ಕೇರಳ ಬಿಜೆಪಿ ಅಧ್ಯಕ್ಷರಾಗಿ ರಾಜೀವ್ ಚಂದ್ರಶೇಖರ್ ನೇಮಕ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಘೋಷಣೆ
ಕೇಂದ್ರ ಸರ್ಕಾರದ ಮಾಜಿ ಸಚಿವ ರಾಜೀವ್ ಚಂದ್ರಶೇಖರ್ ಇಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಾಬಲ್ಯ ಹೊಂದಿರುವ ಕೇರಳದಲ್ಲಿ ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರುವ ತಮ್ಮ ಧ್ಯೇಯವನ್ನು ಘೋಷಿಸಿದರು. ರಾಜೀವ್ ಚಂದ್ರಶೇಖರ್ ಅವರನ್ನು ಕೇರಳದ ಬಿಜೆಪಿ ಅಧ್ಯಕ್ಷರಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಘೋಷಣೆ ಮಾಡಿದರು.

ನವದೆಹಲಿ, ಮಾರ್ಚ್ 24: ಕೇರಳದ ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಜಿ ಸಚಿವ, ಖ್ಯಾತ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರನ್ನು ಇಂದು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇರಳ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಘೋಷಿಸಿದರು. ಈ ವೇಳೆ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕೇರಳ ಬಿಜೆಪಿ ಹೊಸ ಎತ್ತರಕ್ಕೆ ಬೆಳೆಯಲಿದೆ. ಕೇರಳದಲ್ಲಿ ಬಿಜೆಪಿಗೆ ಶೇ.19ಷ್ಟು ಮತ ಹಂಚಿಕೆಯಾಗಿದ್ದು, ಭವಿಷ್ಯದಲ್ಲಿ ರಾಜೀವ್ ಅವರ ನಾಯಕತ್ವದಲ್ಲಿ ಬಿಜೆಪಿ ಇಲ್ಲಿ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪಕ್ಷದೊಂದಿಗೆ ಕೇರಳದ ಅಭಿವೃದ್ಧಿಗೂ ನೂತನ ಅಧ್ಯಕ್ಷರು ಶ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಅವರು ಸ್ಪಷ್ಟ ನಿಲುವು ಮತ್ತು ಹೊಸ ಹೊಸ ಯೋಜನೆ, ಯೋಚನೆಗಳನ್ನು ಹೊಂದಿದವರಾಗಿದ್ದಾರೆ. ರಾಜೀವ್ ಅವರು ಒಬ್ಬ ಉದ್ಯಮಿ ಆಗಿದ್ದರೂ ವಿಶೇಷವಾಗಿ ದೂರಸಂಪರ್ಕ ವಲಯದಲ್ಲಿ ಹಲವು ಬದಲಾವಣೆಗಳನ್ನು ತಂದಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಪ್ರಲ್ಹಾದ್ ಜೋಶಿ ಏನಂದ್ರು?
ಪ್ರಧಾನಿ ನರೇಂದ್ರ ಮೋದಿ ಅವರು ರಾಜೀವ್ ಚಂದ್ರಶೇಖರ್ ಅವರ ಉದ್ಯಮಶೀಲತೆಯನ್ನು ಮೆಚ್ಚಿ ಸಚಿವರನ್ನಾಗಿ ಮಾಡಿದ್ದರು. ಈಗ ಕೇರಳದಲ್ಲಿ ಮತ್ತೊಂದು ಹೊಸ ಜವಾಬ್ದಾರಿ ನೀಡಿದ್ದಾರೆ. ಒಬ್ಬ ಒಳ್ಳೇ ಹೋರಾಟಗಾರ ಮತ್ತು ಸಂಘಟಕರಾಗಿ ಪಕ್ಷವನ್ನು ಬಲಪಡಿಸುತ್ತಾರೆ ಎಂದು ಜೋಶಿ ಹೇಳಿದರು.
ರಾಜೀವ್ ಚಂದ್ರಶೇಖರ್ ಅವರನ್ನು 25 ವರ್ಷಗಳಿಂದ ಬಲ್ಲೆ. ಅವರೊಬ್ಬ ಬಲಿಷ್ಠ ಕೇರಳಿಗ ಆಗಿದ್ದರೂ ಬೆಂಗಳೂರಿನಲ್ಲಿ ಉತ್ತಮ ಮೂಲಸೌಕರ್ಯಕ್ಕಾಗಿ ವೇದಿಕೆ ರಚಿಸಿ ಕೆಲಸ ಮಾಡಿದರು. ಕೇರಳಕ್ಕೆ ಸದ್ಯ ಇಂಥವರ ಅಗತ್ಯವಿತ್ತು ಎಂದು ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟರು.
ಬಿಜೆಪಿ ದೇಶಾದ್ಯಂತ ಬಲಿಷ್ಠವಾಗಿದೆ:
ಕೇರಳ, ಕರ್ನಾಟಕ, ತಮಿಳುನಾಡು ಹೊರತುಪಡಿಸಿ ಬಹತೇಕ, ದೇಶಾದ್ಯಂತ ಬಿಜೆಪಿ ಅಧಿಕಾರದಲ್ಲಿದೆ. ಪ್ರಬಲ ವಿರೋಧ ಪಕ್ಷವಾಗಿಯೂ ಇದ್ದೇವೆ. ಭಾರತದಾದ್ಯಂತ ಇರುವ ಏಕೈಕ ಪಕ್ಷ ಎಂದರೆ ಬಿಜೆಪಿ ಎಂದು ಜೋಶಿ ಪ್ರತಿಪಾದಿಸಿದರು.
ಇದನ್ನೂ ಓದಿ: ಡಾ ಸುಧಾಕರ್ ವರಿಷ್ಠರ ಬಳಿ ವಿಜಯೇಂದ್ರ ವಿರುದ್ಧ ದೂರು ಒಯ್ದಿದ್ದರೆ ತಪ್ಪೇನೂ ಇಲ್ಲ: ಪಿ ರಾಜೀವ್, ಶಾಸಕ
ಕೇರಳದ ನಿರ್ಗಮಿತ ಅಧ್ಯಕ್ಷ ಕೆ. ಸುರೇಂದ್ರನ್ ಅವರು ಧ್ವಜವನ್ನು ರಾಜೀವ್ ಚಂದ್ರಶೇಖರ್ ಅವರಿಗೆ ಹಸ್ತಾಂತರಿಸುವ ಮೂಲಕ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿದರು. ಈ ವೇಳೆ ಮಾತನಾಡಿದ ಸುರೇಂದ್ರನ್, ಬಿಜೆಪಿ ಕೇವಲ ಹಿಂದೂಗಳನ್ನಷ್ಟೇ ಒಳಗೊಂಡಿಲ್ಲ. ಎಲ್ಲರಿಗೂ ಸೇರಿದ ಪಕ್ಷ. ಕೇರಳವೇ ಇದಕ್ಕೊಂದು ಉತ್ತಮ ನಿದರ್ಶನ. ಕೇರಳ ಬಿಜೆಪಿಯಲ್ಲಿ ಜಿಲ್ಲೆ ಮಾತ್ರವಲ್ಲ, ತಳ ಮಟ್ಟದಿಂದಲೂ ಸರ್ವ ಸಮುದಾಯದವರಿಗೂ ತಮ್ಮ ಪಕ್ಷ ಪದಾಧಿಕಾರಿಗಳ ಸ್ಥಾನ ನೀಡಿದೆ. 30 ಜಿಲ್ಲಾ ಅಧ್ಯಕ್ಷರ ಪೈಕಿ ಮೂವರು ಕ್ರಿಶ್ಚಿಯನ್ನರಿದ್ದರೆ, ಎಸ್ಸಿ, ಎಸ್ಟಿ ಮತ್ತು ಒಬಿಸಿ ಹಾಗೂ ಮಹಿಳೆಯರೂ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಬೇರೆ ಯಾವುದೇ ಪಕ್ಷದಲ್ಲೂ ಹೀಗೆ ಪ್ರಾಶಸ್ತ್ಯ ನೀಡಲಾಗಿಲ್ಲ ಎಂದು ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ