Delhi Cabinet reshuffle: ದೆಹಲಿ ಸಚಿವ ಸಂಪುಟದಲ್ಲಿ ಅತಿಶಿಗೆ ಹೆಚ್ಚುವರಿ ಮೂರು ಖಾತೆಗಳ ಹೊಣೆ

|

Updated on: Jun 30, 2023 | 12:47 PM

ಇದೀಗ ಅತಿಶಿ ಅವರು ವಿದ್ಯುತ್, ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ಭಾಷೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ, ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ಮತ್ತು ಸಾರ್ವಜನಿಕ ಸಂಪರ್ಕಗಳ ಖಾತೆಗಳ ಹೊಣೆ ಹೊಂದಿದ್ದು, ಅವರು ಜವಾಬ್ದಾರಿ ಹೊಂದಿರುವ ಖಾತೆಗಳ ಸಂಖ್ಯೆಯನ್ನು 10 ಆಗಲಿದೆ.

Delhi Cabinet reshuffle: ದೆಹಲಿ ಸಚಿವ ಸಂಪುಟದಲ್ಲಿ ಅತಿಶಿಗೆ ಹೆಚ್ಚುವರಿ ಮೂರು ಖಾತೆಗಳ ಹೊಣೆ
ಅತಿಶಿ
Follow us on

ದೆಹಲಿ: ದೆಹಲಿ ಸಚಿವ ಸಂಪುಟದಲ್ಲಿ ಆಮ್ ಆದ್ಮಿ ಪಕ್ಷದ (AAP) ನಾಯಕಿ ಅತಿಶಿ (Atishi) ಅವರಿಗೆ ಹಣಕಾಸು, ಯೋಜನೆ ಮತ್ತು ರೆವೆನ್ಯೂ ಇಲಾಖೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ನೀಡಲಾಗುವುದು. ಮೂರು ಇಲಾಖೆಗಳು ಈ ಹಿಂದೆ ಕೈಲಾಶ್ ಗೆಹ್ಲೋಟ್ (Kailash Gehlot) ಬಳಿ ಇದ್ದವು. ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರ ರಾಜೀನಾಮೆಯ ನಂತರ ಸೌರಭ್ ಭಾರದ್ವಾಜ್ (Saurabh Bharadwaj)ಜೊತೆಗೆ ಅತಿಶಿ ಅವರನ್ನು ಮಾರ್ಚ್‌ನಲ್ಲಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಅಬಕಾರಿ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಬಂಧಿತರಾಗಿದ್ದು, ಅಕ್ರಮ ಹಣ ವ್ಯವಹಾರದಲ್ಲಿ ಪ್ರಕರಣ ಕಳೆದ ವರ್ಷ ಜೈನ್ ಬಂಧಿತರಾಗಿದ್ದರು.

ಇದೀಗ ಅತಿಶಿ ಅವರು ವಿದ್ಯುತ್, ಶಿಕ್ಷಣ, ಕಲೆ, ಸಂಸ್ಕೃತಿ ಮತ್ತು ಭಾಷೆ, ಪ್ರವಾಸೋದ್ಯಮ, ಉನ್ನತ ಶಿಕ್ಷಣ, ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ಮತ್ತು ಸಾರ್ವಜನಿಕ ಸಂಪರ್ಕಗಳ ಖಾತೆಗಳ ಹೊಣೆ ಹೊಂದಿದ್ದು, ಖಾತೆಗಳ ಸಂಖ್ಯೆಯನ್ನು 10 ಆಗಲಿದೆ. ಈ ಖಾತೆಗಳ ಸೇರ್ಪಡೆಯೊಂದಿಗೆ, ಕೇವಲ ನಾಲ್ಕು ತಿಂಗಳ ಹಿಂದೆ ಸೇರ್ಪಡೆಗೊಂಡ ಅತಿಶಿ ದೆಹಲಿ ಸಚಿವ ಸಂಪುಟದಲ್ಲಿ 2 ನೇ ಸ್ಥಾನಕ್ಕೆ ಏರಿದ್ದಾರೆ.

ಶಿಕ್ಷಣ ಸುಧಾರಣೆಗಳಲ್ಲಿ ಸಿಸೋಡಿಯಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅತಿಶಿ ಅವರು ಮುಖ್ಯಮಂತ್ರಿ ಸೇರಿದಂತೆ ಏಳು ಸಚಿವರ ದೆಹಲಿ ಸಂಪುಟದಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ. ಅವರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಪ್ರವಾಸೋದ್ಯಮ, ಕಲೆ, ಭಾಷೆ ಮತ್ತು ಸಂಸ್ಕೃತಿ, ಪಿಡಬ್ಲ್ಯುಡಿ ಮತ್ತು ವಿದ್ಯುತ್ ಹೀಗೆ ಆರು ಸಚಿವಾಲಯಗಳ ಉಸ್ತುವಾರಿ ನೀಡಲಾಗಿತ್ತು. ಈ ಹಿಂದೆ ಜೂನ್‌ನಲ್ಲಿ ಅವರಿಗೆ ಸಾರ್ವಜನಿಕ ಸಂಪರ್ಕದ ಉಸ್ತುವಾರಿಯನ್ನು ನೀಡಲಾಗಿತ್ತು.

ಅಂದ ಹಾಗೆ ಎಎಪಿಯ ಕಲ್ಕಾಜಿ ಶಾಸಕಿ ಅತಿಶಿ ಸಂಪುಟ ಪುನಾರಚನೆಯಲ್ಲಿ ಹೆಚ್ಚು ಲಾಭ ಗಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಆಡಳಿತಾತ್ಮಕ ಸೇವೆಗಳ ನಿಯಂತ್ರಣದ ಕುರಿತು ಕೇಂದ್ರದ ಮೇ 19 ರ ಸುಗ್ರೀವಾಜ್ಞೆಗೆ ವಿರುದ್ಧವಾಗಿ ವಿರೋಧ ಪಕ್ಷಗಳ ಬೆಂಬಲವನ್ನು ಕೋರುವ ಕಾರ್ಯಾಚರಣೆಯನ್ನು ಕೇಜ್ರಿವಾಲ್ ಪ್ರಾರಂಭಿಸಿದಾಗ ಅವರೊಂದಿಗೆ ಪ್ರಯಾಣಿಸಿದ ಏಕೈಕ ಕ್ಯಾಬಿನೆಟ್ ಸಚಿವೆಯಾಗಿದ್ದಾರೆ ಅತಿಶಿ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಸಂಸದರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಸೇರಿದಂತೆ ಇತರರು ಕೂಡಾ ಕೇಜ್ರಿವಾಲ್ ಜತೆಗಿದ್ದರು. ರಾಜಧಾನಿಯಲ್ಲಿ ಮೂರು ಶಾಲೆಗಳು ಮತ್ತು ಇವಿಎಂ ಚಾರ್ಜಿಂಗ್ ಸ್ಟೇಷನ್‌ಗಳನ್ನು ಉದ್ಘಾಟಿಸಿದಾಗಲೂ ಅತಿಶಿ, ದೆಹಲಿ ಸಿಎಂ ಜತೆ ವೇದಿಕೆ ಹಂಚಿಕೊಂಡಿದ್ದರು.

ಏತನ್ಮಧ್ಯೆ, ದೆಹಲಿ ಸಚಿವರಾದ ಗೋಪಾಲ್ ರಾಯ್ ಹೊಣೆ ವಹಿಸಿರುವ ಖಾತೆಗಳನ್ನು ಕಡಿಮೆ ಮಾಡಲಾಗಿದೆ. ಅವರು ಈಗ ಸಾಮಾನ್ಯ ಆಡಳಿತ ಇಲಾಖೆ, ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಉಸ್ತುವಾರಿ ವಹಿಸಿದ್ದಾರೆ.

ಕೇಜ್ರಿವಾಲ್ ಸಂಪುಟದಲ್ಲಿರುವ ಮುಸ್ಲಿಂ ಸಚಿವ ಇಮ್ರಾನ್ ಹುಸೇನ್ ಅವರು ಆಹಾರ ಮತ್ತು ಸರಬರಾಜು, ಚುನಾವಣೆ ಖಾತೆಗಳನ್ನು ಹೊಂದಿದ್ದಾರೆ.  ಕಳೆದ ವರ್ಷ ಅಕ್ಟೋಬರ್‌ನಲ್ಲಿ ರಾಜೇಂದ್ರ ಪಾಲ್ ಗೌತಮ್ ರಾಜೀನಾಮೆ ನೀಡಿದ ನಂತರ ಸಚಿವ ಸಂಪುಟದಲ್ಲಿರುವ ದಲಿತ ಮುಖ ರಾಜ್ ಕುಮಾರ್ ಆನಂದ್ ಅವರಿಗೆ ಗುರುದ್ವಾರ ಚುನಾವಣೆ, ಎಸ್‌ಸಿ ಮತ್ತು ಎಸ್‌ಟಿ, ಸಮಾಜ ಕಲ್ಯಾಣ, ಸಹಕಾರಿ, ಭೂಮಿ ಮತ್ತು ಕಟ್ಟಡ, ಕಾರ್ಮಿಕ ಮತ್ತು ಉದ್ಯೋಗ ಉಸ್ತುವಾರಿ ನೀಡಲಾಗಿದೆ.ಆನಂದ್ ಪಟೇಲ್ ನಗರದ ಶಾಸಕರಾಗಿದ್ದಾರೆ.

ಇದನ್ನೂ ಓದಿ: Narendra Modi: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ, ಪ್ರಯಾಣಿಕರೊಂದಿಗೆ ಅದ್ಭುತ ಕ್ಷಣಗಳನ್ನು ಕಳೆದ ಮೋದಿ

ಗುರುವಾರ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಗಲಾಟೆ ಎದ್ದಿದ್ದು, ಅದಕ್ಕೆ ಸಂಬಂಧಿಸಿದ ಕಡತ ನಾಲ್ಕು ದಿನಗಳಿಂದ ಲೆಫ್ಟಿನೆಂಟ್ ಗವರ್ನರ್ ಬಳಿ ಇದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಆರೋಪವನ್ನು ಅವರ ಕಚೇರಿ ನಿರಾಕರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Fri, 30 June 23