Delhi Chalo 19ನೇ ದಿನ: ಪಟ್ಟು ಬಿಡದ ರೈತರು, ಹೆಜ್ಜೆ ಹಿಂದಿಡದ ಕೇಂದ್ರ: ಉಪವಾಸ ಸತ್ಯಾಗ್ರಹ ಮುಕ್ತಾಯ
ಚಳವಳಿ ಪ್ರಾರಂಭವಾಗಿ 19 ದಿನಗಳಾದರೂ ಬೇಡಿಕೆ ಒಪ್ಪದ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ರೈತ ಒಕ್ಕೂಟಗಳ ಮುಖಂಡರು ಒಂದು ದಿನದ ಉಪವಾಸ ಸತ್ಯಾಗ್ರಹ ಆಯೋಜಿಸಿದ್ದರು.
ದೆಹಲಿ: ಪಂಜಾಬ್ ರೈತರ ಒಂದು ದಿನದ ಉಪವಾಸ ಸತ್ಯಾಗ್ರಹ ಮುಕ್ತಾಯಗೊಂಡಿದೆ. ಚಳವಳಿ ಪ್ರಾರಂಭವಾಗಿ 19 ದಿನಗಳಾದರೂ ಬೇಡಿಕೆ ಒಪ್ಪದ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ದೆಹಲಿಯ ವಿವಿಧ ಗಡಿಗಳಲ್ಲಿ ರೈತ ಒಕ್ಕೂಟಗಳ ಮುಖಂಡರು ಒಂದು ದಿನದ ಉಪವಾಸ ಸತ್ಯಾಗ್ರಹ ಆಯೋಜಿಸಿದ್ದರು.
ಅಲ್ಲದೇ ಪಂಜಾಬ್ ರೈತರ ಗುಂಪೊಂದು ಕೇಂದ್ರ ಸರ್ಕಾರದ ತಿದ್ದುಪಡಿ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ ಎಂಬ ಮಾಹಿತಿ ಬಂದಿದೆ. ಆದರೆ, ಈ ಕುರಿತು ಸ್ಪಷ್ಟ ಮಾಹಿತ ಇನ್ನಷ್ಟೇ ಬರಬೇಕಿದೆ. ಇತ್ತ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈತರ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೆಹಲಿಯತ್ತ ತೆರಳುತ್ತಿದ್ದ ಪಂಜಾಬ್ ರೈತರ ಟ್ರ್ಯಾಕ್ಟರ್ಗಳನ್ನು ಪೊಲೀಸರು ಅಡ್ಡಗಟ್ಟಿದರು. ಟ್ರ್ಯಾಕ್ಟರ್ ಏರಿ ಚಾವಿಯನ್ನು ತೆಗೆದುಕೊಳ್ಳುವ ಮೂಲಕ ಪೊಲೀಸರು ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸುವುದನ್ನು ತಡೆದರು. 20 ರೈತರನ್ನು ವಶಕ್ಕೆ ಪಡೆದ ಪೊಲೀಸರು ನಂತರ, ರೈತರ ವಿರೋಧ ಹೆಚ್ಚಿದಂತೆ ಅವರನ್ನು ಬಿಡುಗಡೆಗೊಳಿಸಿದರು.
ಹರಿಯಾಣ ಸಂಸದರು ಶಾಸಕರಿಂದ ಕೇಂದ್ರ ಕೃಷಿ ಸಚಿವರ ಭೇಟಿ ಕೇಂದ್ರ ನೀರಾವರಿ ಖಾತೆಯ ರಾಜ್ಯ ಸಚಿವ ರತ್ನಾಲಾಲ್ ಕತಾರಿಯಾ, ಸಂಸದ ಧರಮ್ವೀರ್ ಸಿಂಗ್ ಮತ್ತು ನಯಾಬ್ ಸಿಂಗ್ ಸೈನಿ ಮತ್ತು ಹರಿಯಾಣದ ಶಾಸಕರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ ನೂತನ ಕೃಷಿ ಕಾಯ್ದೆಗಳ ಕುರಿತು ಚರ್ಚಿಸಿದ್ದಾರೆ. ಜೊತೆಗೆ, ಉತ್ತರ ಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಬಿಹಾರ ಮತ್ತು ಹರಿಯಾಣದ ವಿವಿಧ ರೈತ ಒಕ್ಕೂಟಗಳು ದೆಹಲಿ ಚಲೋಗೆ ಬೆಂಬಲ ಘೋಷಿಸಿವೆ.
ನಾನು ಹರಿಯಾಣ ರಾಜ್ಯ ಸರ್ಕಾರದ ಭಾಗವಾಗಿರುವರೆಗೂ ರಾಜ್ಯದ ರೈತರು ಕನಿಷ್ಠ ಬೆಂಬಲ ಬೆಲೆಯಿಂದ ವಂಚಿತರಾಗಲು ಬಿಡುವುದಿಲ್ಲ ಎಂದು ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ ಚೌಟಾಲಾ ಇತ್ತೀಚಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಹರಿಯಾಣದ ಜನಪ್ರತಿನಿಧಿಗಳು ನರೇಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿದ್ದು ಮಹತ್ವ ಪಡೆದಿದೆ. ದುಷ್ಯಂತ್ ಚೌಟಾಲಾ ಮೇಲೆ ಪ್ರತಿಪಕ್ಷ ಮತ್ತು ಹರಿಯಾಣದ ರೈತ ಸಂಘಟನೆಗಳು ಪ್ರಬಲ ಒತ್ತಡ ಹೇರುತ್ತಿವೆ.
ನೂತನ ಕೃಷಿ ಕಾಯ್ದೆಗಳು ರೈತರನ್ನು ಅಭಿವೃದ್ಧಿಯ ಹಾದಿಯಲ್ಲಿ ಒಯ್ಯಲಿವೆ. ಪಂಜಾಬ್ ರೈತರ ಜೊತೆ ಮುಕ್ತವಾಗಿ ಮಾತನಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೂತನ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ, ಗೃಹ ಸಚಿವ ಅಮಿತ್ ಶಾ ನಿವಾಸಕ್ಕೆ ನರೇಂದ್ರ ಸಿಂಗ್ ತೋಮರ್ ಭೇಟಿ ನೀಡಿ ಚರ್ಚಿಸಿದ್ದಾರೆ.