ಹಿಂದೂಗಳು ದೇಶ ವಿರೋಧಿಯಾಗಲು ಸಾಧ್ಯವಿಲ್ಲ: RSS ಸರ ಸಂಘಚಾಲಕ ಮೋಹನ್ ಭಾಗವತ್
ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ‘ಹಿಂದೂಗಳು ಸ್ವಭಾವತಃ ದೇಶಪ್ರೇಮಿಗಳಾಗಿರುತ್ತಾರೆ’ ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಯಾವುದೇ ಹಿಂದೂ ವ್ಯಕ್ತಿ ದೇಶ ವಿರೋಧಿಯಾಗಲು ಸಾಧ್ಯವೇ ಇಲ್ಲ. ಹಿಂದೂಗಳು ಎಂದಿಗೂ ದೇಶಭಕ್ತರೇ ಆಗಿರುತ್ತಾರೆ ಎಂದು ಆರ್ಎಸ್ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.
ಡಾ. ಜೆ. ಕೆ. ಬಜಾಜ್ ಮತ್ತು ಎಂ. ಡಿ. ಶ್ರೀನಿವಾಸನ್ ಅವರು ರಚಿಸಿದ ‘ಮೇಕಿಂಗ್ ಆಫ್ ಹಿಂದೂ ಪ್ಯಾಟ್ರಿಯಾಟ್: ಬ್ಯಾಕ್ಗ್ರೌಂಡ್ ಆಫ್ ಗಾಂಧಿಜೀಸ್ ಹಿಂದ್ ಸ್ವರಾಜ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ಹೇಳಿಕೆ ನೀಡಿದ್ದಾರೆ.
ಭಾರತೀಯರೆಲ್ಲರೂ ದೇಶವನ್ನು ಸಹಜವಾಗಿ ಗೌರವಿಸುತ್ತಾರೆ. ಮಹಾತ್ಮ ಗಾಂಧೀಜಿಯವರು, ನನ್ನ ದೇಶಪ್ರೇಮ ಧರ್ಮದಿಂದ ಸ್ಫುರಣೆಗೊಂಡಿದೆ ಎಂದಿದ್ದರು. ಹೀಗಾಗಿ, ನೀವು ಹಿಂದೂವಾಗಿದ್ದಲ್ಲಿ ಸ್ವಭಾವತಃ ದೇಶಪ್ರೇಮಿಗಳಾಗಿರುತ್ತೀರಿ ಎಂದಿದ್ದಾರೆ.
ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮ ಮಹಾತ್ಮ ಗಾಂಧೀಜಿಯವರನ್ನು ಪ್ರೇರೇಪಿಸಿದ ಬಗೆಯನ್ನು ಉಲ್ಲೇಖಿಸಿದ ಅವರು, ಗಾಂಧೀಜಿ ನನ್ನ ಧರ್ಮ ಎಲ್ಲ ಧರ್ಮಗಳ ಧರ್ಮ ಎಂದಿದ್ದರು. ಅವರು ಬಳಸುತ್ತಿದ್ದ ‘ಧರ್ಮ’ಕ್ಕೆ ಇಂಗ್ಲೀಷಿನಲ್ಲಿ ಪರ್ಯಾಯ ಪದವಿರಲಿಲ್ಲ. ಅವರ ‘ಸ್ವರಾಜ್ಯ’ ಪರಿಕಲ್ಪನೆ ಅರ್ಥೈಸಿಕೊಳ್ಳಲು ‘ಸ್ವಧರ್ಮ’ದ ಅರ್ಥ ತಿಳಿದಿರಲೇಬೇಕು ಎಂದರು.
ವೈವಿಧ್ಯತೆಯಲ್ಲಿ ಏಕತೆ ಕಾಣುತ್ತಿದ್ದ ಗಾಂಧೀಜಿಯವರು, ಇತರ ಧರ್ಮಗಳನ್ನು ಗೌರವದಿಂದ ಕಾಣುತ್ತಿದ್ದರು. ಇದು ನಿಜವಾದ ಭಾರತೀಯ ತತ್ವ. ಪಾಶ್ವಾತ್ಯ ಸಂಸ್ಕೃತಿಯ ಅನುಕರಣೆ ಮಾಡುವ ನಮ್ಮನ್ನು ನಾವು ದೂಷಿಸಿಕೊಳ್ಳಬೇಕೇ ವಿನಃ ಪಾಶ್ಚಾತ್ಯ ಸಂಸ್ಕೃತಿಯನ್ನು ದೂರಿ ಪ್ರಯೋಜನವಿಲ್ಲ. ಮಹಾತ್ಮಾ ಗಾಂಧೀಜಿಯವರ ಜೀವನದ ಮೂರು ಹಂತಗಳನ್ನು ಪುಸ್ತಕದಲ್ಲಿ ವ್ಯಾಖ್ಯಾನಿಸಲಾಗಿದೆ. 1893-94ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ತಮ್ಮ ಇಸ್ಲಾಂ ಮತ್ತು ಕ್ರಿಶ್ಚಿಯನ್ ಸಹೋದ್ಯೋಗಿಗಳಿಂದ ಮತಾಂತರವಾಗಲು ಒತ್ತಾಯಕ್ಕೊಳಪಟ್ಟಿದ್ದರು. ಆದರೆ ಈ ಮತಾಂತರಕ್ಕೆ ನಿರಾಕರಿಸಿದ್ದ ಗಾಂಧಿ, ಸ್ವಧರ್ಮವೇ ಶ್ರೇಷ್ಠವೆಂದು ಹೇಳಿದ್ದರೆಂದು ಈ ಪುಸ್ತಕದಲ್ಲಿ ವ್ಯಾಖ್ಯಾನಿಸಲಾಗಿದೆ.
ವಾಜಪೇಯಿ ಭಾಷಣದ ಅಕ್ಷರರೂಪ | ಭಾರತವನ್ನು ಪರಮ ವೈಭವ ಶಿಖರಕ್ಕೇರಿಸುವುದು ಎನ್ನುವುದರ ಅರ್ಥ ಇದು