
ನವದೆಹಲಿ, ನವೆಂಬರ್ 13: ದೆಹಲಿ ಕೆಂಪು ಕೋಟೆ (Red Fort Blast) ಬಳಿಯ ಸ್ಫೋಟ ಮತ್ತು ಫರಿದಾಬಾದ್ ಸ್ಫೋಟಕ ಸಾಗಣೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಪರ್ಕವನ್ನು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು, ಈ ಸ್ಫೋಟದ ಪ್ರಮುಖ ಆರೋಪಿ ಡಾ. ಶಾಹೀನ್ ಸಯೀದ್ ಜೈಶ್ ಕಮಾಂಡರ್ ಮತ್ತು ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಉಮರ್ ಫಾರೂಕ್ನ ಪತ್ನಿ ಅಫಿರಾ ಬೀಬಿ ಜೊತೆಗೆ ಸಂಪರ್ಕದಲ್ಲಿದ್ದಳು ಎಂದು ಪತ್ತೆಹಚ್ಚಿದ್ದಾರೆ.
2019ರಲ್ಲಿ ನಡೆದ ಪುಲ್ವಾಮಾ ದಾಳಿಯ ನಂತರ ನಡೆದ ಎನ್‌ಕೌಂಟರ್‌ನಲ್ಲಿ ಜೈಶ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅವರ ಸೋದರಳಿಯ ಉಮರ್ ಫಾರೂಕ್ ಕೊಲ್ಲಲ್ಪಟ್ಟಿದ್ದ. ಈ ದಾಳಿ ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ನ 40 ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿತ್ತು.
ಆ ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್ ಉಮರ್ನ ಪತ್ನಿ ಅಫಿರಾ ಬೀಬಿ ಜೈಶ್‌ನ ಹೊಸದಾಗಿ ಪ್ರಾರಂಭಿಸಲಾದ ಮಹಿಳಾ ಬ್ರಿಗೇಡ್, ಜಮಾತ್-ಉಲ್-ಮೊಮಿನಾತ್‌ನ ಪ್ರಮುಖ ನಾಯಕಿ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ನಡೆದ ಸ್ಫೋಟಕ್ಕೂ ಒಂದು ವಾರದ ಮೊದಲು, ಅಫಿರಾ ಬ್ರಿಗೇಡ್‌ನ ಸಲಹಾ ಮಂಡಳಿಯಾದ ಶುರಾವನ್ನು ಸೇರಿದ್ದಳು. ಮಸೂದ್ ಅಜರ್ ನ ತಂಗಿ ಸಾದಿಯಾ ಅಜರ್ ಜೊತೆ ಅವಳು ಕೆಲಸ ಮಾಡುತ್ತಿದ್ದಳು. ಇಬ್ಬರೂ ಡಾ. ಶಾಹೀನ್ ಸಯೀದ್ ಜೊತೆ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೆಹಲಿ ಸ್ಫೋಟ ಪ್ರಕರಣ; ಸುಳ್ಳು ಮಾನ್ಯತೆಗಾಗಿ ನ್ಯಾಕ್ನಿಂದ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಶೋಕಾಸ್ ನೋಟಿಸ್
ಡಾ. ಶಾಹೀನ್ ಸಂಪರ್ಕದಲ್ಲಿದ್ದವರಲ್ಲಿ ಜೆಇಎಂ ಮುಖ್ಯಸ್ಥ ಮಸೂದ್‌ನ ಸಹೋದರಿ ಮತ್ತು 1999 ರ ಕಂದಹಾರ್ ಅಪಹರಣದ ಮಾಸ್ಟರ್‌ಮೈಂಡ್ ಯೂಸುಫ್ ಅಜರ್‌ನ ಪತ್ನಿ ಸಾದಿಯಾ ಅಜರ್ ಕೂಡ ಸೇರಿದ್ದಾರೆ. ಮೇ ತಿಂಗಳಲ್ಲಿ ಜೆಇಎಂನ ಬಹವಾಲ್ಪುರ್ ಪ್ರಧಾನ ಕಚೇರಿಯ ಮೇಲೆ ನಡೆದ ಆಪರೇಷನ್ ಸಿಂಧೂರ್ ದಾಳಿಯಲ್ಲಿ ಯೂಸುಫ್ ಕೊಲ್ಲಲ್ಪಟ್ಟಿದ್ದ.
ಫರಿದಾಬಾದ್ ನ ಅಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಹಿರಿಯ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದ ಶಾಹೀನ್ ಸಯೀದ್ ಕಾರಿನಲ್ಲಿ ಅಸಾಲ್ಟ್ ರೈಫಲ್ ಗಳು ಮತ್ತು ಇತರ ಮದ್ದುಗುಂಡುಗಳು ಪತ್ತೆಯಾದ ನಂತರ ಆಕೆಯನ್ನು ಬಂಧಿಸಲಾಯಿತು. ಜಮಾತ್-ಉಲ್-ಮೊಮಿನಾತ್ ನ ಭಾರತ ವಿಭಾಗವನ್ನು ಸ್ಥಾಪಿಸುವ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಮೂಲಭೂತವಾದಿ ಮಹಿಳೆಯರನ್ನು ನೇಮಿಸಿಕೊಳ್ಳುವ ಕೆಲಸವನ್ನು ಶಾಹೀದ್ ಸಯೀದ್ ಗೆ ವಹಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ: Video: ದೆಹಲಿ ಸ್ಫೋಟಕ್ಕೂ ಮುನ್ನ ಮಸೀದಿ ಹೊರಗೆ ಉಗ್ರ ಉಮರ್ ಸುತ್ತಾಡುತ್ತಿರುವ ವಿಡಿಯೋ ವೈರಲ್
ಲಕ್ನೋ ಮೂಲದ ಶಾಹೀನ್ ಸಯೀದ್ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಸೇರುವ ಮೊದಲು ಹಲವಾರು ವೈದ್ಯಕೀಯ ಕಾಲೇಜುಗಳಲ್ಲಿ ಕೆಲಸ ಮಾಡಿದ್ದಳು. ಆಕೆ ಸೆಪ್ಟೆಂಬರ್ 2012ರಿಂದ ಡಿಸೆಂಬರ್ 2013ರವರೆಗೆ ಕಾನ್ಪುರದ ವೈದ್ಯಕೀಯ ಕಾಲೇಜಿನಲ್ಲಿ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥಳಾಗಿದ್ದರು. ಆಕೆಯ ಪಾಸ್ ಪೋರ್ಟ್ ವಿವರಗಳು ಆಕೆ 2016ರಿಂದ 2018ರವರೆಗೆ 2 ವರ್ಷಗಳ ಕಾಲ ಯುಎಇಯಲ್ಲಿ ವಾಸಿಸುತ್ತಿದ್ದಳು ಎಂದು ಬಹಿರಂಗಪಡಿಸಿವೆ.
ಶಾಹೀನ್ ಸಯೀದ್ ಡಾ. ಹಯಾತ್ ಜಾಫರ್ ಎಂಬ ವೈದ್ಯರನ್ನು ವಿವಾಹವಾಗಿದ್ದಳು. ಆದರೆ 2012ರಲ್ಲಿ ಅವರು ಬೇರ್ಪಟ್ಟರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, ಅವರು ಡಾ. ಜಾಫರ್ ಜೊತೆ ಇದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ