ಏರ್ ಇಂಡಿಯಾ, ಇಂಡಿಗೋ ವಿಮಾನಗಳಿಗೆ ಬಾಂಬ್ ಬೆದರಿಕೆ; 5 ಏರ್ಪೋರ್ಟ್ಗಳಲ್ಲಿ ಹೈ ಅಲರ್ಟ್
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೋ ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಹೀಗಾಗಿ, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, 5 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದೆಹಲಿಯಲ್ಲಿ ಕಾರು ಸ್ಫೋಟದ ಬೆನ್ನಲ್ಲೇ ಭಾರತದ 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದಿದೆ. ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ನವದೆಹಲಿ, ನವೆಂಬರ್ 12: ಮುಂಬೈನಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನಕ್ಕೆ ಪ್ರಯಾಣದ ಸಮಯದಲ್ಲಿ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಆತಂಕ ಉಂಟಾಯಿತು. ಈ ಘಟನೆಯ ನಂತರ, ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ಆ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಇಂಡಿಗೋ ಕೂಡ ಇದೇ ರೀತಿಯ ಬೆದರಿಕೆಯನ್ನು ಸ್ವೀಕರಿಸಿತು. ಈ ಬೆದರಿಕೆ ಹಾಕಿದವರು ದೇಶಾದ್ಯಂತ 5 ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಹೀಗಾಗಿ, ದೆಹಲಿ, ಮುಂಬೈ, ಚೆನ್ನೈ, ತಿರುವನಂತಪುರಂ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ಬೆದರಿಕೆ ಬಂದ ತನಿಖೆಯನ್ನು ಪ್ರಾರಂಭಿಸಲಾಗಿದೆ. ಆದರೆ, ಇಮೇಲ್ ಅನ್ನು ಯಾರು ಮತ್ತು ಎಲ್ಲಿಂದ ಕಳುಹಿಸಿದ್ದಾರೆ ಎಂಬುದು ತಿಳಿದಿಲ್ಲ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ನಂತರ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಬಾಂಬ್ ನಿಷ್ಕ್ರಿಯ ದಳವು ವಿಮಾನವನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿತು. ಇಲ್ಲಿಯವರೆಗೆ, ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ.
ಇದನ್ನೂ ಓದಿ: ದೆಹಲಿಯ ಸ್ಫೋಟದಲ್ಲಿ ಹೊಸ ತಿರುವು; ಕೆಂಪು ಇಕೋಸ್ಪೋರ್ಟ್‌ಗಾಗಿ ಪೊಲೀಸರ ಹುಡುಕಾಟ
ಈ ಘಟನೆಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆ, ಅಗತ್ಯವಿರುವ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ ನಂತರ ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಇಳಿದಿದ್ದಾರೆ ಎಂದು ಹೇಳಿದೆ.
“ವಾರಾಣಸಿಗೆ ಹೋಗುವ ನಮ್ಮ ವಿಮಾನಗಳಲ್ಲಿ ಒಂದಕ್ಕೆ ಭದ್ರತಾ ಬೆದರಿಕೆ ಬಂದಿದೆ. ಶಿಷ್ಟಾಚಾರಕ್ಕೆ ಅನುಗುಣವಾಗಿ, ಸರ್ಕಾರ ನೇಮಿಸಿದ ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿಗೆ ತಕ್ಷಣವೇ ಎಚ್ಚರಿಕೆ ನೀಡಲಾಯಿತು. ಅಗತ್ಯವಿರುವ ಎಲ್ಲಾ ಭದ್ರತಾ ಕಾರ್ಯವಿಧಾನಗಳನ್ನು ತಕ್ಷಣವೇ ಪ್ರಾರಂಭಿಸಲಾಯಿತು. ವಿಮಾನ ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಕಡ್ಡಾಯ ಭದ್ರತಾ ಪರಿಶೀಲನೆಗಳು ಪೂರ್ಣಗೊಂಡ ನಂತರ ವಿಮಾನವನ್ನು ಕಾರ್ಯಾಚರಣೆಗೆ ಒಳಪಡಿಸಲಾಗುತ್ತದೆ” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಬಾಂಬ್ ಎಂದು ಬರೆದು ವ್ಯಕ್ತಿಯ ಹುಚ್ಚಾಟ: ತಡರಾತ್ರಿಯೇ ಲ್ಯಾಂಡ್ ಆದ ವಿಮಾನ!
ಇಂಡಿಗೋಗೆ ಕರೆ ಮಾಡಿದ ಅಪರಿಚಿತ ಭಾರತದ 5 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಬಾಂಬ್ ಸ್ಫೋಟ ಮಾಡುವುದಾಗಿ ಇಂದು ಮಧ್ಯಾಹ್ನ 3.30ರ ಸುಮಾರಿಗೆ ಬೆದರಿಕೆ ಹಾಕಿದ್ದಾನೆ. ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಆತ ಹೇಳಿದ್ದಾನೆ. ಮೂಲಗಳ ಪ್ರಕಾರ, ಈ ಮೆಸೇಜ್ ಅನ್ನು ಆ ಇಮೇಲ್ ಮೂಲಕ ಕಳುಹಿಸಿಲ್ಲ. ಪರ್ಯಾಯ ಡಿಜಿಟಲ್ ವಿಧಾನಗಳ ಮೂಲಕ ಕಳುಹಿಸಲಾಗಿದೆ. ಹೀಗಾಗಿ, ಆತನ ಬಗ್ಗೆ ಪತ್ತೆಹಚ್ಚುವುದು ವಿಳಂಬವಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




