Arvind Kejriwal: ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ಅರ್ಜಿ ವಜಾ; ಜೂನ್ 19ರವರೆಗೆ ನ್ಯಾಯಾಂಗ ಬಂಧನ

|

Updated on: Jun 05, 2024 | 4:37 PM

ಅಬಕಾರಿ ನೀತಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ 7 ದಿನಗಳ ಜಾಮೀನು ಕೋರಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ವಜಾಗೊಳಿಸಿದೆ. ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.

Arvind Kejriwal: ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನು ಅರ್ಜಿ ವಜಾ; ಜೂನ್ 19ರವರೆಗೆ ನ್ಯಾಯಾಂಗ ಬಂಧನ
ಅರವಿಂದ್ ಕೇಜ್ರಿವಾಲ್
Follow us on

ನವದೆಹಲಿ: ದೆಹಲಿ ಸಿಎಂ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನ್ಯಾಯಾಂಗ ಬಂಧನವನ್ನು ರೋಸ್ ಅವೆನ್ಯೂ ಕೋರ್ಟ್ ಜೂನ್ 19 ರವರೆಗೆ ವಿಸ್ತರಿಸಿದೆ. ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಜೈಲು ಶಿಕ್ಷೆಗೆ ಒಳಗಾಗಿರುವ ಅರವಿಂದ್ ಕೇಜ್ರಿವಾಲ್ ಲೋಕಸಭೆ ಚುನಾವಣಾ ಪ್ರಚಾರಕ್ಕೆಂದು ಮಧ್ಯಂತರ ಜಾಮೀನು ಪಡೆದಿದ್ದರು. ಕಳೆದ ಭಾನುವಾರ ಅವರು ಮತ್ತೆ ಜೈಲಿಗೆ ವಾಪಾಸಾಗಿದ್ದರು. ಅನಾರೋಗ್ಯದ ನೆಪವೊಡ್ಡಿ ಮತ್ತೆ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಅವರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಇಂದು ನ್ಯಾಯಾಲಯದ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು. ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ರೋಸ್ ಅವೆನ್ಯೂ ನ್ಯಾಯಾಲಯವು ಜೂನ್ 19ರವರೆಗೆ ವಿಸ್ತರಿಸಿದೆ.

ಆಮ್ ಆದ್ಮಿ ಪಕ್ಷದ ಮುಖ್ಯಸ್ಥರ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಈ ಪ್ರಕರಣದಲ್ಲಿ ಡೀಫಾಲ್ಟ್ ಜಾಮೀನು ಕೋರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯವು ಜೂನ್ 7 ರಂದು ಕೈಗೆತ್ತಿಕೊಳ್ಳಲಿದೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನಿಗೆ ಇಡಿ ವಿರೋಧ, ಜೂನ್ 5 ರಂದು ಮುಂದಿನ ವಿಚಾರಣೆ

ಕೇಜ್ರಿವಾಲ್ ಪರ ವಾದ ಮಂಡಿಸಿದ ವಕೀಲ ವಿವೇಕ್ ಜೈನ್ ಅವರು ಕೇಜ್ರಿವಾಲ್ ಅವರ ತೂಕದಲ್ಲಿ ಕೆಲವು ವ್ಯತ್ಯಾಸಗಳಿವೆ ಎಂದು ವಾದಿಸಿದರು. ಆದರೆ, ಮುಖ್ಯಮಂತ್ರಿಗಳ ಪರವಾಗಿ ಅವರು ಕೋರುತ್ತಿರುವ ಪರಿಹಾರವನ್ನು ಸ್ಪಷ್ಟಪಡಿಸಿ ಸೂಕ್ತ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಕೇಜ್ರಿವಾಲ್‌ಗೆ ಕೆಲವು ರೋಗನಿರ್ಣಯ ಪರೀಕ್ಷೆಗಳಿಗೆ ಕೆಲವು ನಿರ್ದೇಶನಗಳನ್ನು ರವಾನಿಸಲಾಗಿದೆ. ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಜೂನ್ 19ರಂದು ಮಧ್ಯಾಹ್ನ 2 ಗಂಟೆಗೆ ರಜಾಕಾಲದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‌ಗೆ ಜೈಲಿನಲ್ಲಿ ಕೂಲರ್ ನೀಡಿಲ್ಲ; ಆಮ್ ಆದ್ಮಿ ಆರೋಪ

ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1 ರಂದು ಮುಕ್ತಾಯಗೊಂಡ ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ತಾತ್ಕಾಲಿಕವಾಗಿ 3 ವಾರಗಳ ಜಾಮೀನು ನೀಡಲಾಗಿತ್ತು. ಅದರ ಮರುದಿನ ಅವರು ಜೈಲಿಗೆ ವಾಪಾಸಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ