IndiGo: ಮಂಗಳೂರು- ಮುಂಬೈ ಮಾರ್ಗದಲ್ಲಿ ಹೊಸ ಇಂಡಿಗೋ ವಿಮಾನ ಸಂಚಾರ ಆರಂಭ
ಪ್ರಸ್ತುತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಕ್ಕೆ 108 ದೇಶೀಯ ವಿಮಾನಗಳು ಸಂಚರಿಸಲಿವೆ. ಇಂಡಿಗೋದ 85 ವಿಮಾನಗಳು ಸಂಚರಿಸಲಿದೆ.
ಮಂಗಳೂರು: ಮುಂಬೈ- ಮಂಗಳೂರು- ಮುಂಬೈ ಮಾರ್ಗದಲ್ಲಿ ಇಂಡಿಗೋ (IndiGo Flight) ಏರ್ಲೈನ್ಸ್ನಿಂದ ಹೊಸ ವಿಮಾನ ಸಂಚಾರ ಆರಂಭಿಸಲಾಗಿದೆ. ಜೂನ್ 19 (ನಿನ್ನೆ)ರಿಂದ ಈ ಹೊಸ ಮಾರ್ಗದ ವಿಮಾನ ಸಂಚಾರ ಶುರುವಾಗಿದ್ದು, ಎರಡು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು. ಇನ್ನುಮುಂದೆ ಪ್ರತಿದಿನ ಈ ಇಂಡಿಗೋ ವಿಮಾನ ಸಂಚರಿಸಲಿದೆ.
ವಿಮಾನ ಸಂಖ್ಯೆ 6ಇ-5236 ಮುಂಬೈಯಿಂದ ಬೆಳಗ್ಗೆ 8.50ಕ್ಕೆ ಹೊರಟು 10.20ಕ್ಕೆ ಮಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ. 6ಇ -5237 ವಿಮಾನ ಬೆಳಗ್ಗೆ 11 ಗಂಟೆಗೆ ಮಂಗಳೂರಿನಿಂದ ಟೇಕಾಫ್ ಆಗಿ ಮಧ್ಯಾಹ್ನ 12.40ಕ್ಕೆ ಮುಂಬೈನಲ್ಲಿ ಲ್ಯಾಂಡ್ ಆಗಲಿದೆ. ಈ ಹೊಸ ಸೇವೆಗೆ ಇಂಡಿಗೋ ಏರ್‌ಬಸ್ ಎ-320 ಮಾದರಿಯ ವಿಮಾನ ಬಳಸಲಿದೆ.
ಹೊಸ ವಿಮಾನ ಮಾರ್ಗವನ್ನು ಆರಂಭಿಸುವುದರ ಜೊತೆಗೆ ಇಂಡಿಗೋ ಸಂಸ್ಥೆ ಮಧ್ಯಾಹ್ನದ ಬಳಿಕ ಮುಂಬೈ- ಮಂಗಳೂರು -ಮುಂಬೈ ನಡುವೆ ಸಂಚರಿಸುತ್ತಿದ್ದ 6ಇ -6348/6ಇ 6349 ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಿದೆ. ಶುಕ್ರವಾರದಿಂದ ವಿಮಾನದ ಪ್ರಾಯೋಗಿಕ ಕಾರ್ಯಾಚರಣೆ ಆರಂಭವಾಗಿತ್ತು. ಜೂನ್ 17ರಂದು ಪ್ರಾಯೋಗಿಕ ವಿಮಾನದಲ್ಲಿ 88 ಪ್ರಯಾಣಿಕರು ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸಿದ್ದರು. 99 ಪ್ರಯಾಣಿಕರು ಮಂಗಳೂರಿನಿಂದ ಮುಂಬೈಗೆ ಈ ವಿಮಾನದಲ್ಲಿ ಸಂಚರಿಸಿದ್ದರು. ಭಾನುವಾರದಿಂದ ಈ ವಿಮಾನದ ಹಾರಾಟವನ್ನು ಅಧಿಕೃತವಾಗಿ ಆರಂಭಿಸಲಾಗಿದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಸಿಹಿ ಸುದ್ದಿ; ಮಂಗಳೂರು-ಹುಬ್ಬಳ್ಳಿ ಮಧ್ಯೆ ಇಂಡಿಗೋ ವಿಮಾನ ಸಂಚಾರ ಆರಂಭ
ಭಾನುವಾರ ವಿಮಾನದ ಮೊದಲ ಕಾರ್ಯಾಚರಣೆಯಲ್ಲಿ 55 ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದರು. ಒಂದು ಶಿಶು ಸೇರಿದಂತೆ 143 ಪ್ರಯಾಣಿಕರು ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಸಿದ್ದರು. ಪ್ರಸ್ತುತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಕ್ಕೆ 108 ದೇಶೀಯ ವಿಮಾನಗಳು ಸಂಚರಿಸಲಿವೆ. ಇಂಡಿಗೋದ 85 ವಿಮಾನಗಳು ಸಂಚರಿಸಲಿದೆ. ಮಂಗಳೂರಿನಿಂದ ಬೆಂಗಳೂರಿಗೆ 28, ಪುಣೆ ಮೂಲಕ ದೆಹಲಿಗೆ 4, ಚೆನ್ನೈಗೆ 7, ಮುಂಬೈಗೆ 21, ಹೈದರಾಬಾದ್ಗೆ 14, ಬೆಂಗಳೂರು ಮೂಲಕ ಕೋಲ್ಕತ್ತಾಗೆ 7, ಹುಬ್ಬಳ್ಳಿಗೆ 4 ವಿಮಾನಗಳು ಸಂಚರಿಸುತ್ತಿವೆ.
ಏರ್ ಇಂಡಿಯಾ ವಿಮಾನ ಮುಂಬೈಗೆ 7, ಸ್ಪೈಸ್ ಜೆಟ್ ಬೆಂಗಳೂರಿಗೆ 6, ಗೋ ಫಸ್ಟ್ ಮುಂಬೈಗೆ 7 ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ 3 ವಿಮಾನ ಮುಂಬೈಗೆ ಸಂಚರಿಸುತ್ತಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ