ಮಧುರೈನಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನ(Indigo Flight)ದಲ್ಲಿ ಪ್ರಯಾಣಿಸುತ್ತಿದ್ದ 60 ವರ್ಷದ ಪ್ರಯಾಣಿಕರೊಬ್ಬರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ವಿಮಾನವನ್ನು ಇಂದೋರ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನವು ದೇವಿ ಅಹಲ್ಯಾಬಾಯಿ ಹೋಳ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದ ನಂತರ, ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಯಾಣಿಕನನ್ನು ವಿಮಾನ ಸಮೀಪವಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ವೈದ್ಯರು ಆತ ಸಾವನ್ನಪ್ಪಿರುವುದನ್ನು ದೃಢಪಡಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂಡಿಗೋ ಏರ್‌ಲೈನ್ಸ್ 6E-2088 ವಿಮಾನದಲ್ಲಿದ್ದ ಅತುಲ್ ಗುಪ್ತಾ (60) ಪ್ರಯಾಣಿಸುತ್ತಿದ್ದಾಗ ಅವರ ಬಾಯಿಯಿಂದ ರಕ್ತಸ್ರಾವವಾಗುತ್ತಿತ್ತು ಮತ್ತು ಪ್ರಯಾಣದ ಮಧ್ಯದಲ್ಲಿ ಅವರ ಸ್ಥಿತಿ ಹದಗೆಟ್ಟಿತು ಎಂದು ವಿಮಾನ ನಿಲ್ದಾಣ ಪ್ರಭಾರಿ ನಿರ್ದೇಶಕ ಪ್ರಬೋಧ್ ಚಂದ್ರ ಶರ್ಮಾ ಹೇಳಿದ್ದಾರೆ. ವೈದ್ಯರ ಪ್ರಕಾರ, ಅವರು ಈಗಾಗಲೇ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರು ಎಂದು ಶರ್ಮಾ ಹೇಳಿದ್ದಾರೆ.
ವಿಮಾನವು ತನ್ನ ಸಂಜೆ 6:40 ಕ್ಕೆ ದೆಹಲಿಗೆ ಯಾನ ಮುಂದುವರಿಸಿತು. ಮೃತರು ನೋಯ್ಡಾ ನಿವಾಸಿ , ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಏರೋಡ್ರೋಮ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಾಹಿತಿ ನೀಡಿದ್ದಾರೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ