ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾದ ಆರು ತಿಂಗಳ ನಂತರ ಫೆಬ್ರವರಿ 26 ರಂದು ಮನೀಶ್ ಸಿಸೋಡಿಯಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಮೊದಲ ಬಾರಿಗೆ ಬಂಧಿಸಿತ್ತು. ಮಾರ್ಚ್ 9 ರಂದು ತಿಹಾರ್ ಜೈಲಿನಲ್ಲಿ ಗಂಟೆಗಳ ವಿಚಾರಣೆಯ ನಂತರ ಇಡಿ ಇದೇ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿತು.
ಸಿಬಿಐ ಮತ್ತು ಇಡಿ ಎರಡೂ ಪ್ರಕರಣಗಳಲ್ಲಿ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್ ವಿರುದ್ಧ ಸಿಸೋಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರ ಪೀಠ ಈ ತೀರ್ಪು ನೀಡಿದೆ. ಸುಪ್ರೀಂಕೋರ್ಟ್ ಜುಲೈನಲ್ಲಿ ನೋಟಿಸ್ ಜಾರಿಗೊಳಿಸಿತ್ತು ಹಾಗೂ ಈ ತಿಂಗಳ ಆರಂಭದಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.
2021ರಲ್ಲಿ ಆದಾಯವನ್ನು ಹೆಚ್ಚಿಸಲು ಹಾಗೂ ಮದ್ಯದ ವ್ಯಾಪಾರವನ್ನು ಸುಧಾರಿಸಲು ದೆಹಲಿ ಸರ್ಕಾರವು ರೂಪಿಸಿದ ಅಬಕಾರಿ ನೀತಿಯು ವಿವಾದದ ಮೂಲವಾಗಿದೆ. ನಂತರ ಅನುಷ್ಠಾನದಲ್ಲಿ ಅಕ್ರಮಗಳ ಆರೋಪದ ನಂತರ ಅದನ್ನು ಹಿಂತೆಗೆದುಕೊಳ್ಳಲಾಯಿತು.
ಮತ್ತಷ್ಟು ಓದಿ: Manish Sisodia: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ, ಇತರ ಆರೋಪಿಗಳ ಆಸ್ತಿ ಜಪ್ತಿ
ರಾಷ್ಟ್ರ ರಾಜಧಾನಿಯಲ್ಲಿ ಮದ್ಯದ ವ್ಯಾಪಾರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲು ಯತ್ನಿಸಿದ ಈ ನೀತಿಯನ್ನು ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಖಾಸಗಿ ಸಂಸ್ಥೆಗಳಿಗೆ ಅನಪೇಕ್ಷಿತ ಲಾಭವನ್ನು ನೀಡಲು ಬಳಸಲಾಗಿದೆ ಮತ್ತು ಭ್ರಷ್ಟಾಚಾರದ ಹೊಡೆತಕ್ಕೆ ಸಿಲುಕಿದೆ ಎಂದು ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳ ಪ್ರತಿಪಾದಿಸಿದೆ. ಇದು ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕ ಮನೀಶ್ ಸಿಸೋಡಿಯಾ ಅವರ ಬಂಧನಕ್ಕೆ ಕಾರಣವಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:50 am, Mon, 30 October 23