Delhi chalo | ರೈತರು ಗಲಭೆಕೋರರಲ್ಲ, ಪ್ರತಿಭಟಿಸುವ ಹಕ್ಕು ಅವರಿಗಿದೆ: ಸುಪ್ರೀಂಕೋರ್ಟ್ ಸ್ಪಷ್ಟ ನುಡಿ
ಕಾನೂನುಗಳ ವಿರುದ್ಧ ಪ್ರತಿಭಟಿಸುವ ಮೂಲಭೂತ ಹಕ್ಕನ್ನು ನಾವು ಗುರುತಿಸುತ್ತೇವೆ ಮತ್ತು ಅದನ್ನು ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ. ಅದು ಯಾರೊಬ್ಬರ ಜೀವಕ್ಕೆ ಹಾನಿಯನ್ನುಂಟುಮಾಡಬಾರದು ಎಂಬುದನ್ನು ನಾವು ನೋಡಬೇಕಿದೆ. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ.
ನವದೆಹಲಿ: ಪ್ರತಿಭಟನೆಯು ಪ್ರಜೆಯ ಮೂಲಭೂತ ಹಕ್ಕು, ರೈತರಿಗೆ ಪ್ರತಿಭಟಿಸುವ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ಗುರುವಾರ ಸ್ಪಷ್ಟವಾಗಿ ಹೇಳಿದೆ. ಮೂರು ಕೃಷಿ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಮನವಿಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ನ್ಯಾಯಪೀಠವು ಈಗ ಕಾನೂನುಗಳ ಸಿಂಧುತ್ವವನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಎ.ಎಸ್.ಬೊಪಣ್ಣ ಮತ್ತು ವಿ.ರಾಮಸುಬ್ರಹ್ಮಣ್ಯಂ ನ್ಯಾಯಪೀಠದಲ್ಲಿರುವ ಇತರ ನ್ಯಾಯಮೂರ್ತಿಗಳು.
ಕಾನೂನುಗಳ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ನಾವು ಒಪ್ಪಿಕೊಳ್ಳುತ್ತೇವೆ. ಅದನ್ನು ಮೊಟಕುಗೊಳಿಸುವ ಪ್ರಶ್ನೆಯೇ ಇಲ್ಲ. ಈ ಹಕ್ಕಿನಿಂದ ಯಾರೊಬ್ಬರ ಜೀವಕ್ಕೂ ಹಾನಿಯಾಗಬಾರದು ಎಂಬುದನ್ನು ನಾವು ಗಮನಿಸಬೇಕಿದೆ. ಜನರ ಹಕ್ಕುಗಳ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಪ್ರತಿಭಟನೆ ನಡೆಸುತ್ತಿರುವ ರೀತಿಯನ್ನು ನಾವು ಪರಿಶೀಲಿಸುತ್ತೇವೆ. ಪ್ರತಿಭಟನೆಯ ರೀತಿ ಏನು ಎಂದು ನಾವು ಕೇಂದ್ರ ಸರ್ಕಾರವನ್ನು ಕೇಳುತ್ತೇವೆ. ಇತರ ನಾಗರಿಕರ ಹಕ್ಕುಗಳಿಗೆ ಬಾಧಕವಾಗದಂತೆ ಅದನ್ನು ಸ್ವಲ್ಪ ಬದಲಾವಣೆ ಮಾಡುವಂತೆ ಸೂಚಿಸುತ್ತೇವೆ ಎಂದು ನ್ಯಾಯಪೀಠವು ಹೇಳಿತು.
ಯಾವುದೇ ಆಸ್ತಿಗೆ ಹಾನಿ ಅಥವಾ ಜೀವಕ್ಕೆ ಅಪಾಯವನ್ನುಂಟು ಮಾಡದೇ ಇರುವ ಯಾವುದೇ ಪ್ರತಿಭಟನೆಯು ಸಾಂವಿಧಾನಿಕ ಸಿಂಧುತ್ವ ಪಡೆದುಕೊಳ್ಳುತ್ತದೆ. ಎರಡೂ ಕಡೆಯವರು ವಾದ ಮಂಡಿಸಿದ ನಂತರ ನಾವು ನಿಷ್ಪಕ್ಷ ಮತ್ತು ಸ್ವತಂತ್ರ ಸಮಿತಿ ರಚನೆ ಬಗ್ಗೆ ಚಿಂತಿಸುತ್ತೇವೆ. ಈ ಸ್ವತಂತ್ರ ಸಮಿತಿಯಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ಭಾರತೀಯ ಕಿಸಾನ್ ಯೂನಿಯನ್ ಮತ್ತು ಇತರ ಸದಸ್ಯರು ಇರುತ್ತಾರೆ. ಈ ಸಮಿತಿಯು ಪ್ರಸ್ತುತ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಸದ್ಯ ಪ್ರತಿಭಟನೆ ಮುಂದುವರಿಯಬಹುದು ಎಂದು ನ್ಯಾಯಪೀಠ ಹೇಳಿದೆ.
ಭಾರತೀಯ ಕಿಸಾನ್ ಯೂನಿಯನ್ನ ರಾಕೇಶ್ ಟಿಕಾಯತ್ ಸೇರಿ ಆರು ಮಂದಿ, ಜಂಹೂರಿ ಕಿಸಾನ್ ಸಭಾದ ಕುಲವಂತ್ ಸಿಂಗ್ ಸಂಧು, ಕುಲ್ ಹಿಂದ್ ಕಿಸಾನ್ ಫೆಡರೇಶನ್ನ ಪ್ರೇಮ್ ಸಿಂಗ್ ಭಂಗು ಅವರಿಗೆ ವಾದ ಮಂಡಿಸಲು ನ್ಯಾಯಪೀಠವು ಅವಕಾಶ ನೀಡಿದೆ.
ಪ್ರತಿಭಟನೆಯಲ್ಲಿ ನಿರತರಾಗಿರುವ ಯಾರೊಬ್ಬರೂ ಮಾಸ್ಕ್ ಧರಿಸುತ್ತಿಲ್ಲ. ಅವರೆಲ್ಲರೂ ಜತೆಯಾಗಿ ಗುಂಪುಗೂಡಿ ಕುಳಿತುಕೊಳ್ಳುತ್ತಿದ್ದಾರೆ. ಕೋವಿಡ್-19 ಇದೆ, ಪ್ರತಿಭಟನಾಕಾರರು ಗ್ರಾಮಗಳಿಗೆ ಮರಳಿದಾಗ ಅಲ್ಲಿ ಸೋಂಕು ಹರಡುವಿಕೆ ಸಾಧ್ಯತೆ ಇದೆ. ರೈತರು ಇತರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಬಾರದು ಎಂದು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಹೇಳಿದ್ದಾರೆ.
ಸಮಿತಿಯಲ್ಲಿ ಯಾರು ಇರಬೇಕು? ಹಲವಾರು ರೈತರು ಪಂಜಾಬ್ನವರಾಗಿದ್ದಾರೆ. ರೈತರ ತಂಡ ಮತ್ತು ಕೇಂದ್ರ ನಡುವಿನ ಮಾತುಕತೆಗೆ ರಾಜ್ಯ ಸರ್ಕಾರದ ಆಕ್ಷೇಪ ಇಲ್ಲ. ಸಮಿತಿಯಲ್ಲಿ ಯಾರು ಇರಬೇಕು ಎಂಬುದನ್ನು ರೈತರು ಮತ್ತು ಕೇಂದ್ರ ಸರ್ಕಾರ ನಿರ್ಧರಿಸಲಿ ಎಂದು ಪಂಜಾಬ್ ಸರ್ಕಾರದ ಪರ ವಾದಿಸಿದ ಹಿರಿಯ ವಕೀಲ ಪಿ. ಚಿದಂಬರಂ ಹೇಳಿದ್ದಾರೆ.
ಮಾತುಕತೆಯಿಂದ ಸಮಸ್ಯೆ ಪರಿಹರಿಸಬಹುದು ಮಾತುಕತೆಯಿಂದ ನಿಮ್ಮ (ರೈತರ) ಸಮಸ್ಯೆ ಬಗೆಹರಿಯಬಹುದು. ಪ್ರತಿಭಟನೆಯಲ್ಲಿ ಕೂರುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
ನಾವೂ ಭಾರತೀಯರೇ. ನಮಗೂ ರೈತರ ಬವಣೆ ಗೊತ್ತಿದೆ. ಅವರ ಸಮಸ್ಯೆಗಳ ಬಗ್ಗೆ ಅನುಕಂಪವೂ ಇದೆ. ನೀವು ನಡೆಸುತ್ತಿರುವ ಪ್ರತಿಭಟನೆಯ ರೀತಿಯನ್ನು ಬದಲಿಸಬೇಕು. ನೀವು ನಿಮ್ಮ ವಾದ ಮಂಡಿಸಿದ ನಂತರ ಸಮಿತಿಯೊಂದನ್ನು ರಚಿಸುವ ಬಗ್ಗೆ ನಾವು ಯೋಚಿಸುತ್ತೇವೆ. ಎಲ್ಲ ರೈತ ಸಂಘಟನೆಗಳಿಗೆ ನೋಟಿಸ್ ತಲುಪಬೇಕು ಮತ್ತು ಚಳಿಗಾಲದಲ್ಲಿ ನ್ಯಾಯಾಲಯಕ್ಕೆ ರಜೆ ಅವಧಿ ಘೋಷಿಸುವ ಮುನ್ನ ಪ್ರಕರಣದ ವಿಚಾರಣೆ ನಡೆಯಬೇಕು. ಇಲ್ಲಿಯವರೆಗೆ ಸರ್ಕಾರದ ಜತೆ ಮಾತುಕತೆ ನಡೆಸಿದ್ದ ರೈತರ ಸಂಘಟನೆಯ ಎಲ್ಲ ಪ್ರತಿನಿಧಿಗಳಿಗೂ ನೋಟಿಸ್ ನೀಡಲಾಗುವುಗುವುದು ಎಂದು ಅಟಾರ್ನಿ ಜನರಲ್ ತಿಳಿಸಿದರು. ರೈತರು ಹಿಂಸಾಚಾರ ನಡೆಸುವುದಾಗಲೀ, ನಗರಕ್ಕೆ ಈ ರೀತಿ ತಡೆಯೊಡ್ಡುವುದು ಮಾಡಬಾರದು ಎಂದು ಅವರು ಅಭಿಪ್ರಾಯಪಟ್ಟರು.
ಕೃಷಿ ಕಾನೂನು ಸದ್ಯ ತಡೆಹಿಡಿಯಿರಿ
ಕೃಷಿ ಕಾನೂನು ತಡೆಹಿಡಿಯುವ ಸಾಧ್ಯತೆಯನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ. ನ್ಯಾಯಾಲಯವು ಈ ವಿಷಯವನ್ನು ಸ್ಪಷ್ಟಪಡಿಸುವವರೆಗೆ ಕಾನೂನಿನ ಅನುಷ್ಠಾನದ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಸರ್ಕಾರವು ನ್ಯಾಯಾಲಯಕ್ಕೆ ಭರವಸೆ ನೀಡಬಹುದೇ ಎಂದು ಅಟಾರ್ನಿ ಜನರಲ್ ಅವರಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯ ಕೇಳಿದೆ.
ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್, ರೈತರು ಚರ್ಚೆಗೆ ಬರುತ್ತಿಲ್ಲ. ಇನ್ನು ಯಾವ ಅನುಷ್ಠಾನದ ಬಗ್ಗೆ ನಾವು ಭರವಸೆ ನೀಡಬಹುದು ಎಂದು ಮಾಹಿತಿ ಕೋರಿದರು.
ಇದು ಚರ್ಚೆಯನ್ನು ಆರಂಭಿಸಲಿರುವ ಪ್ರಕ್ರಿಯೆ ಮಾತ್ರ. ರೈತರ ಪರಿಸ್ಥಿತಿ ಮತ್ತು ಈಗ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ನಾವು ಚಿಂತಿತರಾಗಿದ್ದೇವೆ. ರೈತರು ಗಲಭೆಕೋರರಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿತು.
Delhi Chalo | ದೆಹಲಿ ಗಡಿಭಾಗದಲ್ಲಿ ವಿಪರೀತ ಚಳಿಗೆ ಪ್ರತಿಭಟನಾ ನಿರತ ರೈತ ಸಾವು
Published On - 5:12 pm, Thu, 17 December 20