ದೆಹಲಿ ಫೆಬ್ರುವರಿ 21: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ರೈತರ ಸಮಸ್ಯೆಗಳನ್ನು ಚರ್ಚಿಸಬೇಕು ಇಲ್ಲವೇ ರೈತರು ಶಾಂತಿಯುತವಾಗಿ ಪ್ರತಿಭಟನೆ (Farmer’s protest) ನಡೆಸಲು ದೆಹಲಿಗೆ ತೆರಳಲು ಅವಕಾಶ ನೀಡಬೇಕು ಎಂದು ಪಂಜಾಬ್ ಕಿಸಾನ್ ಮಜ್ದೂರ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಪಂಧೇರ್ (Sarwan Singh Pandher)ಒತ್ತಾಯಿಸಿದ್ದಾರೆ. ಇದು ಪ್ರಧಾನಿಯ ಜವಾಬ್ದಾರಿ ಎಂದು ಹೇಳುತ್ತಿದ್ದೇವೆ. ಅವರನ್ನು ದೇಶದ ಪ್ರಧಾನಿ ಮಾಡಲು ನಾವೂ ಮತ ಹಾಕಿದ್ದೇವೆ. ಈ ದೇಶ ಎಲ್ಲರಿಗೂ ಸೇರಿದ್ದು, ಪ್ರಧಾನಿ ಎಲ್ಲರಿಗೂ ಸೇರಿದ್ದು, ಅವರು ಮುಂದೆ ಬಂದು ಪರಿಸ್ಥಿತಿಯನ್ನು ನಿಭಾಯಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬುಧವಾರ ಬೆಳಗ್ಗೆ ಶಂಭು ಗಡಿಯಲ್ಲಿ ಇತರ ರೈತ ಮುಖಂಡರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸರ್ವಾನ್ ಸಿಂಗ್ ಪಂಧೇರ್ ಹೇಳಿದರು.
“ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ, ಸಭೆಗಳಲ್ಲಿ ಭಾಗವಹಿಸಿದ್ದೇವೆ. ಪ್ರತಿ ಅಂಶವನ್ನು ಚರ್ಚಿಸಲಾಗಿದೆ. ಈಗ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಪ್ರಧಾನ ಮಂತ್ರಿ ಮುಂದೆ ಬಂದು ನಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಕು. 1.5-2 ಲಕ್ಷ ಕೋಟಿ ರೂ. ತುಂಬಾ ದೊಡ್ಡ ಮೊತ್ತವಲ್ಲ. ಸುಮಾರು 60 ರಷ್ಟು ರೈತರು ಇದರ ಮೇಲೆ ಅವಲಂಬಿತರಾಗಿದ್ದಾರೆ, ಕೃಷಿ ಕಾರ್ಮಿಕರನ್ನು ಸೇರಿಸಿದರೆ, ಇದು ದೇಶದ ಜನಸಂಖ್ಯೆಯ 80 ಪ್ರತಿಶತದಷ್ಟಿದೆ ಎಂದು ಅವರು ಹೇಳಿದ್ದಾರೆ.
#WATCH | On the ‘Delhi Chalo’ march today, farmer leader Sarwan Singh Pandher says, “We tried our best from our side. We attended the meetings, every point was discussed and now the decision has to be taken by the central government. We will remain peaceful…The Prime Minister… pic.twitter.com/J2PXoUIskd
— ANI (@ANI) February 21, 2024
ಪ್ರಧಾನಿ ಮಧ್ಯಸ್ಥಿಕೆ ವಹಿಸಿ ರೈತರಿಗೆ ಎಂಎಸ್‌ಪಿ ಖಾತರಿಯ ಕುರಿತು ಕಾನೂನನ್ನು ಘೋಷಿಸಬೇಕು. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಿದ್ದು ಸಾರ್ವಜನಿಕರು. ಹಾಗಾಗಿ ಅವರ ಹಕ್ಕುಗಳು ಮತ್ತು ಬೇಡಿಕೆಗಳಿಗಾಗಿ ಮೋದಿ ಜನರ ಪರ ನಿಲ್ಲಬೇಕು ಎಂದು ರೈತ ನಾಯಕ ಹೇಳಿದ್ದಾರೆ. ಸಂವಿಧಾನವನ್ನು ರಕ್ಷಿಸುವುದು ನಿಮ್ಮ ಜವಾಬ್ದಾರಿ, ನೀವು ಸಂವಿಧಾನವನ್ನು ರಕ್ಷಿಸಿ, ದಯವಿಟ್ಟು ಈ ಗೇಟ್ ತೆರೆಯಿರಿ ಮತ್ತು ಅನುಮತಿಸಿ. ನಾವು ಶಾಂತಿಯುತವಾಗಿ ಪ್ರತಿಭಟಿಸಲು ದೆಹಲಿಗೆ ಹೋಗುತ್ತೇವೆ. ಇದು ರೈತರು ಮತ್ತು ಕಾರ್ಮಿಕರ ಈ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ” ಎಂದು ರೈತ ನಾಯಕ ಹೇಳಿದರು.
“ನೀವು ನಮ್ಮನ್ನು ಕೊಲ್ಲಬಹುದು ಆದರೆ ದಯವಿಟ್ಟು ರೈತರ ಮೇಲೆ ದಬ್ಬಾಳಿಕೆ ಮಾಡಬೇಡಿ ಎಂದು ನಾವು ಸರ್ಕಾರಕ್ಕೆ ಹೇಳಿದ್ದೇವೆ. ರೈತರಿಗೆ ಎಂಎಸ್‌ಪಿ ಖಾತ್ರಿಯ ಕುರಿತು ಕಾನೂನನ್ನು ಘೋಷಿಸುವ ಮೂಲಕ ಈ ಪ್ರತಿಭಟನೆಯನ್ನು ಕೊನೆಗೊಳಿಸಲು ನಾವು ಪ್ರಧಾನಿ ಮುಂದೆ ಬರಬೇಕೆಂದು ನಾವು ವಿನಂತಿಸುತ್ತೇವೆ. ಅಂತಹ ಸರ್ಕಾರವನ್ನು ದೇಶವು ಕ್ಷಮಿಸುವುದಿಲ್ಲ’’ ಎಂದು ಪಂಧೇರ್ ಹೇಳಿದ್ದಾರೆ.
ಪ್ರತಿಭಟನೆಯನ್ನು ನಿಗ್ರಹಿಸಲು ಅಥವಾ ನಿಯಂತ್ರಿಸಲು ಪೋಲಿಸ್ ಮತ್ತು ಅರೆಸೇನಾ ಪಡೆಗಳ ನಿಯೋಜನೆಯನ್ನು ಖಂಡಿಸಿದ ಸರ್ವಾನ್ ಸಿಂಗ್ ಪಂಧೇರ್, “ಹರ್ಯಾಣದ ಹಳ್ಳಿಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ.ನಾವು ಯಾವ ಅಪರಾಧವನ್ನು ಮಾಡಿದ್ದೇವೆ?.ನಾವು ನಿಮ್ಮನ್ನು ಪ್ರಧಾನಿಯನ್ನಾಗಿ ಮಾಡಿದ್ದೇವೆ. ಪಡೆಗಳು ನಮ್ಮನ್ನು ಈ ರೀತಿ ದಬ್ಬಾಳಿಕೆ ಮಾಡುತ್ತವೆ ಎಂದು ನಾವು ಎಂದಿಗೂ ಯೋಚಿಸಿರಲಿಲ್ಲ.ದಯವಿಟ್ಟು ಸಂವಿಧಾನವನ್ನು ರಕ್ಷಿಸಿ ಮತ್ತು ಶಾಂತಿಯುತವಾಗಿ ದೆಹಲಿಯ ಕಡೆಗೆ ಹೋಗೋಣ. ಇದು ನಮ್ಮ ಹಕ್ಕು” ಎಂದಿದ್ದಾರೆ.
ಇದನ್ನೂ ಓದಿ: Delhi Chalo: ದೆಹಲಿ ಚಲೋ: ಹರ್ಯಾಣ ಗಡಿ ದಾಟಲು ರೈತರು ಸಜ್ಜು, ಗಾಜಿಪುರ ಗಡಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ
ದೆಹಲಿಯ ಟಿಕ್ರಿ ಮತ್ತು ಸಿಂಘು ಗಡಿಗಳನ್ನು ಈಗಾಗಲೇ ಸೀಲ್ ಮಾಡಲಾಗಿದೆ. ರೈತರು ದೆಹಲಿಯತ್ತ ಸಾಗುತ್ತಿರುವಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭಾರೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪಡೆಗಳ ನಿಯೋಜನೆಯೊಂದಿಗೆ ಬ್ಯಾರಿಕೇಡ್, ಕಾಂಕ್ರೀಟ್ ತಡೆಗೋಡೆಗಳು ಮತ್ತು ಕಬ್ಬಿಣದ ಮೊಳೆಗಳನ್ನು ಸಹ ಹಾಕಲಾಗಿದೆ. ಗಾಜಿಪುರ ಗಡಿಯ ಎರಡು ಪಥಗಳನ್ನು ಸಹ ಮುಚ್ಚಲಾಗಿದೆ ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ದೆಹಲಿ ನಗರದಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ