ದೆಹಲಿ ಚಳಿಗೆ ಚಳುವಳಿಕಾರರು ಗಡಗಡ! ಆಹಾರ ರವಾನಿಸಿದ್ದು ಸಾಕು; ಬೆಚ್ಚಗಿನ ಉಡುಪು, ಇನ್ನಷ್ಟು ಜನರನ್ನು ಕಳಿಸಿ ಅನ್ನುತ್ತಿದ್ದಾರೆ!

ದೆಹಲಿಯ ತೀವ್ರ ಚಳಿ ರೈತ ಚಳುವಳಿಕಾರರಿಗೆ ಸಂಕಷ್ಟ ತಂದೊಡ್ಡಿದೆ. ಆಹಾರ ಕಳುಹಿಸಿದ್ದು ಸಾಕು, ಬೆಚ್ಚಗಿನ ಉಡುಪು ಮತ್ತು ಕಂಬಳಿಗಳನ್ನು ಕಳಿಸಲು ಪಂಜಾಬ್​ನ ಸಂಘಟನೆಗಳಿಗೆ ಚಳುವಳಿಕಾರರು ತಿಳಿಸಿದ್ದಾರೆ.

ದೆಹಲಿ ಚಳಿಗೆ ಚಳುವಳಿಕಾರರು ಗಡಗಡ! ಆಹಾರ ರವಾನಿಸಿದ್ದು ಸಾಕು; ಬೆಚ್ಚಗಿನ ಉಡುಪು, ಇನ್ನಷ್ಟು ಜನರನ್ನು ಕಳಿಸಿ ಅನ್ನುತ್ತಿದ್ದಾರೆ!
ಟೆಂಟ್​ಗಳಲ್ಲಿ ವಾಸ್ತವ್ಯ ಹೂಡಿರುವ ರೈತರು

Updated on: Jan 02, 2021 | 12:25 PM

ದೆಹಲಿ: ಪಂಜಾಬ್ ರೈತರ ಚಳುವಳಿ 38ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಚಳುವಳಿ ನಿರತ ತಮ್ಮ ಸೋದರ ಸೋದರಿಯರಿಗೆ ಪಂಜಾಬ್​ನ ವಿವಿಧ ಸಂಘಟನೆಗಳು ಆಹಾರ ಸಾಮಾಗ್ರಿಗಳನ್ನು ರವಾನಿಸುತ್ತಿದ್ದವು. ಆದರೆ, ಇನ್ಮುಂದೆ ಆಹಾರ ವಸ್ತುಗಳನ್ನು ಕಳಿಸದಿರುವ ತೀರ್ಮಾನಕ್ಕೆ ಬಂದಿವೆ!

ಪಾಕಿಸ್ತಾನ ಗಡಿ ಪ್ರಾಂತ್ಯದ ಪಂಜಾಬ್​ನ ಮಝಾ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಜಮೂರಿ ಕಿಸಾನ್ ಸಭಾ (ಜೆಕೆಎಸ್) ಈವರೆಗೆ ಟ್ರ್ಯಾಕ್ಟರ್​ಗಳಲ್ಲಿ ಆಹಾರ ವಸ್ತುಗಳನ್ನು ಕಳುಹಿಸುತ್ತಿದ್ದ ಸಂಘಟನೆ. ಇದೀಗ ಚಳಿಯಿಂದ ರಕ್ಷಿಸಿಕೊಳ್ಳಲು ಕಂಬಳಿ, ಬೆಚ್ಚಗಿನ ಉಡುಪು ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಮಾತ್ರ ಕಳುಹಿಸಲಿದೆ. ದೆಹಲಿಯ ಚಳಿಯೊಂದೇ ಚಳುವಳಿಕಾರರನ್ನು ಕಾಡುತ್ತಿದ್ದು, ಆಹಾರ ವಸ್ತುಗಳಿಗಿಂತ ಉಡುಪುಗಳನ್ನು ಮಾತ್ರ ಕಳಿಸಿದರೆ ಸಾಕೆಂದು ಚಳುವಳಿ ನಿರತರು ತಿಳಿಸಿದ್ದಾರೆ.

ಕಳೆದ 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ದೆಹಲಿಯಲ್ಲಿ ದಾಖಲಾಗಿದೆ. ನಿನ್ನೆ ಅತಿ ಕಡಿಮೆ ಅಂದರೆ, 1.1 ಡಿಗ್ರಿ ಸೆಲ್ಸಿಯಸ್​ಗೆ ತಾಪಮಾನ ಕುಸಿದಿದ್ದು, ದೆಹಲಿಯ ಜನತೆಯೂ ಥರಗುಟ್ಟಿದೆ.  ಗಡಿಭಾಗದಲ್ಲಿ ವಸತಿ ಹೂಡಿರುವ ರೈತರು ಚಳಿಯಿಂದ ರಕ್ಷಿಸಿಕೊಳ್ಳಲು ವಿವಿಧ ಉಪಾಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೂ,  ತೆರೆದ ವಾತಾವರಣದಲ್ಲಿ ಚಳಿಯಿಂದ ರಕ್ಷಿಸಿಕೊಳ್ಳುವುದು ಸುಲಭವಲ್ಲ. ಹೀಗಾಗಿ ಬೆಚ್ಚಗಿನ ಉಡುಪು ಕಳಿಸಲು ಪಂಜಾಬ್​ನ ಸಂಘಟನೆಗಳಿಗೆ ರೈತರು ತಿಳಿಸಿದ್ದಾರೆ.

ಆಹಾರ ವಸ್ತುಗಳನ್ನು ಕೊಳ್ಳಲು ದೆಹಲಿಯ ಹಲವರು ನೆರವಾಗುತ್ತಿದ್ದಾರೆ. ಹೀಗಾಗಿ, ಪಂಜಾಬ್​ನಿಂದ ಆಹಾರ ಪೂರೈಕೆ ಮಾಡುವ ಅಗತ್ಯವಿಲ್ಲ ಎಂದು ಚಳುವಳಿ ನಿರತರು ತಿಳಿಸಿದ್ದಾರೆ. ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಯೋರ್ವರು 50 ಸಾವಿರ ಹಣವನ್ನು ದೇಣಿಗೆ ನೀಡಿದ್ದಾರೆ. ಸುಮಾರು 2.50 ಲಕ್ಷ ಹಣ ಈಗಾಗಲೇ ಸಂಗ್ರಹವಾಗಿದೆ. ಈ ಹಣದಲ್ಲೇ ಆಹಾರ ವಸ್ತುಗಳನ್ನು ಕೊಳ್ಳಲು ಬಳಸುವುದಾಗಿ ಚಳುವಳಿ ನಿರತ ರೈತರು ತಿಳಿಸಿದ್ದಾರೆ. ಪಂಜಾಬ್​ನಿಂದ ರಾತ್ರಿ ಹೊರಡುತ್ತಿರುವ ಟ್ರ್ಯಾಕ್ಟರ್​ಗಳಲ್ಲಿ 12ರಿಂದ 13 ಜನ ಆರಾಮವಾಗಿ ಮಲಗಿ ಬರುತ್ತಿದ್ದಾರೆ. ಹಗಲಲ್ಲಾದರೆ ಟ್ರಾಲಿಗಳಲ್ಲಿ 20ರಿಂದ 25ಜನ ಪ್ರಯಾಣಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯ ತಾಪಮಾನ ಕೇಳಿದರೇ ಚಳಿ ಹುಟ್ಟುತ್ತೆ! 14 ವರ್ಷಗಳಲ್ಲೇ ಅತಿ ಕಡಿಮೆ ತಾಪಮಾನ ದಾಖಲು