ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಮೊದಲಿನಿಂದಲೇ ವಿರೋಧಿಸುತ್ತ ಬಂದಿದ್ದಲ್ಲದೆ, ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಇಂದು ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಗಳನ್ನು ಹರಿದುಹಾಕಿದ್ದಾರೆ.
ರೈತರ ಹೋರಾಟದ ಬಗ್ಗೆ ಚರ್ಚಿಸಲು ಗುರುವಾರ ಕರೆಯಲಾಗಿದ್ದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, ಮೂರು ಕಾನೂನುಗಳ ಪ್ರತಿಗಳನ್ನು ಹರಿದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ಸಾಂಕ್ರಾಮಿಕದ ಮಧ್ಯೆ ಇಷ್ಟೊಂದು ವಿವಾದಿತ ಕೃಷಿ ಮಸೂದೆ ಪಾಸ್ ಮಾಡಿ, ಕಾಯ್ದೆಯನ್ನಾಗಿ ರೂಪಿಸುವ ಅವಸರ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಏನಿತ್ತು ಎಂದು ಪ್ರಶ್ನಿಸಿದರು.
ರಾಜ್ಯಸಭೆಯಲ್ಲಿ ವೋಟಿಂಗ್ ಇಲ್ಲದೆ ಒಮ್ಮೆಲೆ ಮೂರು ವಿಧೇಯಕ ಪಾಸ್ ಆಗಿದ್ದು ಇದೇ ಮೊದಲು. ಕೃಷಿ ಕಾನೂನುಗಳ ಮೂರು ಕಾಪಿಗಳನ್ನೂ ನಾನಿಲ್ಲಿ ಹರಿದುಹಾಕುತ್ತಿದ್ದೇನೆ. ಹಾಗೇ, ಬ್ರಿಟಿಷರಿಗಿಂತಲೂ ಕ್ರೂರಿಯಾಗಬೇಡಿ ಎಂದು ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು. ಸಿಎಂ ಪ್ರತಿಗಳನ್ನು ಹರಿಯುತ್ತಿದ್ದಂತೆ ಆಪ್ ಶಾಸಕರು ಮೇಜು ಕುಟ್ಟಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅರವಿಂದ್ ಕೇಜ್ರಿವಾಲ್, ಕಳೆದ 22 ದಿನಗಳಿಂದ ಸಾವಿರಾರು ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಮೂರು ಕಾಯ್ದೆಗಳನ್ನು ಹಿಂಪಡೆಯಲು ಮನವಿ ಮಾಡುತ್ತಿದ್ದಾರೆ. ಈ ಹೋರಾಟದ ವೇಳೆ 20ಕ್ಕೂ ಹೆಚ್ಚು ರೈತರು ಮೃತರಾಗಿದ್ದಾರೆ. ದಿನಕ್ಕೊಬ್ಬರಂತೆ ಸಾವನ್ನಪ್ಪುತ್ತಿದ್ದಾರೆ. ಇಷ್ಟಾದರೂ ಕೇಂದ್ರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Delhi chalo | ರೈತರು ಗಲಭೆಕೋರರಲ್ಲ, ಪ್ರತಿಭಟಿಸುವ ಹಕ್ಕು ಅವರಿಗಿದೆ: ಸುಪ್ರೀಂಕೋರ್ಟ್ ಸ್ಪಷ್ಟ ನುಡಿ
Published On - 6:32 pm, Thu, 17 December 20