2500 ಕೋಟಿ ರೂ.ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡ ದೆಹಲಿ ಪೊಲೀಸರು; ಅಫ್ಘಾನಿಸ್ತಾನದಿಂದ ಪೂರೈಕೆ, ಪಾಕಿಸ್ತಾನದಿಂದ ಧನ ಸಹಾಯ !
2500 ಕೋಟಿ ರೂ. ಬೆಲೆಯ ಈ ಡ್ರಗ್ಸ್ ರವಾನೆ ಪ್ರಕರಣವನ್ನು ಭೇದಿಸಿದ ನಂತರ ಮಾತನಾಡಿದ ದೆಹಲಿ ವಿಶೇಷ ಸೆಲ್ನ ನೀರಜ್ ಠಾಕೂರ್, ಮಾದಕ ದ್ರವ್ಯದ ವಿರುದ್ಧ ಕಾರ್ಯಾಚರಣೆ ಕಳೆದ ಕೆಲವು ತಿಂಗಳುಗಳಿಂದಲೂ ನಡೆಯುತ್ತಿದೆ ಎಂದಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಡ್ರಗ್ಸ್ ಜಾಲವನ್ನು ದೆಹಲಿ ಪೊಲೀಸರು ಬೇಧಿಸಿದ್ದಾರೆ. ಸುಮಾರು 354 ಕೆಜಿಗಳಷ್ಟು ಒಳ್ಳೆಯ ಗುಣಮಟ್ಟದ ಹೆರೋಯಿನ್ನ್ನು ವಶಪಡಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ. ಈ 354 ಕೆಜಿ ಹೆರಾಯಿನ್ ಸುಮಾರು 2500 ಕೋಟಿ ರೂಪಾಯಿ ಬೆಲೆಬಾಳುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಮೂವರು ಹರ್ಯಾಣದವರಾಗಿದ್ದು, ಒಬ್ಬ ದೆಹಲಿಯವನು ಎನ್ನಲಾಗಿದೆ. ದೆಹಲಿ ವಿಶೇಷ ಸೆಲ್ನ ಪೊಲೀಸ್ ಸಿಬ್ಬಂದಿ ಬೇಧಿಸಿದ ಮಾದಕದ್ರವ್ಯ ಪ್ರಕರಣಗಳಲ್ಲೇ ಇದು ಅತ್ಯಂತ ದೊಡ್ಡ ಕೇಸ್ ಎಂದು ಹೇಳಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಶಂಕಿತರ ವಿಚಾರಣೆಯನ್ನು ಅದಾಗಲೇ ಪೊಲೀಸರು ಪ್ರಾರಂಭಿಸಿದ್ದಾರೆ.
2500 ಕೋಟಿ ರೂ. ಬೆಲೆಯ ಈ ಡ್ರಗ್ಸ್ ರವಾನೆ ಪ್ರಕರಣವನ್ನು ಭೇದಿಸಿದ ನಂತರ ಮಾತನಾಡಿದ ದೆಹಲಿ ವಿಶೇಷ ಸೆಲ್ನ ನೀರಜ್ ಠಾಕೂರ್, ಮಾದಕ ದ್ರವ್ಯದ ವಿರುದ್ಧ ಕಾರ್ಯಾಚರಣೆ ಕಳೆದ ಕೆಲವು ತಿಂಗಳುಗಳಿಂದಲೂ ನಡೆಯುತ್ತಿದೆ. ಅಫ್ಘಾನಿಸ್ತಾನದಿಂದ ಡ್ರಗ್ಸ್ ನಮ್ಮಲ್ಲಿಗೆ ಬರುತ್ತಿದೆ. ನಂತರ ಮುಂಬೈನಿಂದ ದೆಹಲಿಗೆ ಸಮುದ್ರ ಮಾರ್ಗದ ಮೂಲಕ, ಕಂಟೈನರ್ಗಳಲ್ಲಿ ತರಲಾಗುತ್ತದೆ. ಆದರೆ ಈ ಕಂಟೈನರ್ಗಳನ್ನು ತುಂಬ ಗುಪ್ತವಾಗಿ ಸಾಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಅಫ್ಘಾನಿಸ್ತಾನದಿಂದ ತರಲಾದ ಡ್ರಗ್ಸ್ನ್ನು ಮಧ್ಯಪ್ರದೇಶದ ಶಿವಪುರಿ ಸಮೀಪ ಇರುವ ಕಾರ್ಖಾನೆಯಲ್ಲಿ ಇನ್ನಷ್ಟು ಸಂಸ್ಕರಿಸಲಾಗುತ್ತದೆ. ಅದನ್ನು ಅಡಗಿಸಿಡಲು ಫರಿದಾಬಾದ್ನಲ್ಲಿ ಬಾಡಿಗೆ ಮನೆಯನ್ನೂ ಪಡೆಯಲಾಗಿದೆ. ಆದರೆ ಇದರ ಲಿಂಕ್ ಆಪರೇಟರ್ ಅಫ್ಘಾನಿಸ್ತಾನದಲ್ಲೇ ಕುಳಿತಿರುತ್ತಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಪಂಜಾಬ್ಗೂ ಈ ಹೆರಾಯಿನ್ ಪೂರೈಕೆಯಾಗುತ್ತದೆ. ಇನ್ನು ಇದಕ್ಕೆ ಹಣಕಾಸು ಸಹಕಾರ ಪಾಕಿಸ್ತಾನದಿಂದ ಸಿಗುತ್ತಿದೆ ಎಂಬ ಮಾಹಿತಿಯೂ ಸಿಕ್ಕಿದೆ ಎಂದು ಹೇಳಿದ್ದಾರೆ.
ಕಳೆದ ತಿಂಗಳು ದೆಹಲಿಯ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್ ಸಾಗಣೆ ಜಾಲವನ್ನು ಭೇದಿಸಿತ್ತು. 8 ಮಂದಿ ಬಂಧಿಸಲ್ಪಟ್ಟಿದ್ದರು. 22 ಲಕ್ಷ ಸೈಕೋಟ್ರೋಪಿಕ್ ಮಾತ್ರೆಗಳು ಮತ್ತು 245 ಕೆಜಿ ಹೆರಾಯಿನ್ಗಳನ್ನು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: Noise Pollution: ಪಟಾಕಿ ಸಿಡಿಸುವ ಮುನ್ನ ಎಚ್ಚರ; ಈ ಸಿಟಿಯಲ್ಲಿ ಶಬ್ದ ಮಾಲಿನ್ಯ ಮಾಡಿದವರಿಗೆ 1 ಲಕ್ಷ ರೂ. ದಂಡ!
Delhi Police seizes 350 kg of heroin and 4 arrested