ದೆಹಲಿಯ ಸ್ಫೋಟದಲ್ಲಿ ಹೊಸ ತಿರುವು; ಕೆಂಪು ಇಕೋಸ್ಪೋರ್ಟ್‌ಗಾಗಿ ಪೊಲೀಸರ ಹುಡುಕಾಟ
ದೆಹಲಿ ಕಾರು ಬಾಂಬ್ ದಾಳಿಯ ಬಗ್ಗೆ ಎನ್ಐಎ ತನಿಖೆ ನಡೆಸುತ್ತಿದೆ. ಈ ವೇಳೆ ಬಾಂಬ್ ಸ್ಫೋಟಕ್ಕೆ ಕಾರಣವಾದ ಐ20 ಮಾತ್ರವಲ್ಲದೆ ಇನ್ನೊಂದು ಕಾರಿನ ಬಗ್ಗೆ ಕೂಡ ಇದೀಗ ತನಿಖಾಧಿಕಾರಿಗಳು ಗಮನಹರಿಸಿದ್ದಾರೆ. ಅದೇ ವ್ಯಕ್ತಿಯ ಮಾಲೀಕತ್ವದ ಎರಡನೇ ಕಾರು ಇಕೋಸ್ಪೋರ್ಟ್ ಕಾರಿಗಾಗಿ ಪೊಲೀಸರು ಬೃಹತ್ ಹುಡುಕಾಟ ಆರಂಭಿಸಿದ್ದಾರೆ. ಈ ದಾಳಿಯಲ್ಲಿ ಗಾಯಗೊಂಡ ಜನರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ನವದೆಹಲಿ, ನವೆಂಬರ್ 12: ದೆಹಲಿಯ ಕೆಂಪು ಕೋಟೆ (Red Fort Blast) ಬಳಿ ಸೋಮವಾರ ನಡೆದ ಕಾರು ಸ್ಫೋಟಕ್ಕೆ ಸಂಬಂಧಿಸಿರಬಹುದು ಎಂದು ನಂಬಲಾದ ಕೆಂಪು ಫೋರ್ಡ್ ಇಕೋಸ್ಪೋರ್ಟ್‌ಗಾಗಿ ತನಿಖಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ದೆಹಲಿಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳು, ಪೋಸ್ಟ್‌ಗಳು ಮತ್ತು ಗಡಿ ಚೆಕ್‌ಪೋಸ್ಟ್‌ಗಳನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಸ್ಫೋಟದಲ್ಲಿ ಬಳಸಲಾದ ಹುಂಡೈ i20 ಜೊತೆಗೆ ಶಂಕಿತರು ಇಕೋಸ್ಪೋರ್ಟ್ಸ್ ಕಾರನ್ನು ಕೂಡ ಹೊಂದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಐದು ದೆಹಲಿ ಪೊಲೀಸ್ ತಂಡಗಳು ಪ್ರಸ್ತುತ ಇಕೋಸ್ಪೋರ್ಟ್ ಕಾರಿಗಾಗಿ ಶೋಧ ನಡೆಸುತ್ತಿವೆ. ಈ ಬಗ್ಗೆ ಉತ್ತರ ಪ್ರದೇಶ ಮತ್ತು ಹರಿಯಾಣದ ಪೊಲೀಸ್ ಪಡೆಗಳಿಗೂ ಸಹ ಮಾಹಿತಿ ನೀಡಲಾಗಿದೆ. DL10CK0458 ಸಂಖ್ಯೆಯನ್ನು ಹೊಂದಿರುವ ಕೆಂಪು ಇಕೋಸ್ಪೋರ್ಟ್ ಕಾರನ್ನು ರಾಜೌರಿ ಗಾರ್ಡನ್‌ನಲ್ಲಿ ಈ ಪ್ರಕರಣದ ಪ್ರಮುಖ ಶಂಕಿತ ಉಮರ್ ಉನ್ ನಬಿ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಈ ಕಾರು ಇದೀಗ ನಾಪತ್ತೆಯಾಗಿದೆ.
ಇದನ್ನೂ ಓದಿ: ಆಸ್ಪತ್ರೆಗೆ ತೆರಳಿ ದೆಹಲಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಸೋಮವಾರ ಸಂಜೆ ಲಾಲ್ ಕ್ವಿಲಾ ಮೆಟ್ರೋ ನಿಲ್ದಾಣದ ಗೇಟ್ 1 ಬಳಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ i20 ಕಾರು ಸ್ಫೋಟವಾಗಿತ್ತು. ಇದರಿಂದ 10 ಜನರು ಸಾವನ್ನಪ್ಪಿದ್ದರು. 25ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಫರಿದಾಬಾದ್‌ನಲ್ಲಿ ಇತ್ತೀಚೆಗೆ ಬಹಿರಂಗಗೊಂಡ ಭಯೋತ್ಪಾದಕ ಘಟಕಕ್ಕೂ ಈ ಸ್ಫೋಟಕ್ಕೂ ಸಂಬಂಧವಿದೆ ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಹಲವಾರು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದೆ. ಈ ದಾಳಿಯ ಹಿಂದಿನ ಸಂಪೂರ್ಣ ಜಾಲವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.
Delhi car blast case | All police stations, police posts, and border checkpoints in Delhi have been alerted to look out and search for a red colour Ford Eco Sport car, following investigation which revealed that the suspects had another car in addition to the Hyundai i20. Five…
— ANI (@ANI) November 12, 2025
ಈ ದಾಳಿಯಲ್ಲಿ ಗಾಯಗೊಂಡ ಜನರನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯ ಲೋಕ ನಾಯಕ್ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಎರಡು ದಿನಗಳ ಭೂತಾನ್ ಭೇಟಿ ಮುಗಿಸಿದ ನಂತರ ಪ್ರಧಾನಿ ಮೋದಿ ಭಾರತಕ್ಕೆ ಬಂದಿಳಿದ ನಂತರ ನೇರವಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಅವರು ಆಸ್ಪತ್ರೆಯಲ್ಲಿ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಸ್ಫೋಟಕ್ಕೂ ಮುನ್ನ ಮುಖಕ್ಕೆ ಮಾಸ್ಕ್ ಧರಿಸಿ ಟೋಲ್ ಪ್ಲಾಜಾದಲ್ಲಿ ಕಾಣಿಸಿಕೊಂಡಿದ್ದ ಐ20 ಕಾರು ಚಾಲಕ
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಸಂಭವಿಸಿದ ಭೀಕರ ಸ್ಫೋಟದ ನಂತರ, ಇಂದು ಸಂಜೆ 5.30ಕ್ಕೆ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆಯಲಿದೆ. ಈ ದಾಳಿಯ ನಂತರ ದೆಹಲಿ ಪೊಲೀಸರನ್ನು ಹೆಚ್ಚಿನ ಕಟ್ಟೆಚ್ಚರದಲ್ಲಿ ಇರಿಸಲಾಗಿದ್ದು, ರಾಷ್ಟ್ರ ರಾಜಧಾನಿಯಾದ್ಯಂತ ಭದ್ರತಾ ತಪಾಸಣೆಗಳನ್ನು ಆರಂಭಿಸಲಾಗಿದೆ. ನಗರದ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಅರೆಸೈನಿಕ ಪಡೆಗಳು ಮತ್ತು ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಬಿಗಿ ಭದ್ರತಾ ಕ್ರಮಗಳ ಭಾಗವಾಗಿ ದೆಹಲಿಯನ್ನು ಪ್ರವೇಶಿಸುವ ಮತ್ತು ಹೊರಡುವ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




