ನನ್ನು ಬಿಟ್ಟುಬಿಡಿ ಎಂದು ಕೇಳುತ್ತಿದ್ದಾರೆ. ಅಷ್ಟೇ ಅಲ್ಲ, ವಂಚನೆ ಮಾಡಿರುವಷ್ಟು ತೆರಿಗೆ ಮತ್ತು ಅದಕ್ಕೆ ಸಮನಾದ ದಂಡವನ್ನಷ್ಟೇ ನೀವು ಇಟ್ಟುಕೊಂಡು ಉಳಿದ ಹಣವನ್ನು ಕೊಟ್ಟುಬಿಡಿ ಎಂದೂ ಕೇಳಿಕೊಳ್ಳುತ್ತಿದ್ದಾರೆ.  ಈ ಬಗ್ಗೆ ಕೋರ್ಟ್​​ನಲ್ಲಿ ಡಿಜಿಜಿಐ ಪರ ವಿಶೇಷ ಪಬ್ಲಿಕ್​ ಪ್ರಾಸಿಕ್ಯೂಟರ್​ ಆಗಿರುವ ಅಮರೀಶ್​ ಟಂಡನ್​ ತಿಳಿಸಿದ್ದಾರೆ. ಪಿಯುಷ್​ ಜೈನ್​ ತಾವು ತೆರಿಗೆ ವಂಚನೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಹಾಗೇ, 52 ಕೋಟಿ ರೂಪಾಯಿಗಳಷ್ಟು ದಂಡ ತುಂಬಬೇಕು ಎಂಬುದನ್ನೂ ತಿಳಿಸಿದ್ದಾರೆ ಎಂದು ಟಂಡನ್​ ಮಾಹಿತಿ ನೀಡಿದ್ದಾರೆ. ಇನ್ನು ಜೈನ್ ತುಂಬಬೇಕಾದ ದಂಡದ ಮೊತ್ತ 52 ಕೋಟಿ ರೂ. ಇಟ್ಟುಕೊಂಡು, ಉಳಿದ ಹಣವನ್ನು ಅವರಿಗೆ ವಾಪಸ್​ ಮಾಡಬೇಕು ಎಂದು ಡಿಜಿಜಿಐಗೆ ಸೂಚಿಸುವಂತೆ ಕೋರ್ಟ್​ಗೆ ಪಿಯುಷ್​ ಪರ ವಕೀಲರು ಮನವಿ ಮಾಡಿದ್ದಾರೆ.  ಆದರೆ ಟಂಡನ್​ ಇದನ್ನು ನಿರಾಕರಿಸಿದ್ದಾರೆ. ವಶಪಡಿಸಿಕೊಂಡ ಹಣ ತೆರಿಗೆ ವಂಚನೆಯ ಮೊತ್ತವಾಗಿದೆ. ಜೈನ್​ ಹೆಚ್ಚುವರಿಯಾಗಿ 52 ಕೋಟಿ ರೂ.ದಂಡ ಪಾವತಿಸುವುದಾದರೆ ಅದನ್ನೂ ಸ್ವೀಕಾರ ಮಾಡುತ್ತೇವೆ ಎಂದು ಹೇಳಿದ್ದಾರೆ.

ರಾಜಕೀಯ ಸ್ಪರ್ಶ ಪಡೆದುಕೊಂಡ ದಾಳಿ
ಉತ್ತರಪ್ರದೇಶದಲ್ಲಿ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇದೇ ಹೊತ್ತಲ್ಲಿ ನಡೆದ ಈ ದಾಳಿ ಮತ್ತು ಬಹುದೊಡ್ಡ ಮೊತ್ತದ ನಗದು ವಶ ರಾಜಕೀಯ ಸ್ಪರ್ಶ ಪಡೆದುಕೊಂಡಿದೆ. ಈ ಉದ್ಯಮಿ ಪಿಯುಷ್​ ಜೈನ್​ ಸಮಾಜವಾದಿ ಪಕ್ಷದ ಜತೆ ಗುರುತಿಸಿಕೊಂಡವನು ಎಂದು ಹೇಳಿದ್ದಾರೆ. ಇದೀಗ ದಾಳಿಗೆ ಒಳಗಾದ ವ್ಯಕ್ತಿ, ನವೆಂಬರ್​ನಲ್ಲಿ ಸಮಾಜವಾದಿ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದ ವ್ಯಕ್ತಿ ಎಂದು ಆರೋಪಿಸಿದ್ದಾರೆ. ಆದರೆ ಈ ಆರೋಪನ್ನು ಸಮಾಜವಾದಿ ಪಕ್ಷ ಅಲ್ಲಗಳೆದಿದೆ. ನಮಗೂ, ಆತನಿಗೂ ಯಾವುದೇ ಸಂಬಂಧವಿಲ್ಲ ಎಂದು ಎಸ್​ಪಿ ವಕ್ತಾರ ವಿಜಯ್​ ದ್ವಿವೇದಿ ತಿಳಿಸಿದ್ದಾರೆ.

ಇದನ್ನೂ ಓದಿ: Whatsapp Third Tick: ವಾಟ್ಸ್​ಆ್ಯಪ್​ನಲ್ಲಿ ಬರಲಿದೆ ಮೂರನೇ ಬ್ಲೂ ಟಿಕ್?: ಶಾಕ್ ಆಗುವ ಮುನ್ನ ಈ ಸ್ಟೋರಿ ಓದಿ

Published On - 1:05 pm, Thu, 30 December 21