ಜ.26ರ ಹಿಂಸಾಚಾರದಲ್ಲಿ ಗಾಯಗೊಂಡ ಪೊಲೀಸರಿಂದ ಪ್ರತಿಭಟನೆ; ಕುಟುಂಬಸ್ಥರು, ನಿವೃತ್ತ ಸಿಬ್ಬಂದಿಯೂ ಭಾಗಿ
ನಮ್ಮ ಮೇಲಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು. ಆದರೆ ಅವರು ಯಾವುದನ್ನೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ತುಂಬ ಆಕ್ರಮಣಕಾರಿ ಮನೋಭಾವದಲ್ಲಿದ್ದು, ಬ್ಯಾರಿಕೇಡ್ಗಳನ್ನು ಮುರಿದರು ಎಂದು ಹೆಡ್ ಕಾನ್ಸ್ಟೆಬಲ್ ಸುನೀತಾ ತಿಳಿಸಿದ್ದಾರೆ.
ದೆಹಲಿ: ಜನವರಿ 26ರಂದು ರೈತ ಪ್ರತಿಭಟನೆಯ ಹೆಸರಲ್ಲಿ ನಡೆದ ಹಿಂಸಾಚಾರದಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಹಲವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಹಾಗೆ, ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಮರಳಿದ ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ನಡೆದ ದಾಳಿಯನ್ನು ಖಂಡಿಸಿ ಇಂದು ಶಹೀದಿ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿದರು.
ಹಿಂಸಾಚಾರದಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿಯ ಕುಟುಂಬದವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹಾಗೇ ನಿವೃತ್ತ ಪೊಲೀಸ್ ಅಧಿಕಾರಿಗಳೂ ತಮ್ಮ ಕುಟುಂಬದೊಟ್ಟಿಗೆ ಭಾಗವಹಿಸಿದ್ದರು. ಪೊಲೀಸರ ಹಕ್ಕು ರಕ್ಷಣೆಗಾಗಿ ಸ್ಥಾಪಿತವಾದ ದೆಹಲಿ ಪೊಲೀಸ್ ಮಹಾಸಂಗ್ ಸಾಥ್ ನೀಡಿದೆ.
ಈ ವೇಳೆ ಎಎನ್ಐ ಜತೆ ಮಾತನಾಡಿದ ಹೆಡ್ ಕಾನ್ಸ್ಟೆಬಲ್ ಅಶೋಕ್ ಕುಮಾರ್, ನಾನು ಅಂದು ಕೆಂಪುಕೋಟೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಅದರಲ್ಲೂ ಪ್ರವೇಶ ದ್ವಾರದ ಬಳಿಯೇ ಇದ್ದೆ. ಒಮ್ಮೆಲೇ ಪ್ರತಿಭಟನಾಕಾರರು ಗುಂಪುಗುಂಪಾಗಿ ಬಂದು, ರಾಷ್ಟ್ರಧ್ವಜದ ಪಕ್ಕದಲ್ಲೇ ಬಾವುಟ ಹಾರಿಸಿದರು. ನಮ್ಮ ಮೇಲೆಯೂ ದಾಳಿ ನಡೆಯಿತು. ಅವರ ಕೈಯಲ್ಲಿ ದೊಡ್ಡ ಬಡಿಗೆಗಳು, ಲಾಂಗ್ಗಳು ಇದ್ದವರು. ನನ್ನ ತಲೆ ಹಾಗೂ ಕಾಲಿಗೆ ಗಾಯವಾಗಿತ್ತು ಎಂದು ಹೇಳಿದರು.
ಹೆಡ್ ಕಾನ್ಸ್ಟೆಬಲ್ ಸುನೀತಾ ಪ್ರತಿಕ್ರಿಯಿಸಿ, ನಮ್ಮ ಮೇಲಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದರು. ಆದರೆ ಅವರು ಯಾವುದನ್ನೂ ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ತುಂಬ ಆಕ್ರಮಣಕಾರಿ ಮನೋಭಾವದಲ್ಲಿದ್ದು, ಬ್ಯಾರಿಕೇಡ್ಗಳನ್ನು ಮುರಿದರು. ವಾಹನಗಳನ್ನೆಲ್ಲ ಧ್ವಂಸ ಮಾಡಿ, ನಮ್ಮ ಮೇಲೆ ಕೂಡ ಹಲ್ಲೆ ನಡೆಸಿದರು ಎಂದು ತಿಳಿಸಿದರು.
What Bengal Thinks Today| ರಾಜಕೀಯ ಸಂಘರ್ಷಕ್ಕಿಳಿದರೆ ಅಭಿವೃದ್ಧಿ ಸೋಲುವುದು ಗ್ಯಾರೆಂಟಿ-ರಾಜ್ಯಪಾಲ ಧನಕರ್