ದೆಹಲಿ ಪೊಲೀಸ್ ಠಾಣೆ ಮುಂದೆ ರಾಹುಲ್ ಗಾಂಧಿ ಧರಣಿ; ಕೊನೆಗೂ ‘ಪೆಲೆಟ್ ಗನ್’ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯ ಸಂಸತ್ ಮಾರ್ಗ ಪೊಲೀಸ್ ಠಾಣೆಯ ಹೊರಗೆ ನಡೆಸಿದ ಸತತ ಧರಣಿಯ ನಂತರ, ದೆಹಲಿ ಪೊಲೀಸರು ಪೆಲೆಟ್ ಗನ್ ಗಾಯದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಎಫ್​ಐಆರ್ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡಿದ್ದ ಯುವಕನೊಂದಿಗೆ ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸುತ್ತಿರುವಾಗ ಈ ಎಫ್‌ಐಆರ್ ದಾಖಲಾಗಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಈ ಎಫ್‌ಐಆರ್ ದಾಖಲಿಸಲಾಗಿದೆ.

ದೆಹಲಿ ಪೊಲೀಸ್ ಠಾಣೆ ಮುಂದೆ ರಾಹುಲ್ ಗಾಂಧಿ ಧರಣಿ; ಕೊನೆಗೂ ಪೆಲೆಟ್ ಗನ್ ಪ್ರಕರಣದಲ್ಲಿ ಎಫ್‌ಐಆರ್ ದಾಖಲು
Rahul Gandhi Dharana
Image Credit source: PTI

Updated on: Aug 21, 2026 | 8:18 PM

ನವದೆಹಲಿ, ಆಗಸ್ಟ್ 21: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ನವದೆಹಲಿಯ ಸಂಸತ್ ಮಾರ್ಗ ಪೊಲೀಸ್ ಠಾಣೆಯ ಹೊರಗೆ ನಡೆಸಿದ ಧರಣಿ ಪ್ರತಿಭಟನೆಯ ನಂತರ, ದೆಹಲಿ ಪೊಲೀಸರು ಜುಲೈ 20ರಂದು ಯುವಕನೊಬ್ಬನ ಮೇಲೆ ನಡೆದಿದ್ದ ಪೆಲೆಟ್ ಗನ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಎಫ್​ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಗಾಯಗೊಂಡಿದ್ದ ಯುವಕ ಸಾಹಿಲ್ ಲೋಚಬ್ ಎಂಬಾತನಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಹುಲ್ ಗಾಂಧಿ ಸಂತ್ರಸ್ತ ಯುವಕನೊಂದಿಗೆ ಪೊಲೀಸ್ ಠಾಣೆಯ ಮುಂದೆ ಧರಣಿ ಕುಳಿತಿದ್ದರು.

ಕಾಂಗ್ರೆಸ್ ಮಾಡಿದ ಆರೋಪಗಳ ಪ್ರಕಾರ, ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾಹಿಲ್ ಲೋಚಬ್ ಎಂಬ ಯುವಕನ ಮೇಲೆ ಪೊಲೀಸರು ಪೆಲೆಟ್ ಗನ್‌ನಿಂದ ದಾಳಿ ನಡೆಸಿದ್ದರು. ಇದರಿಂದಾಗಿ ಯುವಕನ ಕಣ್ಣಿಗೆ ತೀವ್ರ ಗಾಯಗಳಾಗಿದ್ದು, ಆತನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಭೀತಿ ಎದುರಾಗಿದೆ.


ಇದನ್ನೂ ಓದಿ: ‘ಅರಾಜಕತೆಯ ರಾಜಕೀಯ’; ದೆಹಲಿಯ ಪೊಲೀಸ್ ಠಾಣೆ ಹೊರಗೆ ರಾಹುಲ್ ಗಾಂಧಿಯ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

ಎಫ್‌ಐಆರ್ ದಾಖಲಿಸಲು ಹಿಂದೇಟು:

ಈ ಘಟನೆಯ ಕುರಿತು ದೂರು ನೀಡಲು ಹೋದಾಗ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದನ್ನು ಪ್ರತಿಭಟಿಸಿ ಅವರು ದೆಹಲಿ ಸಂಸತ್ ಮಾರ್ಗ ಪೊಲೀಸ್ ಠಾಣೆಯ ಡಿಸಿಪಿ ಕಚೇರಿಗೆ ತೆರಳಿ ಧರಣಿ ಸತ್ಯಾಗ್ರಹ ಆರಂಭಿಸಿದರು. ನೂರಾರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.


ಬಿಜೆಪಿ ಆಕ್ರೋಶ:

ರಾಹುಲ್ ಗಾಂಧಿ ಅವರ ಈ ಪ್ರತಿಭಟನೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಹಿರಿಯ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಮಾತನಾಡಿ, “ರಾಹುಲ್ ಗಾಂಧಿ ಯಾವುದೇ ಅನುಮತಿಯಿಲ್ಲದೆ ಪೊಲೀಸ್ ಠಾಣೆ ಮುಂದೆ ಕುಳಿತು ‘ಅರಾಜಕತೆಯ ರಾಜಕೀಯ’ ಮಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ‘ವಂದೇ ಮಾತರಂ’ ವಿವಾದದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.


ಆದರೆ, ಕಾಂಗ್ರೆಸ್ ನಾಯಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮತ್ತು ಸಂಸತ್ ಮಾರ್ಗ ಪೊಲೀಸ್ ಠಾಣೆಯ ಮುಂದೆ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ, ದೆಹಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us