AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೀಪಾವಳಿ ಖರೀದಿ ಸಮಯದಲ್ಲೇ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ: ವ್ಯಾಪಾರಿಗಳಿಗೆ ನಷ್ಟದ ಆತಂಕ, ಸೋನಿಯಾ ಗಾಂಧಿಗೆ ಪತ್ರ

ದೀಪಾವಳಿ ಖರೀದಿ ಭರಾಟೆ ನಡುವೆ ಕಾಂಗ್ರೆಸ್‌ನ ನವೆಂಬರ್ 1ರ ರ್ಯಾಲಿಯಿಂದ ದೆಹಲಿಯ ವ್ಯಾಪಾರಿಗಳು ತೀವ್ರ ಆತಂಕದಲ್ಲಿದ್ದಾರೆ. ರ್ಯಾಲಿಯಿಂದ ಸುಮಾರು 10,000 ಕೋಟಿ ರೂ. ವ್ಯಾಪಾರ ನಷ್ಟವಾಗುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರ ಮಂಡಳಿ ಸೋನಿಯಾ ಗಾಂಧಿಗೆ ಪತ್ರ ಬರೆದು ರ್ಯಾಲಿ ದಿನಾಂಕ ಮುಂದೂಡಲು ಅಥವಾ ಸ್ಥಳ ಬದಲಿಸಲು ಮನವಿ ಮಾಡಿದೆ. ಹಬ್ಬದ ವ್ಯಾಪಾರಕ್ಕೆ ಅಡ್ಡಿಯಾಗಬಾರದೆಂಬುದು ವ್ಯಾಪಾರಿಗಳ ನಿಲುವು.

ದೀಪಾವಳಿ ಖರೀದಿ ಸಮಯದಲ್ಲೇ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ: ವ್ಯಾಪಾರಿಗಳಿಗೆ ನಷ್ಟದ ಆತಂಕ, ಸೋನಿಯಾ ಗಾಂಧಿಗೆ ಪತ್ರ
ಸೋನಿಯಾ ಗಾಂಧಿImage Credit source: PTI
ನಯನಾ ರಾಜೀವ್
|

Updated on: Oct 30, 2026 | 10:17 AM

Share

ನವದೆಹಲಿ,ಅಕ್ಟೋಬರ್ 30: ದೀಪಾವಳಿ ಹಬ್ಬದ ಖರೀದಿ ಭರಾಟೆ ಜೋರಾಗಿರುವ ನಡುವೆಯೇ, ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಕಾಂಗ್ರೆಸ್‌ನ ಬೃಹತ್ ರ್ಯಾಲಿಗೆ ವ್ಯಾಪಾರಿಗಳ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ರ್ಯಾಲಿಯಿಂದ ದೆಹಲಿಯ ಪ್ರಮುಖ 20 ಮಾರುಕಟ್ಟೆಗಳ ವ್ಯಾಪಾರ ವಹಿವಾಟಿಗೆ ಅಡ್ಡಿಯಾಗಬಹುದು. ಇದರಿಂದ ದಿನವೊಂದಕ್ಕೆ ಸುಮಾರು 10,000 ಕೋಟಿ ರೂ.ನಿಂದ 12,000 ಕೋಟಿ ರೂ.ವರೆಗಿನ ವಹಿವಾಟಿಗೆ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ದೆಹಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ಸಿಟಿಐ, ರ್ಯಾಲಿಯ ದಿನಾಂಕವನ್ನು ಮುಂದೂಡುವಂತೆ ಮನವಿ ಮಾಡಿದೆ. ಈ ರ್ಯಾಲಿಯನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ.

10 ಲಕ್ಷ ಜನ, 20 ಸಾವಿರ ವಾಹನಗಳ ನಿರೀಕ್ಷೆ ದೆಹಲಿಯ ಕೇಂದ್ರ ಭಾಗಕ್ಕೆ ಆಗಮಿಸಬಹುದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಮತ್ತು ವಾಹನಗಳು ಒಂದೇ ಪ್ರದೇಶಕ್ಕೆ ಬಂದರೆ ಭಾರಿ ಸಂಚಾರ ದಟ್ಟಣೆ ಉಂಟಾಗಬಹುದು. ಇದರಿಂದ ಮಾರುಕಟ್ಟೆಗಳಿಗೆ ಗ್ರಾಹಕರು ಬರುವುದು ಮಾತ್ರವಲ್ಲದೆ, ಅಂಗಡಿಗಳಿಗೆ ಸರಕು ಸಾಗಣೆ ಮಾಡುವ ವಾಹನಗಳ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ. ಹೀಗಾಗಿ ಹಬ್ಬದ ವ್ಯಾಪಾರಕ್ಕೆ ದೊಡ್ಡ ಹೊಡೆತ ಬೀಳಬಹುದು ಎಂಬುದು ವ್ಯಾಪಾರಿಗಳ ಆತಂಕ.

ದೀಪಾವಳಿ ವ್ಯಾಪಾರಕ್ಕೆ ನಿರ್ಣಾಯಕ ಸಮಯ ನವೆಂಬರ್ 6ರಂದು ಧನ್ತೇರಸ್ ಮತ್ತು ನವೆಂಬರ್ 8ರಂದು ದೀಪಾವಳಿ ಹಬ್ಬ ಆಚರಣೆಯಾಗಲಿರುವ ಹಿನ್ನೆಲೆಯಲ್ಲಿ ದೆಹಲಿಯ ಮಾರುಕಟ್ಟೆಗಳಲ್ಲಿ ಖರೀದಿ ಮತ್ತು ಸರಕು ಸಾಗಣೆ ಚಟುವಟಿಕೆಗಳು ಹೆಚ್ಚಾಗಿವೆ. ಹಬ್ಬಕ್ಕೆ ಬೇಕಾದ ಬಟ್ಟೆ, ಚಿನ್ನಾಭರಣ, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ಸರಕುಗಳ ಖರೀದಿ ನಡೆಯುತ್ತಿದೆ.

ಇದನ್ನೂ ಓದಿ: ಎಸ್​ಐಆರ್​ ವಿರೋಧಿಸಿ ಕಾಂಗ್ರೆಸ್ ನೇತೃತ್ವದ ನವೆಂಬರ್ 1ರ ರ‍್ಯಾಲಿಗೆ ಸಿಜೆಪಿ ಬೆಂಬಲ

ನವೆಂಬರ್ 1 ಮಾರುಕಟ್ಟೆಗಳಲ್ಲಿ ಸರಕುಗಳನ್ನು ತರಲು ಮತ್ತು ಗ್ರಾಹಕರು ಖರೀದಿಗೆ ಬರಲು ಪ್ರಮುಖ ದಿನವಾಗಿರಲಿದೆ. ಇದೇ ದಿನ ರ್ಯಾಲಿ ನಡೆದರೆ ವ್ಯಾಪಾರಕ್ಕೆ ಅಡ್ಡಿಯಾಗಬಹುದು ಎಂದು ಸಿಟಿಐ ಹೇಳಿದೆ. ದೆಹಲಿಯ ಸುಮಾರು 20 ಐತಿಹಾಸಿಕ ಮಾರುಕಟ್ಟೆಗಳಲ್ಲಿ ಪ್ರತಿದಿನ 10,000 ಕೋಟಿಯಿಂದ 12,000 ಕೋಟಿ ರೂ. ಮೌಲ್ಯದ ವ್ಯಾಪಾರ ನಡೆಯುತ್ತದೆ ಎಂದು ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ತಿಳಿಸಿದ್ದಾರೆ.

ಈ ಮಾರುಕಟ್ಟೆಗಳು ದೆಹಲಿಯ ಗ್ರಾಹಕರಿಗೆ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಗೂ ಸರಕುಗಳನ್ನು ಪೂರೈಸುತ್ತವೆ. ಇವುಗಳ ಕಾರ್ಯಾಚರಣೆಗೆ ಕೈಗಾರಿಕಾ ಪ್ರದೇಶಗಳಿಂದ ಬರುವ ಟ್ರಕ್‌ಗಳು ಮತ್ತು ಟೆಂಪೋಗಳು ಪ್ರಮುಖವಾಗಿವೆ. ನರೇಲಾ, ಬವಾನಾ, ಓಖ್ಲಾ, ಮಾಯಾಪುರಿ, ಮುಂಡ್ಕಾ, ಉದ್ಯೋಗ್ ನಗರ ಮತ್ತು ಮಂಗೋಲ್‌ಪುರಿಯಂತಹ ಕೈಗಾರಿಕಾ ಪ್ರದೇಶಗಳಿಂದ ಪ್ರತಿದಿನ ಸುಮಾರು 5,000 ಸರಕು ಸಾಗಣೆ ವಾಹನಗಳು ಮಾರುಕಟ್ಟೆಗಳಿಗೆ ಬರುತ್ತವೆ ಎಂದು ಸಂಘಟನೆ ತಿಳಿಸಿದೆ.

ಅಕ್ಟೋಬರ್ 31ರಿಂದಲೇ ಸಂಚಾರ ನಿರ್ಬಂಧದ ಸಾಧ್ಯತೆ ರ್ಯಾಲಿಗೆ ಮುನ್ನವೇ ಅಕ್ಟೋಬರ್ 31ರಿಂದ ಸಂಚಾರ ನಿರ್ಬಂಧಗಳು ಆರಂಭವಾಗಬಹುದು ಎಂದು ಸಿಟಿಐ ಆತಂಕ ವ್ಯಕ್ತಪಡಿಸಿದೆ. ದೆಹಲಿಯ ಸಿಂಘು, ಟಿಕ್ರಿ, ಘಾಜಿಪುರ ಮತ್ತು ಬದರ್‌ಪುರ ಗಡಿಗಳ ಮೂಲಕ ಬಸ್ಸುಗಳು ಹಾಗೂ ಇತರ ವಾಹನಗಳು ನಗರ ಪ್ರವೇಶಿಸಲು ಆರಂಭಿಸಬಹುದು. ಬಳಿಕ ಬಹದ್ದೂರ್ ಶಾ ಜಾಫರ್ ಮಾರ್ಗ ಮತ್ತು ಜೆಎಲ್‌ಎನ್ ಮಾರ್ಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳ ಸಂಘಟನೆ ಹೇಳಿದೆ. ಇದರಿಂದ ಸರಕು ಸಾಗಣೆದಾರರು ಮಾರುಕಟ್ಟೆಗಳಿಗೆ ವಾಹನ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದೂ ಸಿಟಿಐತಿಳಿಸಿದೆ.

ರ್ಯಾಲಿ ಬೇಡ ಎನ್ನುವುದಲ್ಲ, ದಿನಾಂಕ ಬದಲಿಸಿ ಎಂದ ವ್ಯಾಪಾರಿಗಳು ಸಿಟಿಐ ಅಧ್ಯಕ್ಷ ಬ್ರಿಜೇಶ್ ಗೋಯಲ್ ಅವರು ಕಾಂಗ್ರೆಸ್ ರ್ಯಾಲಿಯನ್ನು ವಿರೋಧಿಸುತ್ತಿಲ್ಲ. ಆದರೆ ಹಬ್ಬದ ಸಂದರ್ಭದಲ್ಲಿ ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ರ್ಯಾಲಿಯನ್ನು ಮುಂದೂಡಲು ಸಾಧ್ಯವಾಗದಿದ್ದರೆ, ನವೆಂಬರ್ 10ರ ನಂತರ ಆಯೋಜಿಸಬೇಕು ಅಥವಾ ರಾಮಲೀಲಾ ಮೈದಾನದ ಬದಲಿಗೆ ಬುರಾರಿ ಮೈದಾನದಲ್ಲಿ ನಡೆಸಬೇಕು ಎಂಬ ಎರಡು ಪರ್ಯಾಯ ಸಲಹೆಗಳನ್ನು ಸಿಟಿಐ ಮುಂದಿಟ್ಟಿದೆ.

ಈ ವಿವಾದದ ಹಿನ್ನೆಲೆ ಏನು? ಕಾಂಗ್ರೆಸ್ ನವೆಂಬರ್ 1ರಂದು ರಾಮಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ನಡೆಸಲು ಉದ್ದೇಶಿಸಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಚುನಾವಣಾ ಅಕ್ರಮಗಳ ಆರೋಪಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆಯನ್ನು ಆಯೋಜಿಸಲಾಗುತ್ತಿದೆ. ಚುನಾವಣಾ ಆಯೋಗದ ವಿರುದ್ಧವೂ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಎಸ್​ಐಆರ್ ಎಂದರೆ ಅಂದರೆ ಮತದಾರರ ಪಟ್ಟಿಯನ್ನು ಮನೆಮನೆಗೆ ತೆರಳಿ ಪರಿಶೀಲಿಸುವ ವಿಶೇಷ ಪ್ರಕ್ರಿಯೆ. ಅರ್ಹ ಮತದಾರರ ಹೆಸರು ಸೇರ್ಪಡೆ, ಮೃತಪಟ್ಟ ಅಥವಾ ಸ್ಥಳಾಂತರಗೊಂಡವರ ಹೆಸರುಗಳ ಪರಿಶೀಲನೆ ಹಾಗೂ ನಕಲಿ ಹೆಸರುಗಳನ್ನು ಗುರುತಿಸುವುದು ಇದರ ಉದ್ದೇಶ.

ಒಟ್ಟಿನಲ್ಲಿ, ಒಂದು ಕಡೆ ಪ್ರಜಾಪ್ರಭುತ್ವದ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಬೃಹತ್ ರ್ಯಾಲಿಗೆ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ದೀಪಾವಳಿ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂದು ದೆಹಲಿಯ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ರ್ಯಾಲಿಯ ದಿನಾಂಕ ಅಥವಾ ಸ್ಥಳ ಬದಲಾವಣೆಯಾಗುತ್ತದೆಯೇ ಎಂಬುದು ಈಗ ಕುತೂಹಲ ಮೂಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More