Delhi Car Blast
ನವದೆಹಲಿ, ನವೆಂಬರ್ 10: ದೆಹಲಿಯ ಕೆಂಪುಕೋಟೆಯ (Red Fort) ಬಳಿ ಇರುವ ಮೆಟ್ರೋ ಸ್ಟೇಷನ್ ಗೇಟ್ ಬಳಿ ಟ್ರಾಫಿಕ್ ಸಿಗ್ನಲ್ನಲ್ಲಿ ಇಂದು ಸಂಜೆ ಕಾರು ಸ್ಫೋಟಗೊಂಡಿದೆ. ಈ ಕಾರು ಸ್ಫೋಟವಾದಾಗ (Delhi Car Blast) ಕಾರಿನಲ್ಲೂ ಜನರಿದ್ದರು. ಕಾರೊಳಗಿದ್ದ ಜನರು ಸೇರಿದಂತೆ ಒಟ್ಟು 11 ಜನರು ಮೃತಪಟ್ಟಿದ್ದಾರೆ. 4 ಕಾರುಗಳು ಸುಟ್ಟು ಕರಕಲಾಗಿವೆ. 16ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದ ಹಿಂದೆ ಉಗ್ರರ ಕೈವಾಡದ ಶಂಕೆಯೂ ಎದುರಾಗಿದೆ. ಹಾಗಾದರೆ, ಇಂದು ಸಂಜೆ ಕಾರು ಸ್ಫೋಟಗೊಂಡಿದ್ದು ಹೇಗೆ? ಅಲ್ಲಿ ನಿಜವಾಗಿಯೂ ನಡೆದಿದ್ದು ಏನು? ಎಂಬುದರ ಪೂರ್ತಿ ವಿವರ ಇಲ್ಲಿದೆ.
- ಇಂದು ಸಂಜೆ 6.55ಕ್ಕೆ i20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಇದರ ಪರಿಣಾಮದಿಂದ ಆ ಕಾರಿನ ಹತ್ತಿರದ ಹಲವಾರು ವಾಹನಗಳಿಗೆ ಹಾನಿಯಾಗಿದೆ.
- ಕಾರು ಸ್ಫೋಟವಾಗಿ 11 ಜನರು ಮೃತಪಟ್ಟಿದ್ದಾರೆ. 16ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ರಸ್ತೆಯಲ್ಲೆಲ್ಲ ಮೃತದೇಹದ ತುಂಡುಗಳು ಬಿದ್ದಿರುವುದು ಈ ಸ್ಫೋಟದ ಭೀಕರತೆಯನ್ನು ತೆರೆದಿಡುತ್ತಿದೆ.
- ಈಗಾಗಲೇ ರಾಷ್ಟ್ರೀಯ ಗುಪ್ತಚರ ಸಂಸ್ಥೆ (ಎನ್‌ಐಎ) ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ತಂಡಗಳು ಸ್ಫೋ ನಡೆದ ಸ್ಥಳಕ್ಕೆ ಆಗಮಿಸಿವೆ.
- ಈ ಘಟನೆಯ ನಂತರ, ದೆಹಲಿ-ಎನ್‌ಸಿಆರ್‌ನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ಕೆಂಪು ಕೋಟೆ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
- ಅಮಿತ್ ಶಾ ದೆಹಲಿ ಪೊಲೀಸರು, ಗುಪ್ತಚರ ಇಲಾಖೆಯ ಜೊತೆ ಮಾತನಾಡಿದರು. ಕೆಂಪು ಕೋಟೆ ಬಳಿ ಸ್ಫೋಟದ ಬಗ್ಗೆ ಪ್ರಧಾನಿ ಮೋದಿಗೆ ಅಮಿತ್ ಶಾ ಮಾಹಿತಿ ನೀಡಿದ್ದಾರೆ.
- ಸರ್ಕಾರವು ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ ಮತ್ತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
- ಇಂದು ಸಂಜೆ 6.55ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ಐ20 ಕಾರು ರೆಡ್ ಸಿಗ್ನಲ್ ಬಳಿ ನಿಂತಿತು. ಆ ಕಾರಿನಲ್ಲಿಯೇ ಸ್ಫೋಟ ಸಂಭವಿಸಿದೆ. ಕಾರಿನೊಳಗೆ ಸ್ಫೋಟ ಸಂಭವಿಸಿದಾಗಲೂ ಅದರಲ್ಲಿ ಕೆಲವು ಇತರ ಪ್ರಯಾಣಿಕರಿದ್ದರು. ಕಾರಿನ ಹಿಂಭಾಗದಲ್ಲಿ ಸ್ಫೋಟ ಸಂಭವಿಸಿದೆ. ಈ ವೇಳೆ ಕಾರಿನಲ್ಲಿದ್ದವರು, ಪಾದಚಾರಿಗಳು ಸಾವನ್ನಪ್ಪಿದ್ದಾರೆ.
- ಸ್ಫೋಟದಿಂದಾಗಿ ಹತ್ತಿರದ ವಾಹನಗಳಿಗೂ ಬೆಂಕಿ ಹೊತ್ತಿಕೊಂಡಿವೆ. ತನಿಖೆಗೆ ಸಹಾಯ ಮಾಡಲು ರಾಷ್ಟ್ರೀಯ ಭದ್ರತಾ ಪಡೆ (NSG), ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ವಿಧಿವಿಜ್ಞಾನ ವಿಭಾಗದ ತಂಡಗಳನ್ನು ನಿಯೋಜಿಸಲಾಗಿದೆ.
- ಇಂದು ಸಂಜೆ ಸ್ಫೋಟ ಸಂಭವಿಸಿದ ಕಾರನ್ನು HR26 ಅಡಿಯಲ್ಲಿ ನೋಂದಾಯಿಸಲಾಗಿದೆ. ಇದನ್ನು ನದೀಮ್ ಖಾನ್ ಎಂದು ಗುರುತಿಸಲಾದ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
- ಅಮೋನಿಯಂ ನೈಟ್ರೇಟ್ ಬಳಸಿ ಸ್ಫೋಟಿಸಿರುವ ಶಂಕೆ ವ್ಯಕ್ತವಾಗಿದೆ. ಸ್ಫೋಟಕ್ಕೆ ನಟ್ಟು, ಬೋಲ್ಟ್ ಬಳಸಿಲ್ಲ. i20 ಕಾರಿನ ಹಿಂಭಾಗದಲ್ಲಿ ಅಮೋನಿಯಂ ನೈಟ್ರೇಟ್ ಇಟ್ಟು ಕೃತ್ಯ ಎಸಗಿರುವ ಸಾಧ್ಯತೆ ಹೆಚ್ಚಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ